Advertisement

ಬಡವರಿಗೆ ಕೃಷಿ ಜಮೀನು ಕೊಡಿಸಲು ಚಳವಳಿ

12:15 PM Dec 11, 2017 | Team Udayavani |

ಬೆಂಗಳೂರು: ಭೂರಹಿತ ದಲಿತ ಹಾಗೂ ಬಡ ಕುಟುಂಬಗಳಿಗೆ ಸರ್ಕಾರದಿಂದ ಕೃಷಿ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಠಾವಧಿ ಚಳವಳಿ ಆರಂಭಿಸುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 

Advertisement

ನಿಡುಮಾಮಿಡಿ ಮಹಸಂಸ್ಥಾನ ಮಠದ ಮಾನವ ಧರ್ಮ ಪೀಠದಿಂದ ಭಾನುವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಈ ವರ್ಷದ “ಮಾನವತಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ಭರವಸೆ ಕೊಟ್ಟು ವರ್ಷ ಆಯಿತು. ಆದರೆ, ಈವರೆಗೆ ಏನೂ ಆಗಿಲ್ಲ. ಹಾಗಾಗಿ ಆದಷ್ಟು ಬೇಗ ಬೇಡಿಕೆ ಈಡೇರಿಸಿದಿದ್ದರೆ, ಕೆಲವೇ ದಿನಗಳಲ್ಲಿ ಅನಿರ್ದಿಷ್ಠಾವಧಿ ಚಳವಳಿಗೆ ಚಾಲನೆ ನೀಡುತ್ತೇನೆ ಎಂದರು. 

ಬಡವರು ಮತ್ತು ದಲಿತರಿಗೆ ಗೌರವಧನ ಮತ್ತು ಹಕ್ಕಿನ ಬದುಕು ಕೊಡಬೇಕು ಅನ್ನುವುದು ನಮ್ಮ ಹಕ್ಕೋತ್ತಾಯ. ಇದಕ್ಕಾಗಿ ಸರ್ಕಾರದ ಬಳಿ ಇರುವ ಅನುಪಯುಕ್ತ ಮತ್ತು ಸಾಗುವಳಿ ಯೋಗ್ಯ ಜಮೀನಿನಲ್ಲಿ ಭೂರಹಿತ ದಲಿತ ಹಾಗೂ ಬಡ ಕುಟುಂಬಗಳಿಗೆ ಕೃಷಿ ಜಮೀನು ಮಂಜೂರು ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಡಲಾಗಿತ್ತು. ಹಿಂದಿನ ವರ್ಷ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಈ ಬಗ್ಗೆ ಘೋಷಣೆ ಸಹ ಮಾಡಿದ್ದರು.

ಆದರೆ. ವರ್ಷವಾದರೂ ಏನೂ ಆಗಿಲ್ಲ. ಈ ಸಂಬಂಧ ನಾನು ಮುಖ್ಯಮಂತ್ರಿಯವರಿಗೆ ನಾಲ್ಕು ಪತ್ರ ಬರೆದಿದ್ದೇನೆ. ಆ ಪತ್ರಗಳು ಕಂದಾಯ ಇಲಾಖೆ ಕಾರ್ಯದರ್ಶಿ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದೆ ಎಂಬ ಉತ್ತರ ಮುಖ್ಯಮಂತ್ರಿಯವರಿಂದ ಬರುತ್ತದೆ. ಪತ್ರಗಳು ಅತ್ತಿಂದಿತ್ತ ಅಲೆದಾಡುತ್ತಲೇ ಇವೆ. ಕ್ರಮ ಏನಾಯಿತು ಎಂದು ಕೇಳುವ ಯೋಗ್ಯತೆ ಅವರಿಗಿಲ್ವ. ಇದೊಂದು ಜಡ ಸರ್ಕಾರ, ಅಧಿಕಾರಿಗಳಿಗೆ ಮಾನವೀಯತೆ ಇಲ್ಲ ಎಂದು ದೊರೆಸ್ವಾಮಿ ತಮ್ಮ ಸಿಟ್ಟು ಹೊರ ಹಾಕಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ನಿಡಿಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ ಒಂದು ಪಕ್ಷ, ಒಂದು ಸಿದ್ಧಾಂತ ಅಥವಾ ಒಂದು ಸಂಘಟನೆಯ ಸರ್ವಾಧಿಕಾರ ಸ್ಥಾಪನೆ ಆಗಬಾರದು. ಅದು ಪ್ರಜಾಸತ್ತೆಗೆ ಅಪಾಯಕಾರಿ. ಮಾನವ ಹಕ್ಕುಗಳ ರಕ್ಷಣೆ, ಮನುಕುಲದ ರಕ್ಷಣೆ ಆಗಿದೆ.

Advertisement

ಕೋಮುವಾದ ಮತ್ತು ಉಗ್ರವಾದದಿಂದ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಉಗ್ರವಾದ ಭಾರತವನ್ನು ಪಾಕ ಶಾಲೆಯನ್ನಾಗಿ ಮಾಡಿಕೊಂಡಿದೆ. ಕೋಮುವಾದಿಂದ ಉಗ್ರವಾದ ಬೆಳೆಯುತ್ತದೆ. ಅದೇ ರೀತಿ ಉಗ್ರವಾದ ಕೋಮುವಾದ ಬೆಳೆಯಲು ಕಾರಣವಾಗುತ್ತದೆ. ದೇಶವನ್ನು ಸಮಗ್ರವಾಗಿ ಕಟ್ಟುವ ನಾಯಕತ್ವದ ಕೊರತೆ ನಮ್ಮನ್ನು ಕಾಡುತ್ತಿದೆ ಎಂದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌, ಸಿಪಿಎಂ ಮುಖಂಡ ಸಿದ್ದನಗೌಡ ಪಾಟೀಲ್‌, ಅಹಿಂದ ಮುಖಂಡ ಪ್ರೊ. ಎನ್‌.ವಿ. ನರಸಿಂಹಯ್ಯ, ಮಹಿಳಾ ಪರ ಹೋರಾಟಗಾರ್ತಿ ಡಾ. ಲೀಲಾ ಸಂಪಿಗೆ, ಚಿಂತಕ ಪ್ರೊ. ನಾಗರಾಜಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. 

ದೇವೇಗೌಡರನ್ನು “ರಾಜಕೀಯ ಪಟು’ ಎನ್ನಬೇಕಾ?: “ಅಧಿಕಾರದ ಅವಕಾಶಕ್ಕಾಗಿ ಬಿಜೆಪಿ ಅಥವಾ ಕಾಂಗ್ರೆಸ್‌ ಜತೆ ಹೋಗುವ ಸಮಯ ಸಾಧಕ ದೇವೇಗೌಡರನ್ನು “ರಾಜಕೀಯ ಪಟು’ ಎನ್ನಬೇಕಾ?’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಪ್ರಶ್ನಿಸಿದ್ದಾರೆ.

“ಈಗಿನ ರಾಜಕೀಯ ಶುದ್ಧವಾಗಿಲ್ಲ. ಯಾವ ಪಕ್ಷಕ್ಕೂ ಜನಪರ ಸಿದ್ಧಾಂತವಿಲ್ಲ. ಅಧಿಕಾರದ ಹತ್ತರ ಬಂದಾಗ ಯಾವ ಬದ್ಧತೆಯೂ ಇರುವುದಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಜತೆಗೆ ಹೋಗುವ ದೇವೇಗೌಡರ ಸಮಯ ಸಾಧಕತನಕ್ಕೆ ಏನೆಂದು ಹೇಳಬೇಕು? ಹೀಗೆ ಮಾಡುವ ದೇವೇಗೌಡರನ್ನು ರಾಜಕೀಯ ಪಟು ಎಂದು ಕರೆಯಬಹುದಾ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next