Advertisement

ಹೊರವಲಯಕ್ಕೆ ಶಾಲೆ ಸ್ಥಳಾಂತರಿಸಿ!

09:28 AM Sep 06, 2019 | Team Udayavani |

ಬೆಂಗಳೂರು: ನಗರದ ಪ್ರಮುಖ ಪ್ರದೇಶಗಳಲ್ಲಿರುವ (ಸಿಬಿಡಿ) ಶಾಲೆ, ಕಾಲೇಜುಗಳು ತಮ್ಮ ವಾಹನಗಳನ್ನು ಶಾಲೆ ಆವರಣದೊಳಗೆ ನಿಲ್ಲಿಸಿಕೊಳ್ಳಬೇಕು, ಇಲ್ಲದಿದ್ದರೆ ಶಾಲೆಯನ್ನೇ ನಗರದ ಹೊರ ವಲಯಕ್ಕೆ ಸ್ಥಳಾಂತರಿಸಿ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಎಂಬ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ವಾಹನಗಳ ನಿಲುಗಡೆಗೆ ಶಾಲಾ ಆಡಳಿತ ಮಂಡಳಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಈಗಾಗಲೇ ಕೆಲ ಶಾಲಾ ಆಡಳಿತ ಮಂಡಳಿಗಳು ಸಂಚಾರ ಪೊಲೀಸರ ಸೂಚನೆ ಮೇರೆಗೆ ಸಂಸ್ಥೆ ಆವರಣದಲ್ಲಿಯೇ ವಾಹನ ನಿಲ್ಲಿಸುತ್ತಿದ್ದಾರೆ. ಆದರೆ, ಕೆಲವರು ಈಗಲೂ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾರ್ಕಿಂಗ್‌ ದೊಡ್ಡ ಸಮಸ್ಯೆ: ಬೆಂಗಳೂರಿನಲ್ಲಿ ಪಾರ್ಕಿಂಗ್‌ ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಬಿಬಿಎಂಪಿ ನೂತನ ಆಯಕ್ತರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದ್ದು, ದಿನವಿಡೀ ಮನೆ ಅಥವಾ ಕಚೇರಿಗಳ ಮುಂದೆ ವಾಹನ ಪಾರ್ಕಿಂಗ್‌ ಮಾಡುವ ವ್ಯಕ್ತಿಗಳಿಂದ ಪಾರ್ಕಿಂಗ್‌ ಶುಲ್ಕ ಸಂಗ್ರಹ ಮಾಡುವಂತೆ ಕೋರಲಾಗಿದೆ. ಅಲ್ಲದೆ, ನಗರದಲ್ಲಿ ರಸ್ತೆ ಡಾಬರೀಕರಣ ವೇಳೆ ಕಾಮಗಾರಿ ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಪತ್ರದ ಮೂಲಕ ಕೋರಲಾಗಿದೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು.

ದಂಡ ಮೊತ್ತ ಪರಿಷ್ಕರಣೆ ಆದಾಯಕ್ಕಾಗಿ ಅಲ್ಲ: ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತ ಪರಿಷ್ಕೃರಣೆ ಕುರಿತು ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಒಟ್ಟು 24 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಳ ಮಾಡಿದೆ. ಆದರೆ, ಅದು ಆದಾಯ ಸಂಗ್ರಹ ಮಾಡಲು ಅಲ್ಲ. ಕೆಲ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯು ಇದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಬಹಳಷ್ಟು ರಸ್ತೆ ಅಪಘಾತಗಳು ಸಂಭವಿಸಿ ಅಮಾಯಕರು ಮೃತಪಡುತ್ತಿದ್ದಾರೆ. ವಾಹನ ಸವಾರರಿಗೆ ಎಚ್ಚರಿಕೆ ನೀಡಲು ದಂಡ ಪರಿಷ್ಕೃತ ಮಾಡಲಾಗಿದೆ. ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಲೇಬೇಕು. ದಂಡ ಸಂಗ್ರಹ ಮಾಡುವಾಗ ಕೆಲ ವಾಹನ ಸವಾರರು ಪೊಲೀಸ್‌ ಸಿಬ್ಬಂದಿ ಮೇಲೆಗೆ ಹಲ್ಲೆ ಅಥವಾ ವಾಗ್ವಾದ ನಡೆಸುವ ಪ್ರಕರಣಗಳು ಕಳೆದ ಮೂರು ವರ್ಷಗಳಲ್ಲಿ ಅಧಿಕವಾಗಿದ್ದು, ಪ್ರತಿ ವರ್ಷ ಒಂದು ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ನಡು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿ ಹಾಗೂ ಕಾನೂನಿನ ಮೇಲೆ ಗೌರವ ಇರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಿಗ್ನಲ್ ದೀಪ ಅಳವಡಿಕೆ ಕ್ರಮ: ಈ ಹಿಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಕೆಲ ನಾಗರಿಕರು ನಗರದ ಕೆಲ ಜಂಕ್ಷನ್‌ಗಳಲ್ಲಿ ಸಿಗ್ನಲ್ ದೀಪ ಅಳವಡಿಸಿಲ್ಲ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಸಿಗ್ನಲ್ ದೀಪ ಅಳವಡಿಸಲು ಸೂಚಿಸಲಾಗಿದೆ. ಹಾಗೆಯೇ ನಿಯಮ ಉಲ್ಲಂಘನೆ ವೇಳೆ ಕೆಲ ವಾಹನ ಸವಾರರು ಸಂಚಾರ ಪೊಲೀಸರ ಜತೆ ವಾಗ್ವಾದ ನಡೆಸುತ್ತಿದ್ದಾರೆ. ಹೀಗಾಗಿ ಘಟನೆಯ ಸತ್ಯಾಸತ್ಯತೆ ತಿಳಿಯಲು ಸಂಚಾರ ಸಿಬ್ಬಂದಿಗೆ ಬಾಡಿ ಕ್ಯಾಮೆರಾ ನೀಡಲಾಗಿದೆ. ಸದ್ಯ 600 ಕ್ಯಾಮೆರಾ ವಿತರಿಸಿದ್ದು, ಒಂದೆರಡು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿತರಣೆ ಮಾಡಲಾಗುವುದು ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.

ಆಟೋ, ಕ್ಯಾಬ್‌ ಚಾಲಕರಿಗೆ ಎಚ್ಚರಿಕೆ:

ಓಲಾ, ಉಬರ್‌ ಹಾಗೂ ಆಟೋ ರಿಕ್ಷಾಗಳು ಸಾರ್ವಜನಿಕ ಸೇವೆ ಮಾಡಲು ಬಂದಿದ್ದು, ಹಣ ಸಂಪಾದನೆ ಮಾಡಲು ಅಲ್ಲ. ಆದರೆ, ಕೆಲ ಚಾಲಕರು ಪ್ರಯಾಣಿ ಕರು ಕರೆದಕಡೆ ಹೋಗದಿರಿವುದು, ಹೆಚ್ಚುವರಿ ಹಣ ಸಂಗ್ರಹ ಮಾಡುವುದು, ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಅಂತಹ ದೂರುಗಳು ಬಂದಲ್ಲಿ ಕಾನೂನು ಕ್ರಮಕೈಗೊಳ್ಳುತ್ತೇವೆ. ಅಗತ್ಯ ವಿದ್ದಲ್ಲಿ ಬಂಧನ ಸಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
24 ಗಂಟೆ ಸಿಬ್ಬಂದಿ ನಿಯೋಜನೆ:

ಕೇಂದ್ರ ಸಂಚಾರ ವಲಯದ ವ್ಯಾಪ್ತಿಯಲ್ಲಿರುವ ಸಿಬಿಡಿ ಪ್ರದೇಶಗಳಲ್ಲಿ ದಿನದ 24 ಗಂಟೆಗಳು ಭಾರೀ ಸಂಚಾರ ದಟ್ಟಣೆ ಇರುತ್ತದೆ. ಹೀಗಾಗಿ ಈ ಭಾಗದ ಪ್ರಮುಖ ಜಂಕ್ಷನ್‌ಗಳಲ್ಲಿ ದಿನದ 24 ಗಂಟೆಯೂ ಸಂಚಾರ ಸಿಬ್ಬಂದಿ ನಿಯೋಜಿಸಲಾಗುವುದು. ಹಾಗೆಯೇ ನಗರದ ಭಾರೀ ವಾಹನಗಳು ಓಡಾಡುವ 12 ರಸ್ತೆಗಳನ್ನು(ಕಾರಿಡಾರ್‌) ಗುರುತಿಸಲಾಗಿದ್ದು, ಪ್ರತಿ ಕಾರಿಡಾರ್‌ಗೆ ಇನ್‌ಸ್ಪೆಕ್ಟರ್‌ವೊಬ್ಬರನ್ನು ನೇಮಕ ಮಾಡಲಾಗುವುದು. ಈ ಕಾರಿಡಾರ್‌ಗಳ ರಸ್ತೆ ಮಧ್ಯೆ ಯಾವುದೇ ವಾಹನ ನಿಲುಗಡೆ ಮಾಡದಂತೆ ಎಚ್ಚರಿಕೆ ವಹಿಸಿ, ವಾಹನ ವೇಗ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next