Advertisement
ನಿರ್ಮಾಣ: ದೇವರಾಜ್ ಆರ್
Related Articles
Advertisement
ಈ ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ ವ್ಯವಸ್ಥೆಯ ವಿರುದ್ಧದ ಹೋರಾಟ ಎನ್ನಬಹುದು. ಸಿನಿಮಾ ಪ್ರೇಕ್ಷಕನಿಗೆ ಹೆಚ್ಚು ಹತ್ತಿರವಾಗಲು ಕಾರಣ ಸರಳ ಕಥೆ ಮತ್ತು ಪ್ರೇಕ್ಷಕನೇ ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದಾನೋ ಎಂಬ ಭಾವ. ಆ ಕಾರಣದಿಂದ ಚಿತ್ರ ತುಂಬಾ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಈ ಮೂಲಕ ನಿರ್ದೇಶಕ ಮಂಸೋರೆ ಮತ್ತೂಮ್ಮೆ ಹೊಸ ಬಗೆಯ ಚಿತ್ರ ನೀಡಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದ ಕಥೆ ತುಂಬಾ ಸರಳ. ಸರ್ಕಾರಿ ಕಚೇರಿಗೆ ಅಲೆದಾಡಿ, ಅಧಿಕಾರಿಗಳ ಲಂಚಾವತಾರದಿಂದ ಬೇಸತ್ತ ಹೆಣ್ಣು ಮಗಳೊಬ್ಬಳು ಯಾವ ರೀತಿ ಸಿಡಿದೇಳುತ್ತಾಳೆ, ಅಧಿಕಾರಿಗಳಿಗೆ ಶಿಕ್ಷೆ ಕೊಡಲು ಆಕೆ ಹುಡುಕುವ ಮಾರ್ಗವೇನು ಎಂಬುದು ಚಿತ್ರದ ಒನ್‌ಲೈನ್.
ಚಿತ್ರದ ಕಥೆ ಅದೆಷ್ಟೋ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕನ್ನಡಿ ಹಿಡಿದಂತಿರುವುದರಿಂದ ಪ್ರೇಕ್ಷಕರಿಗೆ ಚಿತ್ರ ಹೆಚ್ಚು ಹತ್ತಿರವಾಗುತ್ತದೆ. ಚಿತ್ರದ ಪ್ರಮುಖ ಪಾತ್ರಧಾರಿ ಗೀತಾ ಪಟ್ಟಂತಹ ಕಷ್ಟವನ್ನು ಇವತ್ತಿಗೂ ಅನೇಕರು, ಅದರಲ್ಲೂ ಗ್ರಾಮೀಣ ಭಾಗದ ಮಂದಿ ಎದುರಿಸುತ್ತಿದ್ದಾರೆ. ಆದರೆ, ವ್ಯವಸ್ಥೆಯ ವಿರುದ್ಧ ಹೋಗುವ ಧೈರ್ಯದ ಕೊರತೆಯಿಂದ ಎಲ್ಲವನ್ನು ಸಹಿಸಿಕೊಂಡ, ಆ ವ್ಯವಸ್ಥೆಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಆದರೆ, “ಆಕ್ಟ್ 1978′ ಅದೆಲ್ಲದರ ಪ್ರತಿನಿಧಿಯಾಗಿದೆ.
ಈ ಸಿನಿಮಾದಲ್ಲಿ ಹೆಚ್ಚು ಮಾತಿಲ್ಲ. ಮೌನದಲ್ಲೇ ಎಲ್ಲವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಚಿತ್ರದ ಪ್ರಮುಖ ಪಾತ್ರವೊಂದು ಸಿನಿಮಾದುದ್ದಕ್ಕೆ ಸಾಗಿಬಂದರೂ ಒಂದೇ ಒಂದು ಸಂಭಾಷಣೆ ಇಲ್ಲ. ಅದಕ್ಕೊಂದು ಕಾರಣವೂ ಇದೆ.ಅದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಅನವಶ್ಯಕ ರೋಚಕತೆಯಿಂದ ಮುಕ್ತವಾಗಿರುವ ಚಿತ್ರಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕಥೆಯ ಆಶಯಕ್ಕೆ ಎಲ್ಲೂ ಧಕ್ಕೆಯಾಗದಂತೆ ಇಡೀ ಸಿನಿಮಾವನ್ನುಕಟ್ಟಿಕೊಟ್ಟಿರೋದು ಮಂಸೋರೆ ಜಾಣ್ಮೆ.
ಇದನ್ನೂ ಓದಿ : ಬೈಪಾಸ್ ರೋಡ್‌ನಲ್ಲಿ ನಿಂತ ನೇಹಾ ಸಕ್ಸೇನಾ
ಇಲ್ಲಿ ಸರ್ಕಾರಿ ಅಧಿಕಾರಿಗಳ ಜೊತೆ ಸರ್ಕಾರದ ನಿರ್ಲಕ್ಷ ತನವನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಒಂದು ಉತ್ತಮ ಸಂದೇಶದೊಂದಿಗೆ ಚಿತ್ರ ತಾರ್ಕಿಕ ಅಂತ್ಯ ಕಾಣುತ್ತದೆ. ಸಿನಿಮಾ ಮುಗಿದು ಹೊರಬರುವ ಪ್ರೇಕ್ಷಕನ ಕಣ್ಣಂಚಲ್ಲಿ ಒಂದನಿ …. ಇಡೀ ಸಿನಿಮಾವನ್ನು ಆವರಿಸಿ ಕೊಂಡಿರೋದು ನಟಿ ಯಜ್ಞಾ ಶೆಟ್ಟಿ.
ಪಾತ್ರದ ಆಶಯದಿಂದ ತುಂಬಾ ನೈಜವಾಗಿ ಕಾಣಿಸಿಕೊಂಡು, ನಟಿಸಿದ್ದಾರೆ. ಹೆಚ್ಚು ಮಾತಿಲ್ಲದ ಹಾಗೂ ತೂಕವಿರುವ ಕೆಲವೇ ಕೆಲವು ಮಾತುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಗರ್ಭಿಣಿಯೊಬ್ಬಳ ಅಸಹಾಯಕತೆ, ಭವಿಷ್ಯದ ಕನಸು, ವ್ಯವಸ್ಥೆ ಬದಲಾಗಬೇಕೆಂಬ ಆಶಯವನ್ನು ಪ್ರತಿನಿಧಿಸುವ ಗೀತಾಳ ಪಾತ್ರದಲ್ಲಿ ಯಜ್ಞಾ ಮಿಂಚಿದ್ದಾರೆ. ಉಳಿದಂತೆ ಬಿ.ಸುರೇಶ್ ಮಾತೇ ಇಲ್ಲದ, ಆದರೂ “ಪ್ರೇಕ್ಷಕರ ಜೊತೆ ಮಾತನಾಡುವ’ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.
ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ರಾಘು ಶಿವಮೊಗ್ಗ, ಅವಿನಾಶ್, ದತ್ತಣ್ಣ, ಶ್ರುತಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಟಿ.ಕೆ.ದಯಾನಂದ್, ವೀರೇಂದ್ರ ಮಲ್ಲಣ್ಣ ಅವರ ಚಿತ್ರಕಥೆ, ಸಂಭಾಷಣೆ ಚಿತ್ರದ ತೂಕ ಹೆಚ್ಚಿಸಿದೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ಪೂರಕವಾಗಿದೆ. ಸತ್ಯಹೆಗಡೆಯವರ ಛಾಯಾಗ್ರಹಣದಲ್ಲಿ “ಆಕ್ಟ್’ ಸುಂದರ
– ರವಿಪ್ರಕಾಶ್ ರೈ