Advertisement

ಗ್ರಾಮೀಣ ಭಾಗಕ್ಕೆ ತಾಯಿ ಕಾರ್ಡ್‌ ಪ್ರಯಾಸ

07:30 AM Apr 01, 2018 | |

ಪುತ್ತೂರು: ತಾಯಿ ಮತ್ತು ಮಗುವಿನ ಆರೈಕೆಯ ದೃಷ್ಟಿಯಿಂದ ಸರಕಾರ ರಾಷ್ಟ್ರೀಯ ಸಮಗ್ರ ಗ್ರಾಮೀಣ ಆರೋಗ್ಯ ಅಭಿಯಾನ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಂಗವಾಗಿ ಜಾರಿಗೆ ತಂದಿರುವ “ತಾಯಿ ಕಾರ್ಡ್‌’ ಗ್ರಾಮಾಂತರ ಭಾಗಕ್ಕೆ ತಲುಪಲು ಪ್ರಯಾಸ ಪಡುತ್ತಿದೆ.

Advertisement

ಮಹಿಳೆ ಗರ್ಭವತಿಯಾಗಿ ಆರು ತಿಂಗಳು ತುಂಬುವುದರೊಳಗಾಗಿ ತಾಯಿ ಕಾರ್ಡ್‌ ಮಾಡಿಸಿರಬೇಕು ಎಂಬ ಸರಕಾರಿ ನಿಯಮವಿದೆ. ಗರ್ಭಿಣಿಯ ಆರೈ ಕೆಯ ಜತೆಗೆ ಗರ್ಭದಲ್ಲಿರುವ ಭ್ರೂಣದ ಪೋಷಣೆಯ ಜವಾಬ್ದಾರಿಯ ಸಂಕೇತವಿದು. ಮಗು ಹುಟ್ಟಿ, 16 ವರ್ಷದವರೆಗೆ ಈ ತಾಯಿ ಕಾರ್ಡ್‌ ಬಳಕೆಯಲ್ಲಿ ಇರುತ್ತದೆ. ಅಂದರೆ ಎಸೆಸೆಲ್ಸಿ ಹಂತದಲ್ಲಿ ಆ ಬಾಲಕ ಅಥವಾ ಬಾಲಕಿಗೆ ಲಸಿಕೆ ನೀಡುವಲ್ಲಿಯ ವರೆಗೆ ಕಾರ್ಡ್‌ ಚಾಲ್ತಿಯಲ್ಲಿರುತ್ತದೆ. ಇಷ್ಟು ವ್ಯಾಪಕ ಬಳಕೆಗೆ ಅಗತ್ಯ ಇರುವ ತಾಯಿ ಕಾರ್ಡ್‌ ಗ್ರಾಮೀಣ ಭಾಗಕ್ಕೆ ತಲುಪದೇ ಇದ್ದರೆ ಹೊಣೆ ಯಾರು?

ತಾಯಿ ಕಾರ್ಡ್‌ ತುಂಬಾ ಅಗತ್ಯವಾಗಿ ಬೇಕಾಗಿರುವುದು ಗ್ರಾಮೀಣ ಭಾಗದಲ್ಲೇ. ಮಗು ಹಾಗೂ ತಾಯಿಯ ಅಪೌಷ್ಟಿಕತೆಯನ್ನು ನಿವಾರಿಸಿ ಆರೋಗ್ಯ ಖಾತರಿಪಡಿಸುವ ದೃಷ್ಟಿಯಿಂದ ಪ್ರತಿ ಯೊಬ್ಬ ಗರ್ಭಿಣಿಗೂ ತಾಯಿ ಕಾರ್ಡ್‌ ಮಾಡಿಸಿರಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರಿಗೆ ಈ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ ಎಂಬ ದೂರು ಇದೆ. ಪಟ್ಟಣ ಪ್ರದೇಶದ ಮಹಿಳೆಯರಿಗೆ ಹೇಗಾದರೂ ಮಾಹಿತಿ ಸಿಗುತ್ತದೆ ಅಥವಾ ನೆರೆಹೊರೆ ಮನೆಯವರು ತಿಳಿಸಿ, ಕಾರ್ಡ್‌ ಮಾಡಿಸಿಕೊಳ್ಳಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ದೂರದೂರದಲ್ಲಿರುವ ಗರ್ಭಿಣಿಯರಿರುವ ಮನೆಗಳನ್ನು ಆಶಾ ಕಾರ್ಯಕರ್ತೆಯರು ಅಥವಾ ಆಯಾ ಭಾಗದ ಆರೋಗ್ಯ ಸಹಾಯಕಿಯರು ತಲುಪುವಲ್ಲಿ ವಿಫಲರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಪತಿಯ ಮನೆ/ ತವರು ಮನೆ: ತಾಯಿ ಕಾರ್ಡನ್ನು ಪತಿಯ ಮನೆಯಲ್ಲಿ ಮಾಡಿಸಬೇಕೇ ಅಥವಾ ತವರು ಮನೆಯಲ್ಲಿ ಮಾಡಿಸಬೇಕೇ ಎಂಬ ಗೊಂದಲವೂ ಈ ಸಮಸ್ಯೆಗೆ ಕೊಡುಗೆ ನೀಡುತ್ತಿದೆ. ವಾಸ್ತವವಾಗಿ ಪತಿಯ ಮನೆ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ತಾಯಿ ಕಾರ್ಡ್‌ ಮಾಡಿಸಬೇಕು. ಆದರೆ ಗಂಡನ ಮನೆಯಲ್ಲಿರುವಾಗ ಗರ್ಭಿಣಿ ಮಹಿಳೆಗೆ ತಾಯಿ ಕಾರ್ಡ್‌ ಬಗ್ಗೆ ಮಾಹಿತಿ ಸಿಗದೇ ಹೋದರೆ, ಬಳಿಕ ಕಾರ್ಡ್‌ ಮಾಡಿಸುವುದು ಕಷ್ಟವೇ ಸರಿ. ಯಾಕೆಂದರೆ ಕೆಲವೇ ತಿಂಗಳಲ್ಲಿ ಆಕೆ ತವರು ಮನೆಗೆ ಹೋಗುತ್ತಾಳೆ. ಅಲ್ಲಿಗೆ ಸಮೀಪದ ಅಂಗನವಾಡಿ ಕೇಂದ್ರದವರು ತಾಯಿ ಕಾರ್ಡ್‌ ಮಾಡಿಸಲು ನಿರಾಕರಿಸುತ್ತಾರೆ. ಹೀಗೆ ತಾಯಿ ಕಾರ್ಡ್‌ ಮಾಡಿಸಿಕೊಳ್ಳಲು ಆಗದವರು ಸರಕಾರದ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ಮಡಿಲು ಕಿಟ್‌ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ತಾಯಿ ಕಾಡೇì ಆಧಾರವಾಗಿದೆ. ಸರಕಾರಿ ಆಸ್ಪತ್ರೆಗೆ ತೆರಳುವವರಿಗೆ ಅಲ್ಲೇ ತಾಯಿ ಕಾರ್ಡ್‌ ಮಾಡುವ ವ್ಯವಸ್ಥೆ ಇರಬಹುದು. ಆದರೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವವರಿಗೆ ಮಾಹಿತಿಯೇ ಇಲ್ಲದಾಗುವ ಸಂಭವ ಹೆಚ್ಚು. 

ಆರೋಗ್ಯ ಸಹಾಯಕಿ ಹುದ್ದೆ ಖಾಲಿ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದೆ. ಇದರಿಂದಾಗಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಬ್ಬರಂತೆ ಆರೋಗ್ಯ ಸಹಾಯಕಿಯರು ಕೆಲಸ ನಿರ್ವಹಿಸುತ್ತಿರುವುದು ಅನೇಕ ಕಡೆ ಗಮನಕ್ಕೆ ಬಂದಿದೆ. ಅಂಥ ಸಂದರ್ಭಗಳಲ್ಲಿ ಅವರಿಗೆ ಎಲ್ಲ ಮನೆಗಳನ್ನು ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

Advertisement

ಗ್ರಾಮಾಂತರ ಭಾಗದಲ್ಲಿ ತಾಯಿ ಕಾರ್ಡ್‌ ಉದ್ದೇಶ ಪೂರೈಸುತ್ತಿಲ್ಲ, ಗುರಿ ತಲುಪುತ್ತಿಲ್ಲ ಎಂಬುದರ ಬಗ್ಗೆ  ಸ್ಪಷ್ಟ ಮಾಹಿತಿ ಇಲ್ಲ. ಆದರೆ ಪ್ರತಿ ಗರ್ಭಿಣಿಯರೂ 3 ತಿಂಗಳು ತುಂಬುವುದರ ಮೊದಲು ತಾಯಿ ಕಾರ್ಡ್‌ ಮಾಡಿಸಿಕೊಂಡಿರಬೇಕು. ಇದನ್ನು ಆಯಾ ಭಾಗದ ಆಶಾ ಕಾರ್ಯಕರ್ತೆ ಮಾಡಿಸಿ ಕೊಡಬೇಕು. ಈ ಬಗೆಗಿನ ದೋಷಗಳನ್ನು ತಾಲೂಕು ಆರೋಗ್ಯಾಧಿಕಾರಿ ಬಳಿ ಮಾತನಾಡಿ, ಸರಿಪಡಿಸಲಾಗುವುದು.
ಡಾ| ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ

ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next