ಮೈಸೂರು: ಗರ್ಭಿಣಿ ಹಾಗೂ ಬಾಣಂತಿಯರ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆಗೆ ಪ್ರಾಯೋಗಿಕವಾಗಿ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ಆಯ್ಕೆ ಮಾಡಲಾಗಿದ್ದು, ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಯೋಜನೆಯ ಜಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಎಚ್.ಡಿ.ಕೋಟೆ ಸೇರಿದಂತೆ ರಾಜ್ಯದ ನಾಲ್ಕು ತಾಲೂಕುಗಳಲ್ಲಿ ಜಾರಿಗೊಳಿಸಲಾಗಿದ್ದು,
-ಗರ್ಭಿಣಿ ಹಾಗೂ ಬಾಣಂತಿಯರ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಅನ್ನ, ಸಾಂಬಾರು, ಪಲ್ಯದ ಜೊತೆಗೆ ಬೇಯಿಸಿದ ಮೊಟ್ಟೆ, ಚಿಕ್ಕಿ, 200 ಎಂ.ಎಲ್. ಹಾಲು, ತರಕಾರಿ ಒಳಗೊಂಡ ಪೌಷ್ಟಿಕ ಆಹಾರವನ್ನು ಮಧ್ಯಾಹ್ನ ಬಿಸಿಯೂಟದಲ್ಲಿ ಅಂಗನವಾಡಿಗಳಲ್ಲಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ ಇಲಾಖೆ ಅಧಿಕಾರಿಗಳು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಹಲವಾರು ಸಮಸ್ಯೆಗಳಿವೆ. ಗರ್ಭಿಣಿ ಹಾಗೂ ಬಾಣಂತಿಯರು ಅಂಗನವಾಡಿಗೆ ಬಂದು ಎಲ್ಲರ ಒಟ್ಟಿಗೆ ಆಹಾರ ಸೇವಿಸಲು ಹಿಂಜರಿಯುತ್ತಾರೆ. ಕೆಲವರು ಬೇರೆಯವರು ಮಾಡಿದ ಅಡುಗೆ ಸೇವಿಸಲು ಹಿಂಜರಿಯುತ್ತಾರೆ ಎಂದರು. ಪೌಷ್ಟಿಕ ಆಹಾರವನ್ನು ಮನೆಗೆ ನೀಡುವಂತೆ ಕೆಲವರ ಕೋರಿಕೆಯಾಗಿದೆ. ಕೆಲವರು ಮೊಟ್ಟೆ ಸೇವಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಆರೋಗ್ಯದ ದೃಷ್ಟಿಯಿಂದ ಯೋಜನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಗೆ ಆಹಾರ ನೀಡಿದರೆ ಗರ್ಭಿಣಿ ಹಾಗೂ ಬಾಣಂತಿಯರ ಬದಲಿಗೆ ಬೇರೆಯವರು ಸೇವಿಸಬಹುದು. ಇದರಿಂದ ಯೋಜನೆ ಸಫಲವಾಗುವುದಿಲ್ಲ. ಆದ್ದರಿಂದ ಅಂಗನವಾಡಿಯಲ್ಲೇ ಪೌಷ್ಟಿಕ ಆಹಾರ ಸೇವಿಸುವಂತೆ ಮನವೊಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ. ರಾಧಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಆಹಾರ ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.