ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಯ ಪರ್ವವನ್ನು ಬಿಂಬಿಸಿ ಕಾಶ್ಮೀರದ ಇಬ್ಬರು ರ್ಯಾಪರ್‌ಗಳು ಹಾಡಿರುವ ಹಾಡು ಅಂತರ್ಜಾಲದಲ್ಲಿ ಸಂಚಲನವನ್ನೇ ಮೂಡಿಸಿದೆ.
“ಬದಲ್ತಾ ಕಾಶ್ಮೀರ್” ಎಂಬ ಶೀರ್ಷಿಕೆಯ ರ್ಯಾಪ್ ಸಾಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿದ್ದು, ಕೆಲವೇ ದಿನಗಳಲ್ಲಿ 20 ಲಕ್ಷ ವೀಕ್ಷಣೆಯನ್ನು ಪಡೆದಿದೆ.
ರಾಸಿಖ್ ಶೇಖ್(ಎಂಸಿ ರಾ) ಮತ್ತು ಹುಮೈರಾ(8ಎಂಆರ್) ಎಂಬ ರ್ಯಾಪರ್‌ಗಳು ಸುಮಾರು 3 ನಿಮಿಷಗಳ ಕಾಲ ಈ ಹಾಡು ಹಾಡಿದ್ದಾರೆ. ಡಿ.3ರಂದು ಇದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಮೂಲದ 15 ಅಥವಾ ಚಿನಾರ್ ಕಾರ್ಪ್ಸ್‌ನ ಕಾರ್ಪ್ಸ್ ಕಮಾಂಡರ್ ಲೆ| ಜ| ರಾಜೀವ್ ಘಾಯ್ ಸೇರಿದಂತೆ ಹಲವು ಗಣ್ಯರು ಈ ಹಾಡನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
370ನೇ ವಿಧಿಯ ರದ್ದತಿ ಬಳಿಕ ಕಾಶ್ಮೀರದಲ್ಲಿ ಹೇಗೆ ಬದಲಾವಣೆಯ ಗಾಳಿ ಬೀಸಿತು, ಧಾರ್ಮಿಕವಾಗಿ ಎಲ್ಲರನ್ನೊಳಗೊಂಡ ರಾಜ್ಯವಾಗಿ ಹೇಗೆ ಕಣಿವೆ ಬದಲಾಯಿತು, ಹೆಣ್ಣುಮಕ್ಕಳು ಹೇಗೆ ತಮ್ಮಿಚ್ಛೆಯ ಉಡುಗೆ ತೊಡುವ ಸ್ವಾತಂತ್ರ್ಯ ಪಡೆದರು ಎಂಬುದನ್ನು ಹಾಡಿನಲ್ಲಿ ಬಿಂಬಿಸಲಾಗಿದೆ. ತ್ರಿವರ್ಣ ಧ್ವಜವೇ ನನ್ನ ಅಸ್ಮಿತೆ, ಹಿಂದುಸ್ಥಾನವೇ ನನ್ನ ದೇಶ ಎಂಬ ಸಾಲೂ ಈ ಹಾಡಿನಲ್ಲಿದ್ದು, ಕೇಳಿದವರನ್ನು ರೋಮಾಂಚನಗೊಳಿಸುವಂತಿದೆ.