Advertisement

ಇಂಡಿ ಏತ ನೀರಾವರಿಗೆ ಮೋಟಾರ್‌ ಸಮಸ್ಯೆ

04:42 PM Mar 25, 2022 | Team Udayavani |

ಕೆಂಭಾವಿ: ಮೂರು ಜಿಲ್ಲೆಗಳ ರೈತರ ಬವಣೆ ನೀಗಿಸಲು ಪಟ್ಟಣದಲ್ಲಿ ತಲೆ ಎತ್ತಿರುವ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಒಂದಾದ ಗುತ್ತಿ ಬಸವಣ್ಣ (ಇಂಡಿ) ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ ಪ್ರದೇಶದಲ್ಲಿ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದ್ದು, ರೈತರ ಗೋಳಾಟ ಮುಂದುವರಿದಿದೆ.

Advertisement

ಯಾದಗಿರಿ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಸುಮಾರು 150 ಗ್ರಾಮಗಳ ಸಾವಿರಾರು ಹೆಕ್ಟೇರ್‌ ಭೂಮಿಗೆ ನೀರುಣಿಸುವ ಈ ಯೋಜನೆ ತಾಂತ್ರಿಕ ತೊಂದರೆಯಿಂದ ಹಲವು ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಎಂಟು ಬೃಹತ್‌ ಗಾತ್ರದ ನೀರೆತ್ತುವ ಮೋಟಾರ್‌ಗಳನ್ನು ಅಳವಡಿಸಿದ್ದು, ಅದರಲ್ಲಿ ಆರು ಯಂತ್ರಗಳು ಅವಿರತವಾಗಿ ಕಾರ್ಯ ಮಾಡಬೇಕೆಂಬುದು ಸರ್ಕಾರದ ನಿಯಮ. ಆದರೆ ಈಗ ಹಲವಾರು ವರ್ಷಗಳಿಂದ ಕೇವಲ ಮೂರು ಯಂತ್ರಗಳು ಮಾತ್ರ ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಕೊನೆಯ ಭಾಗದ ರೈತರು ಜಮೀನಿಗೆ ನೀರು ಹರಿಯದೇ ಕಂಗಾಲಾಗಿದ್ದಾರೆ. ಬುಧವಾರದಿಂದ ಮತ್ತೂಂದು ಯಂತ್ರ ಕೈಕೊಟ್ಟಿದ್ದು, ಎರಡು ಮೋಟಾರ್‌ ಗಳ ಮೂಲಕ ಕಾಲುವೆಗೆ ನೀರು ಹರಿಸಲಾಗುತ್ತಿದೆ.

ಈಗಾಗಲೇ ಕಾಲುವೆಯಲ್ಲಿ ಕಂಡು ಬಂದಿರುವ ಸಮಸ್ಯೆಗಳ ಪರಿಹಾರಕ್ಕೆ ಶಾಸಕ ಅಭಯ ಪಾಟೀಲ ನೇತೃತ್ವದ ನೀರಾವರಿ ಸಲಹಾ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಜಯಪುರ ಜಿಲ್ಲೆಯ ಸಿಂದಗಿ, ದೇವರಹಿಪ್ಪರಗಿ, ಇಂಡಿ ಶಾಸಕರು ಈ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿ ಉದ್ಭವಿಸುತ್ತಿರುವ ಸಮಸ್ಯೆಗಳ ಪರಿಹಾರ ಸತತ ಶ್ರಮ ವಹಿಸಿದ್ದರೂ ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಗುರುವಾರ ನಡೆದ ವಿಧಾನಸಭೆ ಕಲಾಪದಲ್ಲಿ ಈ ಸಮಸ್ಯೆ ಕುರಿತು ಸಿಂದಗಿ ಶಾಸಕ ರಮೇಶ ಭೂಸನೂರ ಸರ್ಕಾರದ ಗಮನ ಸೆಳೆದರು.

Advertisement

ತಾಂತ್ರಿಕ ಸಮಸ್ಯೆಗೆ ಕಾರಣ

ಇಲ್ಲಿ ಅಳವಡಿಸಿರುವ ಬೃಹತ್‌ ಯಂತ್ರಗಳನ್ನು (ಒಂದು ಯಂತ್ರ ಸುಮಾರು 2800 ಎಚ್‌ಪಿ ಸಾಮರ್ಥ್ಯ) ಅಳವಡಿಸಿ ಹಲವು ವರ್ಷಗಳಾಗಿದ್ದು, ಅವುಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಕಾಮಗಾರಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬೆಂಗಳೂರಿನ ಕಂಪನಿಯಾಗಿದ್ದು, ಆ ಕಂಪನಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದು ರೈತರ ವಾದವಾಗಿದೆ. ಯಂತ್ರಗಳ ಬಿಡಿಭಾಗಗಳು ಕರ್ನಾಟಕದಲ್ಲಿ ದೊರೆಯದ ಕಾರಣ ದುರಸ್ತಿಗೆ ಹಿನ್ನಡೆಯಾಗುತ್ತಿದೆ ಎಂಬುದು ಪರಿಣಿತರ ಅಭಿಪ್ರಾಯ.

ಜಿ.ಬಿ. ಏತ ನೀರಾವರಿಯಿಂದ ನಮ್ಮ ಭಾಗದ ರೈತರು ಹಲವು ರೀತಿಯ ತೊಂದರೆಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಬೆಳೆಗಳು ಒಣಗುತ್ತಿದ್ದು, ಇದರಿಂದ ಮನನೊಂದ ರೈತರು ತಾಂಬಾ ಭಾಗದಲ್ಲಿ ಪ್ರತಿಭಟನೆ ಹಾದಿ ತುಳಿದಿದ್ದಾರೆ. ಈ ಕುರಿತು ಗುರುವಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾವನೆ ಮಾಡಿದ್ದು, ಇಲ್ಲಿಯವರೆಗೂ ಸರ್ಕಾರ ಯಾವುದೇ ಉತ್ತರ ನೀಡಿಲ್ಲ – ರಮೇಶ ಭೂಸನೂರ, ಸಿಂದಗಿ ಶಾಸಕ

ನೀರಿನ ರಭಸಕ್ಕೆ ಯಂತ್ರಗಳು ಆಗಾಗ ಕೆಡುತ್ತಿವೆ. ಹೊಸ ಯಂತ್ರಗಳ ಅಳವಡಿಕೆಗೆ ಟೆಂಡರ್‌ ಕರೆದಿದ್ದು, ಅವುಗಳ ಜೋಡಣೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಅಲ್ಲಿಯವರೆಗೆ ಇರುವ ಯಂತ್ರಗಳ ನಿರ್ವಹಣೆ ಮಾಡಿ ಆದಷ್ಟು ರೈತರಿಗೆ ನೀರೊದಗಿಸಲು ಪ್ರಯತ್ನ ಮಾಡಲಾಗುವುದು. ವೆಂಕಟೇಶ, ಎಇಇ. ಜಿ.ಬಿ. ಏತ ನೀರಾವರಿ

 

–  ಗುಂಡಭಟ್ಟ ಜೋಷಿ

Advertisement

Udayavani is now on Telegram. Click here to join our channel and stay updated with the latest news.

Next