ಬನಹಟ್ಟಿ: ಒಂಬತ್ತು ತಿಂಗಳ ಕಾಲ ಹೊತ್ತು, ಹೆತ್ತು, ಪೋಷಣೆ ಮಾಡಿದ ಆ ಮಹಾನ್ ತಾಯಿಯನ್ನು ನಿರಂತರ ನೆನೆಯುವುದರೊಂದಿಗೆ ಸದಾವಕಾಲ ಆಕೆಯ ಸೇವೆ ಮಾಡಿ ಜೀವನವನ್ನು ಪುನೀತವನ್ನಾಗಿಸಿರಿ ಎಂದು ರಬಕವಿ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ರಬಕವಿ ವಿದ್ಯಾನಗರ ಬಡಾವಣೆಯ ಶಿವದಾಶಿಮಯ್ಯ ಸಮುದಾಯ ಭವನದ ಪಕ್ಕದಲ್ಲಿರುವ ಸಿದ್ದರಾಮೇಶ್ವರ ಕಾಲೋನಿಯ ಮನೆಯೊಂದರಲ್ಲಿ ತಾಯಂದಿರ ದಿನದ ನಿಮಿತ್ತ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತಾಯಿಯ ಪಾತ್ರ ಸಮಾಜದ ಏಳ್ಗೆಗೆ ಏಷ್ಟು ಮುಖ್ಯ ಎಂದು ವಿವರಿಸಿ ಅವರು ಮಾತನಾಡಿದರು.
ತಾಯಿ ಕರುಳು ಎಷ್ಟೊಂದು ವಿಶಾಲವೆಂದರೆ ತನ್ನ ಹೊಟ್ಟೆಗೆ ಅರೆಬರೆ ತಿಂದು ಮಗುವಿನ ಹೊಟ್ಟೆ ತುಂಬುವಷ್ಟು ತಿನಿಸುವ ವಿಶಾಲ ಹೃದಯವಂತಿಕೆ ಅವಳದು, ಆಕೆ ತ್ಯಾಗಮಯಿ, ಮಮತೆಯ ಮೂರ್ತಿ. ಮಕ್ಕಳ ಪಾಲನೆಗೆಂದೆ ಆ ಪರಮಾತ್ಮ ಮಕ್ಕಳ ಸೇವೆಗೆಂದೆ ಆಕೆಯನ್ನು ಮಕ್ಕಳ ದೇವರು ಎಂದು ಕಳಿಸಿರಬೇಕು. ಮಕ್ಕಳು ತಾಯಿಯನ್ನು ಹೇಗೆ ಪ್ರೀತಿಸಬೇಕು. ಅವಳಿಗೆ ಉತ್ತಮ ಮಕ್ಕಳಾಗಲು ಏನು ಮಾಡಬೇಕು ಎಂಬುದರ ಕುರಿತು ವಿವರಿಸಿದರು. ಅವಳ ನಿರಂತರ ಸೇವೆ ಮಾಡಿದರೆ ಏನಾಗುತ್ತದೆ ಎಂದು ಮಕ್ಕಳಿಗೆ ವಿವರಿಸಿದರು.
ತಾಯಿಯ ಪ್ರೀತಿ ಮಕ್ಕಳ ಮನಸ್ಸಲ್ಲಿರುವುದಿಲ್ಲ ಅವಳ ಪ್ರೀತಿ ಏನಿದ್ದರೂ ಮಕ್ಕಳ ಹೃದಯಲ್ಲಿರುತ್ತದೆ. ಅದಕ್ಕೆ ಆಕೆ ಹೃದಯವಂತಳು. ನಿತ್ಯ ಯಾರು ತಾಯಿಯ ಸೇವೆ ಮಾಡುತ್ತಾರೋ ಅವರು ದೇವರ ಸೇವೆ ಮಾಡಿದ ಸಮವಾಗುತ್ತದೆ ಎಂದರು. ಯಾರೂ ತಾಯಿಯನ್ನು ತಮ್ಮ ಬದುಕಿನಲ್ಲಿ ಇಂದಿಗೂ ಜೀವಂತವಾಗಿ ಕಾಣುತ್ತಿದ್ದಿರೋ ಅವರು ತಾಯಿ ಸೇವೆ ತಪ್ಪದೇ ಮಾಡಿ, ತಾಯಿ ಜೀವಂತವಾಗಿದ್ದಾಗ ಒಂದು ತುತ್ತು ಅನ್ನಹಾಕಿ ಋಣ ತೀರಿಸಿ ಅವಳ ಪ್ರೀತಿಗೆ ಪಾತ್ರರಾಗಿರಿ, ಅದರೆ ಅವಳು ಸತ್ತ ಮೇಲೆ ಅವಳ ಹೆಸರಿನ ಮೇಲೆ ಸಾವಿರ ಜನಕ್ಕೆ ಅನ್ನದಾನ ಮಾಡಿದರೆ ಪುಣ್ಯ ಹತ್ತುವುದಿಲ್ಲ ಮನುಜ ಎಂದರು. ನಗರದ ಅನೇಕ ಮಹಿಳೆಯರು, ಮಹಿಳಾ ಸಂಘದ ಮುಖಂಡರು ಇದ್ದರು. ಮುರಿಗೆಪ್ಪ ಮಿರ್ಜಿ, ಮಹಾದೇವ ಕೋಟ್ಯಾಳ ಮಾತನಾಡಿದರು. ಆನಂದ ಕಂಪು ನಿರೂಪಿಸಿದರು.