Advertisement

ನವಜಾತ ಶಿಶುವಿಗೆ ತಾಯಿ ಹಾಲು ಶ್ರೇಷ್ಠ

06:25 PM Aug 04, 2022 | Team Udayavani |

ಬಳ್ಳಾರಿ: ಹೆರಿಗೆ ನಂತರ ನವಜಾತ ಶಿಶುವಿಗೆ ಅರ್ಧಗಂಟೆಯೊಳಗೆ ತಾಯಿ ಎದೆ ಹಾಲನ್ನು ನೀಡುವ ಜೊತೆಗೆ ಮುಂದಿನ 6 ತಿಂಗಳುಗಳ ಕಾಲ ತಾಯಿ ಹಾಲನ್ನು ಮಾತ್ರ ನೀಡಬೇಕು. ಇದರಿಂದ ಮಗುವಿನ ಆರೋಗ್ಯ ಕಾಪಾಡುವುದರ ಜೊತೆಗೆ ಬಾಣಂತಿ ತಾಯಿ ಆರೋಗ್ಯಕ್ಕೂ ಕ್ಷೇಮ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಎಲ್‌. ಜನಾರ್ದನ್‌ ತಿಳಿಸಿದರು.

Advertisement

ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಸ್ವಾಮಿ ವಿವೇಕಾನಂದ ಯುತ್‌ ಮೂವ್‌ಮೆಂಟ್‌ ಸಹಯೋಗದಲ್ಲಿ ಮಕ್ಕಳ ವಿಭಾಗ ಸಹಕಾರದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಸಾಂಸ್ಕೃತಿಕ ಹಿನ್ನೆಲೆ ನೋಡಿದಾಗ ಮಗು ತಾನಾಗಿಯೇ ಬಿಡುವವರೆಗೆ ಹಾಲುಣಿಸುವ ಪದ್ದತಿ ಇದ್ದರೂ ಸಹ ಹೆರಿಗೆ ನಂತರ ತಕ್ಷಣವೇ ತಾಯಿ ಹಾಲುಣಿಸುವ ಪ್ರಯತ್ನವನ್ನು ಕುಟುಂಬದ ಎಲ್ಲ ಸದಸ್ಯರು ಮಾಡಬೇಕಿದೆ. ತಾಯಿ ಮೊದಲ ಹಾಲು (ಕೊಲಸ್ಟ್ರಮ್‌) ಉಣಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುವುದರ ಜೊತೆಗೆ ತಾಯಿ ಗರ್ಭಧರಿಸುವುದು ಸಹ ಮುಂದೂಡಬಹುದು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ ಮಾತನಾಡಿ, ತಾಯಂದಿರು ಅಥವಾ ಅವರ ಪಾಲಕರು ಮಗುವಿಗೆ ಜೇನು ತುಪ್ಪ, ಸಕ್ಕರೆ ನೀರನ್ನು ಅಥವಾ ಇನ್ನಿತರೆ ಯಾವುದೇ ದ್ರವ ಪದಾರ್ಥವನ್ನು ಚೀಪಿಸಬಾರದು. ಮಗುವಿಗೆ ತಾಯಿಯ ಹಾಲನ್ನು ಮಾತ್ರ ಉಣಿಸಬೇಕು.

ಹಾಲುಣಿಸುವಾಗ ಮಗುವಿನ ಬಾಯಿ ಅಗಲವಾಗಿ ತೆರೆದಿರುವಂತೆ, ಸ್ತನದ ಭಾಗವು ಮಗುವಿನ ಗದ್ದಕ್ಕೆ ತಾಕುವಂತಿರಬೇಕು. ಮಗುವಿನ ಸ್ಪರ್ಶ ತಾಯಿಯ ಸ್ತನಗಳಲ್ಲಿ ಹಾಲಿನ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದರು. ಮಗುವನ್ನು ತಾಯಿಯ ಅತಿ ಸಮೀಪದಲ್ಲಿ ಮಲಗಿಸಬೇಕು.

Advertisement

ಆಗ ಮಗುವಿನ ಸುರಕ್ಷತಾ ಭಾವವು ಬಲಗೊಳ್ಳುವುದು. ಇದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕಾಗಿ ಎಲ್ಲ ಆಸ್ಪತ್ರೆಗಳಲ್ಲಿ ತಾಯಂದಿರಿಗೆ ಹಾಲುಣಿಸುವ ಪ್ರತ್ಯೇಕ ಸ್ಥಳವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ನಂತರ ಮಕ್ಕಳ ತಜ್ಞ ಡಾ| ವೀರಶಂಕರ, ಡಾ| ಭಾವನಾ ಅವರು ಛಾಯಾಚಿತ್ರಗಳೊಂದಿಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅನಿಲ್‌ ಕುಮಾರ್‌, ತಾಲೂಕು ಆರೋಗ್ಯ ಅಧಿಕಾರಿ ಡಾ| ಮೋಹನಕುಮಾರಿ, ಸ್ಥಾನಿಕ ವೈದ್ಯಾಧಿಕಾರಿ ಡಾ| ವಿಶ್ವನಾಥ ಎಚ್‌., ಪ್ರಸೂತಿ ತಜ್ಞೆ ಡಾ| ಸುಯಜ್ಞ ಜೋಶಿ, ಶುಶ್ರೂಷಕ ಅಧಿಧೀಕ್ಷಕಿ ರಾಜೇಶ್ವರಿ ಸೇರಿದಂತೆ ತಜ್ಞ ವೈದ್ಯರಾದ ಡಾ| ಜಯಪ್ರದ, ಡಾ| ಬಾಲು ವೆಂಕಟೇಶಲು, ಡಾ| ಖಾಜಿ, ಡಾ| ಜಯಲಕ್ಷ್ಮೀ, ಡಾ| ಸಂಜಯ, ಡಾ| ಸುನೀಲ, ಡಾ| ವೆಂಕಟೇಶ, ಡಾ| ರಾಜೀವ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್‌ ದಾಸಪ್ಪನವರ, ಸ್ವಾಮಿ ವಿವೇಕಾನಂದ ಸಂಸ್ಥೆಯ ಗೋಪಾಲ ಅಗಸರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next