Advertisement

ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ 90ಕ್ಕೂ ಹೆಚ್ಚು ಪ್ರಕರಣ ದಾಖಲು

03:45 AM Jul 07, 2017 | Team Udayavani |

ಸ್ಟೇಟ್‌ಬ್ಯಾಂಕ್‌: ಬಸ್‌ ಪ್ರಯಾಣಕ್ಕೆ ಸಂಬಂಧಿಸಿ ಸಾರ್ವಜನಿ ಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ  ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಗುರುವಾರ ಸ್ಟೇಟ್‌ಬ್ಯಾಂಕ್‌ ಬಳಿ ಕಾರ್ಯಾಚರಣೆ ನಡೆಸಿ ಮೋಟಾರು ವಾಹನ ಕಾಯ್ದೆಯ ವಿವಿಧ ನಿಯಮ ಉಲ್ಲಂಘನೆಗೆ ಸಂಬಂಧಿಸಿ 90ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದರು. 

Advertisement

ಕರ್ಕಶ ಹಾರ್ನ್ಗೆ ಸಂಬಂಧಿಸಿ 65 ಕೇಸು, ಎತ್ತರದ ಮೆಟ್ಟಿಲುಗಳ ಕುರಿತಂತೆ 15 ಪ್ರಕರಣ, ಟಿಕೆಟ್‌ ಮೆಶಿನ್‌ ಇಲ್ಲದ ಹಾಗೂ ಟಿಕೆಟ್‌ ಕೊಡದ 7 ಬಸ್‌ಗಳ ನಿರ್ವಾಹಕರ ವಿರುದ್ಧ ಹಾಗೂ ವಲಯ ನಿಯಮ ಉಲ್ಲಂಘಿಸಿದ 6 ಆಟೋ ರಿಕ್ಷಾ ಚಾಲಕರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡರು. ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು ಸುಮಾರು 6 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. 

ಪರವಾನಿಗೆ ಉಲ್ಲಂಘಿಸಿ ಕಾರ್ಯಾಚರಿಸಿದ 8 ಕಾಂಟ್ರ್ಯಾಕ್ಟ್  ಕ್ಯಾರೇಜ್‌ ಮತ್ತು 2 ಸರ್ವಿಸ್‌ ಬಸ್‌ಗಳ 
ವಿರುದ್ಧ ಬುಧವಾರ ಕೇಸು ದಾಖಲಿಸಲಾಗಿತ್ತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌.ಹೆಗಡೆ ಅವರು ತಿಳಿಸಿದ್ದಾರೆ. 

ಮುಂಬರುವ ದಿನಗಳಲ್ಲಿ  ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಜಂಟಿ ಸಹಯೋಗದಲ್ಲಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು. 

ಬಸ್‌ಗಳ ಮೆಟ್ಟಿಲುಗಳು ನೆಲದಿಂದ 52 ಸೆಂಟಿ ಮೀಟರ್‌ ಎತ್ತರದಲ್ಲಿ ಇರಬೇಕೆಂಬ ನಿಯಮವಿದೆ. ಆದರೆ ಕೆಲವು ಬಸ್‌ಗಳ ಮಾಲಕರು ಈ ನಿಯಮವನ್ನು  ಪಾಲನೆ ಮಾಡಿಲ್ಲ. ಮೆಟ್ಟಿಲು ಎತ್ತರದಲ್ಲಿ ಇರುವುದರಿಂದ ಮಕ್ಕಳು, ಮಹಿಳೆಯರು ಮತ್ತು  ಹಿರಿಯ ನಾಗರಿಕರಿಗೆ ಬಸ್‌ ಹತ್ತಿ, ಇಳಿಯಲು ಕಷ್ಟವಾಗುತ್ತಿದೆ. ಇಂತಹ ಬಸ್‌ಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

Advertisement

ಬಸ್‌ಗಳ ನಿಯಮ ಉಲ್ಲಂಘನೆ
ಕಾಂಟ್ರ್ಯಾಕ್ಟ್  ಕ್ಯಾರೇಜ್‌ ಬಸ್‌ಗಳು ಸರ್ವಿಸ್‌ ಬಸ್‌ ನಿಲ್ದಾಣ ಪ್ರವೇಶಿಸುವಂತಿಲ್ಲ. ಹಾಗೆಯೇ ಕೆಲವು ಸರ್ವಿಸ್‌ ಬಸ್‌ಗಳಿಗೆ ಮಲ್ಲಿಕಟ್ಟೆ, ಕಂಕನಾಡಿ ತನಕ ಮಾತ್ರ ಪರವಾನಿಗೆ ಇರುತ್ತದೆ ಎಂದರು. 

ಪರವಾನಿಗೆ ಇರುವ ಬಸ್‌ಗಳಲ್ಲಿ ಕೆಲವು ಬಸ್‌ಗಳು ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿವೆ.  ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಿವರಿಸಿದರು.

ಕಾರ್ಯಾಚರಣೆ 
ಮಂಗಳೂರು ನಗರದೊಳಗೆ ಸಂಚರಿಸಲು 2500ರಷ್ಟು ಆಟೋರಿಕ್ಷಾಗಳು ಮಾತ್ರ ಪರವಾನಿಗೆ ಪಡೆದಿವೆ. ಆದರೆ ಈಗ ಸುಮಾರು 6500ರಷ್ಟು ಆಟೋಗಳು ಓಡಾಡುತ್ತಿವೆ. ನಗರದ ಹೊರ ವಲಯಲ್ಲಿ ಗ್ರಾಮೀಣ ಪರವಾನಿಗೆಯನ್ನು ಪಡೆದು ನಗರದಲ್ಲಿ ಬಾಡಿಗೆ ಮಾಡುವ ರಿಕ್ಷಾ ಚಾಲಕ/ ಮಾಲಕರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು. 
ಗುರುವಾರ ನಡೆದ ಕಾರ್ಯಾಚರಣೆಯ ಸಂದರ್ಭ ದಲ್ಲಿ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಮೋಹನ್‌ ಕೊಟ್ಟಾರಿ, ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಅಧ್ಯಕ್ಷ  ಅಜೀಜ್‌ ಪರ್ತಿಪಾಡಿ  ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next