Advertisement
“ಬ್ರಾಯುತ್‌ಎಂಬುದು ಬಹುಮಕ್ಕಳ ಹೊರೆ ಹೊತ್ತ’ ಎಂಬ ಅರ್ಥ ಬರುವ ಕುಟುಂಬದ ಹೆಸರು. ಈ ಕುಟುಂಬದ ದಂಪತಿ, ಪಾನ್ ಮತ್ತು ಮೇನ್ ಬ್ರಾಯುತ್ (ಅಪ್ಪ-ಅಮ್ಮ).ಬಡ ಕುಟುಂಬ, ಹೊಟ್ಟೆಗೆ ಬಟ್ಟೆಗೆ ಕಷ್ಟಪಡುವ ಪರಿಸ್ಥಿತಿ. ಆದರೆ, ಮನೆ ತುಂಬಾ ಮಕ್ಕಳು, ಒಂದೆರಡಲ್ಲ, ಹದಿನೆಂಟು! ಮಕ್ಕಳನ್ನು ಹೆರುತ್ತ ಅವರನ್ನು ಸಾಕುವ ಸಂಪೂರ್ಣ ಹೊಣೆ ಹೊತ್ತ ಅಮ್ಮ ಬ್ರಾಯುತ್ ಗದ್ದೆಯ ಜತೆ ನೇಯುವ ಕೆಲಸವನ್ನೂ ಮಾಡುತ್ತಾಳೆ. ಇತ್ತ ಅಪ್ಪನನ್ನು ಅಂಗಳ ಗುಡಿಸಿ, ಪೂಜೆಗೆ ಬೇಕಾದ ವಿಶೇಷ ಖಾದ್ಯ ಸಿದ್ಧಪಡಿಸುವಂತೆ ಮನ ಒಲಿಸುತ್ತಾಳೆ. ಹೀಗೆ ಬಡತನ, ಕಷ್ಟವಿದ್ದರೂ ಕಂಗೆಡದೆ ಪತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಗೆ-ಹೊರಗೆ ದುಡಿದು, ಮನೆಯಲ್ಲಿ ಶಾಂತಿ ಕಾಪಾಡಿಕೊಂಡು ತನ್ನ ಹದಿನೆಂಟು ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತರಲು ಅಮ್ಮ ಶ್ರಮಿಸುತ್ತಾಳೆ.ಆಕೆಯ ಶಿಸ್ತು ಮತ್ತು ಪ್ರೀತಿಯ ಕಣ್ಗಾವಲಲ್ಲಿ ಬೆಳೆದು ಮಕ್ಕಳು ದೊಡ್ಡವರಾಗುತ್ತಾರೆ. ತಮ್ಮದೇ ಕುಟುಂಬದ ನಾಟಕ ತಂಡವನ್ನು ಕಟ್ಟಿ ಬರೊಂಗ್ ನಾಟಕವನ್ನು ಪ್ರದರ್ಶಿಸುತ್ತಾರೆ. ಬರೊಂಗ್ ನಾಟಕವೆಂದರೆ ಒಳ್ಳೆಯ ಶಕ್ತಿ ಕೆಟ್ಟದ್ದನ್ನು ಮಣಿಸುವ ವಸ್ತುವುಳ್ಳದ್ದು.ಹೀಗೆ ಮಕ್ಕಳು ಶ್ರೀಮಂತರಾಗಿ, ಸಮಾಜದಲ್ಲಿ ಗಣ್ಯರೆನಿಸಿಕೊಂಡಾಗ ಅಮ್ಮನಿಗೆ ಹೆಮ್ಮೆ ಮತ್ತು ಸಂತೋಷ. ಆದರೆ ತನ್ನ ಕರ್ತವ್ಯ ಮುಗಿಯಿತೆಂದು ಆಕೆ ಪತಿಯೊಂದಿಗೆ ಈ ಲೌಕಿಕ ಜಗತ್ತಿನ ಮೋಹ ತೊರೆದು ವಾನಪ್ರಸ್ಥಕ್ಕೆ ತೆರಳುತ್ತಾಳೆ.
ಸಾಮಾನ್ಯ ಮಹಿಳೆಯೊಬ್ಬಳ ಜೀವನ ಕತೆ ಎಂದು ಭಾಸವಾದರೂ ಬಾಲಿಯ ಜನರಿಗೆ ಆಕೆ ಎಲ್ಲ ಅಮ್ಮಂದಿರ ಸಂಕೇತ. ಪುರುಷ ಪ್ರಧಾನ ಸಮಾಜವಾದ ಬಾಲಿಯಲ್ಲಿ ಮಳೆ ಅಡಿಗೆ-ಮನೆ-ಮಕ್ಕಳು ಎಂಬ ಪಾರಂಪರಿಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಮಕ್ಕಳು ಮನೆಯ ಸಂಪತ್ತು; ಹಾಗಾಗಿ, ಹೆಚ್ಚಿದ್ದಷ್ಟೂ ಒಳ್ಳೆಯದು ಎನ್ನುವ ನಂಬಿಕೆಯೂ ಜಾರಿಯಲ್ಲಿದೆ.ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದವಳಾದರೂ ಮೇನ್ ಬ್ರಾಯುತ್ ಕಂಗೆಡಲಿಲ್ಲ. ತನ್ನ ಕೆಲಸಗಳ ಜತೆ ಮಕ್ಕಳಿಗಾಗಿ ಪುರುಷರ ಕೆಲಸವನ್ನೂ ಮಾಡಿದಳು, ಬಿಡುವಿಲ್ಲದೇ ದುಡಿದಳು.ಗಂಡನ ಮೇಲಷ್ಟೇ ಹೊಣೆ ಹೊರಿಸಲಿಲ್ಲ, ಬದಲಾಗಿ ತಾನೇ ಹೊತ್ತಳು. ಕುಟುಂಬ ತೊರೆದು ಹೋಗದೇ ಎಲ್ಲವನ್ನೂ ಎದುರಿಸಿದಳು. ಯಾರಲ್ಲದಿದ್ದರೂ ತನ್ನನ್ನು ದೈವ ಕಾಪಾಡುತ್ತದೆ ಎಂಬ ಅಚಲ ನಂಬಿಕೆಯೊಂದೇ ಆಕೆಗಿದ್ದ ಆಧಾರ. ಹಾಗಾಗಿ, ನಿತ್ಯವೂ ಪೂಜೆ ಮಾಡಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಅಭ್ಯುದಯ ಆಕೆಯ ಏಕೈಕ ಗುರಿಯಾಗಿತ್ತು. ಅದನ್ನು ನಿಷ್ಠೆಯಿಂದ ಮಾಡಿ ಯಶಸ್ಸು ಪಡೆದಳು. ತನ್ನ ಕರ್ತವ್ಯ ಮುಗಿಸಿದ ನಂತರ ಮಕ್ಕಳಿಂದ ಏನನ್ನೂ ಅಪೇಕ್ಷಿಸದೇ ಯೋಗಸಮಾಧಿ ಪಡೆದದ್ದು ಎಲ್ಲರಿಗೂ ಆದರ್ಶ ಎಂದು ಅಲ್ಲಿನವರು ನಂಬುತ್ತಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಧರ್ಮೀಯರ ಜತೆ ಬೌದ್ಧಧರ್ಮೀಯರೂ ಈಕೆಯನ್ನು ಮಕ್ಕಳನ್ನು ಕಾಪಾಡುವ ಹಾರಿತಿ ಎಂಬ ದೇವತೆಯನ್ನಾಗಿ ಪೂಜಿಸುತ್ತಾರೆ.
Related Articles
Advertisement