ಸಾಮಾನ್ಯವಾಗಿ ಒರಾಯನ್ ಮಾಲ್ ಎಂದರೆ ಶಾಪಿಂಗ್ ಎಂದರ್ಥ. ಅದರಲ್ಲೂ ವೀಕೆಂಡ್ ಎಂದರೆ ಒರಾಯನ್ ಮಾಲ್‌ನಲ್ಲಿ ಶಾಪಿಂಗ್ ಬ್ಯಾಗ್‌ನೊಂದಿಗೆ ಓಡಾಡುವವರೇ ಕಾಣಸಿಗುತ್ತಾರೆ. ಆದರೆ, ಈ ವೀಕೆಂಡ್‌ನಲ್ಲಿ ಒರಾಯನ್ ಮಾಲ್‌ನ ದೃಶ್ಯ ಬದಲಾಗಿತ್ತು. ಶಾಪಿಂಗ್ ಬ್ಯಾಗ್‌ಗಿಂತ ಸಿನಿಮಾ ಬ್ರೌಶರ್ ಕೈಯಲ್ಲಿ ಹಿಡಿದು, ಕುತೂಹಲದಿಂದ ಸಿನಿಮಾ ಪಟ್ಟಿ ವೀಕ್ಷಿಸುತ್ತಾ, ಸಮಯ ನೋಡುತ್ತಾ ಒರಾಯನ್ ಮಾಲ್‌ನ ಟಾಪ್ ಫ್ಲೋರ್‌ನತ್ತ ಹೆಜ್ಜೆ ಹಾಕುತ್ತಿದ್ದವರೇ ಜಾಸ್ತಿ. ಅದಕ್ಕೆ ಕಾರಣ ಚಿತ್ರೋತ್ಸವ. 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ.
ಹೌದು, ನಿಮಗೆ ಗೊತ್ತಿರುವಂತೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ನಗರದ ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. ದಿನವೊಂದಕ್ಕೆ 45ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ವಿವಿಧ ದೇಶಗಳ ಅಪರೂಪದ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವುದು ಸಿನಿಮಾಸಕ್ತರ ಖುಷಿಗೆ ಕಾರಣವಾಗಿದೆ. ಆ ಖುಷಿ ಶನಿವಾರ ಒರಾಯನ್ ಮಾಲ್‌ನಲ್ಲಿ ಕಾಣುತ್ತಿತ್ತು. ಚಿತ್ರೋತ್ಸವ ಆರಂಭದ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರ ಚಿತ್ರೋತ್ಸವಕ್ಕೆ ಜನ ನುಗ್ಗಿ ಬಂದಿದ್ದರು.
ವೀಕೆಂಡ್ ಅನ್ನು ಸಿನಿಮಾದಲ್ಲಿ ಕಳೆಯಲು ನಿರ್ಧರಿಸಿದ ಪರಿಣಾಮ ಬೇರೆ ಬೇರೆ ಕ್ಷೇತ್ರದ ಮಂದಿ ಸಿನಿಮೋತ್ಸಕ್ಕೆ ಬಂದಿದ್ದರು. ಹಾಗಾಗಿಯೇ ಸಿನಿಮಾ ಹಾಲ್‌ಗಳು ತುಂಬಿ ತುಳುಕುತ್ತಿದ್ದವು. ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು. ಕೆಲವರಂತೂ ಸತತವಾಗಿ ಐದು ಸಿನಿಮಾಗಳನ್ನು ನೋಡಲು ಸಿದ್ಧರಾಗಿಯೇ ಬಂದಿದ್ದರು.
ಶನಿವಾರದ ಬೆಳಗ್ಗಿನ ಪ್ರದರ್ಶಗಳಲ್ಲಿ ಮುಖ್ಯವಾಗಿ ಇರಾನಿ ಚಿತ್ರ “ಲೀಫ್ ಆಫ್ ಲೈಫ್’, ಜರ್ಮನ್ ಚಿತ್ರಗಳಾದ “ದಿ ಫೈನಲ್ ಜರ್ನಿ’, ವೆಸ್ಟರ್ನ್’, ಇಸ್ರೇಲ್ ಚಿತ್ರ “ದಿ ಕೇಕ್ ಮೇಕರ್’, ಟರ್ಕಿ ಚಿತ್ರ “ಯಲ್ಲೋ ಹೀಟ್’ಗಳನ್ನು ಕಣ್ತುಂಬಿಕೊಳ್ಳಲು ಸಿನಿಮಾಸಕ್ತರ ಕಾತುರ ಎದ್ದು ಕಾಣುತ್ತಿತ್ತು. “ಜಗತ್ತಿನ ಎಲ್ಲಾ ಭಾಷೆಯ ಚಿತ್ರಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಅವಕಾಶ ವರ್ಷಕ್ಕೊಮ್ಮೆ ಬೆಂಗಳೂರು ಚಿತ್ರೋತ್ಸವದ ಮೂಲಕ ಸಿಗುತ್ತಿದೆ.
ಇವತ್ತು ವೀಕೆಂಡ್. ವಾರವಿಡೀ ದುಡಿದ ಆಯಾಸವನ್ನು ಒಂದಷ್ಟು ಸಿನಿಮಾಗಳನ್ನು ನೋಡಿ ಕಳೆಯಬೇಕೆಂಬ ಆಸೆಯಿಂದ ಬಂದಿದ್ದೇನೆ’ ಎಂಬುದು ಚಿತ್ರೋತ್ಸವಕ್ಕೆ ಬಂದ ಸಿನಿಮಾ ಪ್ರೇಮಿಯೊಬ್ಬರ ಮಾತು. ಚಿತ್ರೋತ್ಸವದ ಬಗ್ಗೆ ಮಾತನಾಡುವ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ, “ತುಂಬಾ ವರ್ಷಗಳಿಂದ ಬೇರೆ ಬೇರೆ ಚಿತ್ರೋತ್ಸವಗಳನ್ನು ನೋಡುತ್ತಾ ಬಂದಿದ್ದೇನೆ.
ಕಳೆದ 10 ವರ್ಷಗಳಿಂದ ಬೆಂಗಳೂರು ಚಿತ್ರೋತ್ಸವವನ್ನು ನೋಡುತ್ತಿದ್ದೇನೆ. ತುಂಬಾ ಅಚ್ಚುಕಟ್ಟಾಗಿ ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಚಿತ್ರೋತ್ಸವ ತುಂಬಾ ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿ ತರುತ್ತಿದ್ದಾರೆ. ನನ್ನ ನಿರ್ದೇಶನದ “ಮಾರ್ಚ್ 22′ ಚಿತ್ರದ ಪ್ರದರ್ಶನ ಕೂಡಾ ಚಿತ್ರೋತ್ಸವದಲ್ಲಿ ಆಗಲಿದೆ’ ಎನ್ನುತ್ತಾರೆ. ಇಂದು ಕೂಡಾ ಚಿತ್ರೋತ್ಸವ ಸಿನಿ ಪ್ರೇಮಿಗಳಿಂದ ಗಿಜಿಗುಡುವ ನಿರೀಕ್ಷೆ ಇದೆ.