Advertisement
ಎದುರಿಗೆ ಒಂದು ಮಗುವಿರುತ್ತದೆ.ಅದರ ಮುಂದೆ ಅವಳು ನಗುತ್ತಾಳೆ. ಅಳುತ್ತಾಳೆ. ಆಡುತ್ತಾಳೆ. ಹಾಡುತ್ತಾಳೆ. ಹಾಗೆ ಹಾಡುತ್ತಲೇ ಡ್ಯಾನ್ಸು ಮಾಡುತ್ತಾಳೆ. ಕಷ್ಟ ಹೇಳಿಕೊಂಡು ಹಗುರಾಗುತ್ತಾಳೆ. ಮರುಕ್ಷಣವೇ ಕೈ ಮುಗಿಯುತ್ತಾಳೆ. ಆನಂತರದಲ್ಲಿ, ಆ ಮಗುವಿನ ಜಿಬಜಿಬ ಅನ್ನುವಂಥ ಕಾಲುಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡು “ನೀನು ನನ್ನ ಪಾಲಿನ ದೇವರು ಕಣಪ್ಪಾ…’ ಎನ್ನುತ್ತಾ ಸಂತೃಪ್ತಿಯ ನಿಟ್ಟುಸಿರು ಬಿಡುತ್ತಾಳೆ.
ತ್ಯಾಗ, ಪ್ರೀತಿ, ಕರುಣೆ ಮತ್ತು ಕ್ಷಮೆ- ಈ ನಾಲ್ಕು ಪದಗಳಿಗೆ ಇರುವ ಸಮನಾರ್ಥಕ ಪದವೇ ಅಮ್ಮ. ಅದೇಕೆ ಹಾಗಿರುತ್ತಾರೆ ಎಂಬ ಪ್ರಶ್ನೆಗೆ ಯಾರೂ ಉತ್ತರಿಸುವುದಿಲ್ಲ. ಆದರೆ, ಪ್ರತಿಯೊಬ್ಬ ತಾಯಿಯೂ ಮಮತಾಮಯಿ ಮತ್ತು ಕರುಣಾಮಯಿ ಆಗಿರುತ್ತಾಳೆ. ಸದಾ ತನಗಾಗಿ ಅಲ್ಲ, ಮಕ್ಕಳಿಗಾಗಿ ಜೀವ ತೇಯುತ್ತಾಳೆ. ಸಣ್ಣದೊಂದು ಜ್ವರ ಬಂದರೂ, ನಾಳೆ ನನಗೇನಾದ್ರೂ ಆಗಿಬಿಟ್ರೆ ನನ್ನ ಮಕ್ಕಳಿಗೆ ಯಾರು ಗತಿ ಎಂದು ಯೋಚಿಸುತ್ತಾಳೆ. ಅಕಸ್ಮಾತ್ ಮಕ್ಕಳೇ ಅನಾರೋಗ್ಯಕ್ಕೆ ಈಡಾದರೆ ಹತ್ತು ಮಂದಿಯ ಕಾಲು ಹಿಡಿದರೂ ಸರಿ; ಮಗುವಿಗೆ ಚಿಕಿತ್ಸೆ ಕೊಡಿಸುತ್ತಾಳೆ. ಮಕ್ಕಳು ತನಗೇ ಅನ್ಯಾಯ ಮಾಡಿಬಿಟ್ಟರೆ ಆಗ ಕೂಡ ಅದೇನೂ ಗೊತ್ತೇ ಇಲ್ಲ ಎಂಬಂತೆ ಸುಮ್ಮನಿದ್ದು ಬಿಡುತ್ತಾಳೆ. ಆಗ ಕೂಡ ಅವಳ ಪ್ರಾರ್ಥನೆ- ಮಕ್ಕಳಿಗೆ ಏನೂ ಕೇಡಾಗದಿರಲಿ ದೇವರೇ ಎಂಬುದೇ ಆಗಿರುತ್ತದೆ. ಮಕ್ಕಳು ಅನ್ನಿಸಿಕೊಂಡವರು ಕೊಲೆ- ಅತ್ಯಾಚಾರದಂಥ ಪಾತಕವೆಸಗಿ ಇಡೀ ಸಮಾಜದಿಂದ ಛೀಮಾರಿಗೆ ಒಳಗಾಗಿದ್ದಾಗ ಕೂಡ, ಅವರನ್ನು ಕ್ಷಮಿಸಲು ತಾಯಿ ಮನಸ್ಸು ಸಿದ್ಧವಾಗಿ ನಿಂತಿರುತ್ತದೆ. ಏಕೆಂದರೆ, ಅವಳು ಅಮ್ಮ! ಮಕ್ಕಳಿಗೆ ಪ್ರಾರ್ಥಿಸುವುದು, ಮಕ್ಕಳಿಗಾಗಿ ಬದುಕುವುದು, ಮಕ್ಕಳ ಕಾರಣದಿಂದಲೇ ಬಗೆಬಗೆಯ ಸಂಕಟಗಳಿಗೆ ಸಿಕ್ಕಿಕೊಳ್ಳುವವಳು ಅಮ್ಮ. “ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು, ಕೆಟ್ಟ ತಾಯಂದಿರು ಇರುವುದಿಲ್ಲ’ ಎಂಬ ಒಂದೇ ಮಾತು ಸಾಕು, ಅಮ್ಮಂದಿರ ಮಹತ್ವ ಸಾರಲು. ವಿಶ್ವ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ, ಅಮ್ಮಂದಿರನ್ನು ಪೂಜಿಸೋಣ. ಅಮ್ಮನನ್ನು ಗೌರವಿಸೋಣ.