Advertisement
ರಾಜ್ಯದಲ್ಲಿ ಈಗಾಗಲೇ ಬೆಂಗಳೂರು ಮತ್ತು ಧಾರವಾಡದಲ್ಲಿ ಭಾರೀ ಗಾತ್ರದ ವಾಹನ ಚಾಲನ ತರಬೇತಿ ನೀಡುವ ಎರಡು ಕೇಂದ್ರಗಳಿವೆ. ಈ ತರಬೇತಿ ಕೇಂದ್ರದಲ್ಲಿ ಈಗಾಗಲೇ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಕರಾವಳಿ ಪ್ರದೇಶದ ಜನರು ಈ ತರಬೇತಿಯಿಂದ ವಂಚಿತರಾಗಿದ್ದರು. ನೂತನ ತರಬೇತಿ ಕೇಂದ್ರದಿಂದ ಭಾರೀ ವಾಹನ ಚಲಾಯಿಸಲು ಆಸಕ್ತರಿರುವ ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳೊಳಗೆ ತರಬೇತಿ ಕಾರ್ಯಗಳು ಆರಂಭವಾಗಲಿವೆ.
Related Articles
Advertisement
ಭಾರೀ ವಾಹನಗಳಾದ ಟ್ಯಾಂಕರ್, ಬಸ್, ಟ್ರೈಲರ್, ಜೆಸಿಬಿ ಸಹಿತ ಈಗಿರುವ ತಂತ್ರಜ್ಞಾನದ ವಾಹನಗಳಿಗೆ ತರಬೇತಿ ನೀಡುವುದರೊಂದಿಗೆ ಆಧುನಿಕ ತಂತ್ರ ಜ್ಞಾನದ ವಾಹನಗಳಿಗೂ ತರಬೇತಿಗೆ ಇಲ್ಲಿ ಅವಕಾಶವಿದೆ. ಸಾಮಾನ್ಯವಾಗಿ ಹೊಸ ತಂತ್ರಜ್ಞಾನದ ಎಂಟರಿಂದ ಒಂಬತ್ತು ಗೇರ್‌ಗಳ ಘನ ವಾಹನಗಳು ರಸ್ತೆಗೆ ಬಂದಾಗ ಈಗಿನ ಚಾಲಕರಿಗೆ ವೈಜ್ಞಾನಿಕವಾಗಿ ಚಾಲನೆ ಮಾಡುವ ತಂತ್ರಗಾರಿಕೆ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ವಾಹನ ಸಂಸ್ಥೆಗಳ ತಂತ್ರಜ್ಞರು ಈ ವಾಹನದ ಬಗ್ಗೆ ಮಾಹಿತಿ ಮತ್ತು ಚಾಲನೆಯ ತರಬೇತಿ ನೀಡಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಸಾರಿಗೆ ಇಲಾಖೆಯ ಆರ್‌ಟಿಒ ರಮೇಶ್ ವರ್ಣೇಕರ್ ತಿಳಿಸಿದ್ದಾರೆ.
ತಮಿಳುನಾಡಿನ ಚಾಲಕರಿಗೆ ಬೇಡಿಕೆ ;
ಈಗಿರುವ ಭಾರೀ ಗಾತ್ರದ ವಾಹನಗಳಲ್ಲಿ ತಮಿಳುನಾಡಿನ ಚಾಲಕರು ಹೆಚ್ಚಾಗಿ ಕಂಡು ಬರುತ್ತಾರೆ. ವಿದೇಶಗಳಲ್ಲಿಯೂ ಘನ ವಾಹನಗಳ ಚಾಲ ನೆಗೆ ತಮಿಳುನಾಡಿನ ಚಾಲಕರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆರಂಭ ವಾಗಲಿರುವ ಈ ಕೇಂದ್ರದಲ್ಲಿ ತರಬೇತಿ ಪಡೆದರೆ ಇಲ್ಲಿ ಸರ್ಟಿಫಿಕೆಟ್‌ನೊಂದಿಗೆ ಈ ಸಂಸ್ಥೆಯಲ್ಲಿ ಕಲಿತ ಚಾಲಕರಿಗೂ ಬೇಡಿಕೆ ಸಾಧ್ಯವಿದ್ದು, ಆಗ ತಮಿಳುನಾಡಿನ ಚಾಲಕರಂತೆ ಮಂಗಳೂರಿನ ಚಾಲಕರಿಗೂ ಆದ್ಯತೆ ಹೆಚ್ಚಲು ಸಾಧ್ಯವಿದೆ ಎನ್ನುತ್ತಾರೆ ಆರ್‌ಟಿಒ ರಮೇಶ್ ವರ್ಣೇಕರ್.
ಈಗಾಗಲೇ ಇಂತಹ ತರಬೇತಿ ನೀಡುವ ಸಂಸ್ಥೆಗಳನ್ನು ಈ ಕೇಂದ್ರ ನಿರ್ವಹಣೆ ಮಾಡಲು ಟೆಂಡರ್ ಕರೆದಿದ್ದು ಮುಂದಿನ ತಿಂಗಳಲ್ಲಿ ಈ ಟೆಂಡರ್ ಕಾರ್ಯಪೂರ್ಣಗೊಂಡು ಗುಣಮಟ್ಟದ ತರಬೇತಿ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಅಭಿವೃದ್ಧಿಗೆ ಪೂರಕ :
ಉಳ್ಳಾಲ ತಾಲೂಕು ಆಗಿ ಪೂರ್ಣ ಪ್ರಮಾಣದ ಕಾರ್ಯ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭಾರೀ ವಾಹನ ತರಬೇತಿ ಕೇಂದ್ರ ಆರಂಭವಾಗುತ್ತಿರುವುದು ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ನೂತನ ಕೇಂದ್ರವನ್ನು ನಡೆಸಲು ಟೆಂಡರ್ ಕರೆಯಲಾಗಿದ್ದು, ಈಗಾಗಲೇ ಇಂತಹ ತರಬೇತಿ ನೀಡುವ ಉನ್ನತ ಸಂಸ್ಥೆ ತರಬೇತಿಯ ಜವಾಬ್ದಾರಿ ವಹಿಸಲಿದ್ದು, ಈ ಕೇಂದ್ರದಿಂದ ಯುವ ಚಾಲಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
ಜ. 30ಕ್ಕೆ ತರಬೇತಿ ಕೇಂದ್ರ ಉದ್ಘಾಟನೆ :
ನೂತನವಾಗಿ ನಿರ್ಮಾಣ ಗೊಂಡಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ಜ. 30ರಂದು ಉದ್ಘಾಟನೆಯಾಗಲಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹಿತ ಸಂಸದ ನಳಿನ್ ಕುಮಾರ್ ಕಟೀಲು, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು.ಟಿ. ಖಾದರ್ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರಕಾರವಿದ್ದಾಗ ಈ ಯೋಜನೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಂದಿದ್ದೆ. 2018ರಲ್ಲಿ ಶಿಲಾನ್ಯಾಸ ನಡೆದು ಎರಡು ವರ್ಷದಲ್ಲಿ ನೂತನ ಕೇಂದ್ರದ ಕಾಮಗಾರಿ ಸಂಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಲಘು ವಾಹನಗಳ ತರಬೇತಿ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ 7.5 ಕೋಟಿ ರೂ.ಗಳ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದು, ಐದು ಎಕರೆ ಪ್ರದೇಶಗಳಲ್ಲಿ ಈ ಕಾಮಗಾರಿ ನಡೆಯಲಿದೆ. ಇದರೊಂದಿಗೆ ಉಳ್ಳಾಲ ತಾಲೂಕು ಆಗುವ ಹಿನ್ನೆಲೆಯಲ್ಲಿ ಆರ್‌ಟಿಒ ಕೇಂದ್ರ ಈ ವ್ಯಾಪ್ತಿಯಲ್ಲಿ ಆರಂಭವಾಗಲಿದ್ದು ಪ್ರಸ್ತಾವವನ್ನು ಸಲ್ಲಿಸಲಾಗಿದೆ. -ಯು.ಟಿ. ಖಾದರ್, ಶಾಸಕರು
ನೂತನ ಕೇಂದ್ರದಲ್ಲಿ ಚಾಲಕರಿಗೆ ಭಾರೀ ಗಾತ್ರದ ವಾಹನ ತರಬೇತಿಯೊಂದಿಗೆ ಈಗಾಗಲೇ ಚಾಲಕರಾಗಿರುವವರು ಲೈಸನ್ಸ್ ನವೀಕರಿಸುವ ಸಂದರ್ಭದಲ್ಲಿ ಅವರಿಗೆ ಮೂರು ದಿನಗಳ ತರಬೇತಿ ಕಡ್ಡಾಯವಾಗಲಿದ್ದು ಬಳಿಕವೇ ಅವರ ಲೈಸನ್ಸ್ ನವೀಕರಣ ಮಾಡಿಕೊಡಲಾಗುವುದು. ನೂತನ ಸಂಸ್ಥೆಯಲ್ಲಿ ತಜ್ಞರಿಂದಲೇ ತರಬೇತಿ ನೀಡುವ ಕಾರ್ಯವಾಗಲಿದೆ. -ರಮೇಶ್ ವರ್ಣೇಕರ್, ಆರ್‌ಟಿಒ ಮಂಗಳೂರು