Advertisement

ತೀರಾ ಹದೆಗೆಟ್ಟ ಮೊಟ್ಟೆತ್ತಡ್ಕ-ಮುಂಡೂರು-ತಿಂಗಳಾಡಿ ರಸ್ತೆ

06:15 AM Feb 25, 2019 | |

ನರಿಮೊಗರು: ನಿತ್ಯ ನೂರಾರು ವಾಹನಗಳು ಸಂಚರಿಸುವ ಮೊಟ್ಟೆತ್ತಡ್ಕ-ಮುಂಡೂರು-ತಿಂಗಳಾಡಿ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿ.ಪಂ.ಗೆ ಸೇರಿದ ಈ ರಸ್ತೆಯನ್ನು ದುರಸ್ತಿಗೊಳಿಸಲು ರಸ್ತೆಯ ಬಳಕೆದಾರರು ಆಗ್ರಹಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿಯನ್ನೂ ನೀಡಿದ್ದಾರೆ. ಸುಮಾರು ವರ್ಷಗಳ ಹಿಂದೆ ಡಾಮರು ಆಗಿದ್ದ ಈ ರಸ್ತೆ ಇದೀಗ ಹದಗೆಟ್ಟಿದೆ. ಅಲ್ಲಲ್ಲಿ ಡಾಮರು ಕಿತ್ತು ಹೋಗಿ ಹೊಂಡ, ಗುಂಡಿ ನಿರ್ಮಾಣಗೊಂಡಿದೆ.

Advertisement

ಈ ರಸ್ತೆಯ ಮೂಲಕ ನಿತ್ಯ ನೂರಾರು ವಾಹನಗಳ ಓಡಾಟ ಇದೆ. ಮುಂಡೂರು ರಸ್ತೆಯಾಗಿ ತಿಂಗಳಾಡಿಯವರೆಗೆ ಬಸ್‌ ಸಂಚಾರವೂ ಇದೆ. ಮುಂಡೂರು, ಪಂಜಳ, ಕುರಿಯ ಭಾಗಕ್ಕೆ ಆಟೋ ರಿಕ್ಷಾ ಸರ್ವೀಸ್‌ ಕೂಡಾ ಈ ರಸ್ತೆಯಲ್ಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೈತ್ತಾಡಿಯಿಂದ ಕೂಡುರಸ್ತೆವರೆಗೆ ಅಂದಾಜು 7 ಕಿ.ಮೀ. ರಸ್ತೆ ಹದಗೆಟ್ಟಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ಉಪಯೋಗಿಸುವವರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಈ ರಸ್ತೆಯು ಪಂಜಳ, ಮುಂಡೂರು ಭಾಗದ ಜನತೆಗೆ ಪ್ರಮುಖ ರಸ್ತೆಯಾಗಿದ್ದು, ದೈನಂದಿನ ಚಟುವಟಿಕೆಗಳಿಗೆ ಪೇಟೆಗೆ ಹೋಗಿ ಬರಲು ಇದೇ ರಸ್ತೆ ಈ ಭಾಗದವರಿಗೆ ಪ್ರಮುಖ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಕಾಯುತ್ತಿದ್ದಾರೆ.

ವಾಹನ ಚಾಲಕರು ಕಂಗಾಲು
ದಿನನಿತ್ಯ ಬಾಡಿಗೆ ಮಾಡಿ ಸಂಸಾರ ಸಾಗಿಸುತ್ತಿರುವ ಈ ಭಾಗದ ಆಟೋ ಚಾಲಕರು ರಸ್ತೆ ಹದಗೆಟ್ಟಿರುವುದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ತಾವು ದುಡಿದ ಬಹುಪಾಲು ಹಣ ಈಗ ಗ್ಯಾರೇಜ್‌ಗೆ ವ್ಯಯವಾಗುತ್ತಿದೆ. ಶೀಘ್ರದಲ್ಲೇ ಮರು ಡಾಮರೀಕರಣಗೊಳಿಸುವ ಮೂಲಕ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಭಿನ್ನವಿಸಿಕೊಂಡಿದ್ದಾರೆ.

ಕಷ್ಟದ ಪರಿಸ್ಥಿತಿ
ಮೊಟ್ಟೆತ್ತಡ್ಕ-ಮುಂಡೂರು ರಸ್ತೆ ಹಾಳಾಗಿರುವುದರಿಂದ ರಿಕ್ಷಾ  ಬಾಡಿಗೆ ಮಾಡುವ ನಮ್ಮಂತವರಿಗೆ ಭಾರೀ ತೊಂದರೆಯಾಗಿದೆ. ದುಡಿದ ಹಣವೆಲ್ಲಾ ಗ್ಯಾರೆಜ್‌ಗೆ ಕೊಡಬೇಕಾಗುತ್ತಿದೆ. ಸಂಜೆ ಮನೆಗೆ ಹೋಗುವಾಗ ಖಾಲಿ ಕೈಯಲ್ಲಿ ಹೋಗಬೇಕಾದ ಕಷ್ಟದ ಸ್ಥಿತಿ ನಮ್ಮದಾಗಿದೆ ಎಂದು ಆಟೋ ಚಾಲಕರಾದ ನಿಝಾರ್‌ ಅಜ್ಜಿಕಟ್ಟೆ ಮತ್ತು ಸುರೇಶ್‌ ಕೋಟ್ಯಾನ್‌ ಅವರು ಹೇಳಿದ್ದಾರೆ.

ಭಾರೀ ತೊಂದರೆ
ಪುತ್ತೂರಿನಿಂದ ಮುಂಡೂರು ರಸ್ತೆಯಲ್ಲಿ ಬಸ್‌ ಸಂಚಾರ ಕೇವಲ 2 ಬಾರಿ ಮಾತ್ರ ಇದೆ. ಮುಖ್ಯವಾಗಿ ಪುತ್ತೂರಿಗೆ ವಿದ್ಯಾರ್ಜನೆಗೆ ಹೋಗುತ್ತಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದೇ ಬಸ್ಸನ್ನು ಅವಲಂಭಿಸಿದ್ದಾರೆ. ಕೆಲವೊಮ್ಮೆ ಬಸ್‌ ತಪ್ಪಿದರೆ ಇತರ ವಾಹನಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಮನೆಯನ್ನು ಸೇರುತ್ತಿದ್ದರು. ಆದರೆ ರಸ್ತೆ ಹದಗೆಟ್ಟ ಪರಿಣಾಮ ಈ ರಸ್ತೆಯಲ್ಲಿ ಇತರ ವಾಹನಗಳ ಸಂಚಾರವೂ ವಿರಳವಾಗಿದೆ. ಬದಲಿ ರಸ್ತೆಯಾಗಿ ಸುತ್ತು ಬಳಸಿ ಅನೇಕ ವಾಹನ ಸವಾರರು ತಮ್ಮ ವಾಹನವನ್ನು ಓಡಿಸುತ್ತಿದ್ದಾರೆ. ರಸ್ತೆ ಹದಗೆಟ್ಟ ಕಾರಣಕ್ಕೆ ಆಟೋ ಚಾಲಕರಿಗೂ ಸಮಯಕ್ಕೆ ಸರಿಯಾಗಿ ಪುತ್ತೂರಿಗೆ ಮುಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

Advertisement

ದುರಸ್ತಿ ಕಾರ್ಯಕ್ಕೆ ಅನುದಾನ
ರಸ್ತೆಗಳ ಅಭಿವೃದ್ಧಿಗೆ ಜಿ.ಪಂ.ನಲ್ಲಿ ದೊಡ್ಡ ಮೊತ್ತ ಲಭ್ಯವಿಲ್ಲ. ಸಣ್ಣ ಮೊತ್ತವನ್ನು ಅನೇಕ ರಸ್ತೆಗಳಿಗೆ ಇಡಬೇಕಾಗುತ್ತದೆ. ಆದರೂ ಮುಂಡೂರು ರಸ್ತೆ ದುರಸ್ತಿಗೆ ಪಿಎಂಜಿಎಸ್‌ವೈ, ಎನ್‌ಆರ್‌ಇಜಿಎ ಕನ್ವರ್ಜೆನ್ಸ್‌ ಮೂಲಕ 3.60 ಲಕ್ಷ ರೂ. ಹಣವನ್ನು ಪ್ಯಾಚ್‌ವರ್ಕ್‌ಗೆ ಇಟ್ಟಿದ್ದೇನೆ.
– ಮೀನಾಕ್ಷಿ ಶಾಂತಿಗೋಡು,
ಜಿ.ಪಂ. ಅಧ್ಯಕ್ಷರು

ಪ್ಯಾಚ್‌ವರ್ಕ್‌ಗೆ ಹಣ ಮಂಜೂರು
ರಸ್ತೆಯನ್ನು ಮಳೆ ಹಾನಿ ಪರಿಹಾರದಡಿಯಲ್ಲಿ ಸೇರಿಸಿ ಅನುದಾನ ಕೊಡಬೇಕು ಎಂದು ನಾವು ಸಂಬಂಧಪಟ್ಟವರಿಗೆ ಬೇಡಿಕೆ ಇಟ್ಟಿದ್ದೆವು. ಆದರೆ ಅದು ಅಪ್ರೂವಲ್‌ ಆಗಿಲ್ಲ. ಸದ್ಯಕ್ಕೆ ಟಾಸ್ಕ್   ಫೋರ್ಸ್‌ ಮುಖಾಂತರ 5 ಲಕ್ಷ ರೂ.ಪ್ಯಾಚ್‌ ವರ್ಕ್‌ಗೆಂದು ಅನುದಾನ ಮಂಜೂರುಗೊಂಡಿದೆ.
– ಶೃತಿ, ಜಿ.ಪಂ.
ಎಂಜಿನಿಯರ್‌

 ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next