ನಾನು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳು. ನಿತ್ಯ ಕಾಲೇಜಿಗೆ ನಮ್ಮೂರಿನಿಂದ 25 ಕಿಲೋ ಮೀಟರ್ ದೂರದಲ್ಲಿದ್ದ ನಗರಕ್ಕೆ ಖಾಸಗಿ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆವು. ನಗರಕ್ಕೆ ಕಾಲಿಡುತ್ತಿದ್ದಂತೆ ನಮಗೆ ಯಾವುದೇ ಭಯವಿರುತ್ತಿರಲಿಲ್ಲ. ಯಾಕೆಂದರೆ ನಮಗೆ ಪರಿಚಯಸ್ಥರು ಯಾರು ಸಿಗುತ್ತಿರಲ್ಲಿಲ್ಲ. ಇದರಿಂದ ಕಾಲೇಜಿಗೆ ಚಕ್ಕರ್ ಹಾಕಿ, ಸಿನಿಮಾ ನೋಡಲು ಹೋಗುತ್ತಿದ್ದೆವು. ಇದು ಅತಿಯಾಯಿತು.
ಸುಮಾರು ಮೂರ್ನಾಲ್ಕು ತಿಂಗಳು ನಂತರ ನಮ್ಮೂರಿನ ಪಕ್ಕದ ಹಳ್ಳಿಯ ಕಾಲೇಜಿನ ಗೆಳತಿಯೊಬ್ಬಳಿಂದ ನಾನು ಕಾಲೇಜಿಗೆ ಚಕ್ಕರ್ ಹಾಕುತ್ತಿದ್ದ ವಿಷಯ ಅಮ್ಮನಿಗೆ ತಿಳಿಯಿತು. ಅಮ್ಮ ನನ್ನನ್ನು ಹತ್ತಿರ ಕರೆದು ಅಳಲು ಪ್ರಾರಂಭಿಸಿದಳು. ನೀನು ಇನ್ನು ಮುಂದೆ ಕಾಲೇಜಿಗೆ ಹೋಗಬೇಡ, ಬಿಸಿಲಿನಲ್ಲಿ ಕೆಲಸ ಮಾಡಿದರೆ ಗೊತ್ತಾಗುತ್ತದೆ ಎಂದು ಬೈದಳು. ನಾನು ತಲೆ ಬಗ್ಗಿಸಿಕೊಂಡು ಮಾತನಾಡದೆ ಸುಮ್ಮನೆ ಕುಳಿತೆ.
ಮರುದಿನ ಬೆಳಿಗ್ಗೆ ಮತ್ತೆ ಕಣ್ಣೆರಿಡುತ್ತಾ ಕೈಯಲ್ಲಿ ಇಪ್ಪತ್ತು ರೂಪಾಯಿ ಕೊಟ್ಟು ಕಾಲೇಜಿಗೆ ಹೋಗು ಎಂದಳು. ಆಗ ನನ್ನ ತಾಯಿಯ ಪ್ರೀತಿ ಕಣ್ಣಲ್ಲಿ ತುಂಬಿಕೊಂಡಿತ್ತು. ಅಂದಿನಿಂದ ಅಮ್ಮನ ಮೇಲಿನ ಪ್ರೀತಿ ಹೆಚ್ಚಾಯಿತು. ಈ ಘಟನೆ ನನ್ನಲ್ಲಿ ಬದಲಾವಣೆಯನ್ನು ತಂದಿತು.
ಸಣ್ಣಮಾರಪ್ಪ, ಚಂಗಾವರ
ದೇವರಹಟ್ಟಿ, ಶಿರಾ