ಸ್ಟೇಟ್‌ಬ್ಯಾಂಕ್: ಬ್ಯಾರಿ ಕಲಾರಂಗ ಮಂಗಳೂರು ವತಿಯಿಂದ ಆಯೋಜಿಸಿರುವ ‘ಬ್ಯಾರಿ ಬಾಷಾ ಬಲರ್ಮೆರೊ ತೇರ್’ (ಬ್ಯಾರಿ ಭಾಷೆ ಅಭಿವೃದ್ಧಿ ರಥ)ಗೆ ಮಂಗಳವಾರ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜರಗಿದ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಕರಪತ್ರ ಬಿಡುಗಡೆ ಮಾಡಿ ತೇರಿಗೆ ಚಾಲನೆ ನೀಡಿದರು. ಮಾತೃಭಾಷೆಯ ಬಗ್ಗೆ ಪ್ರತಿಯೋರ್ವರು ಅಭಿಮಾನ ತಾಳಿ ಅದನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ, ಬ್ಯಾರಿ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಬ್ಯಾರಿ ಭಾಷಾ ಬಲರ್ಮೆರೊ ತೇರ್’ ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಪ್ರಸ್ತಾವನೆಗೈದ ಬ್ಯಾರಿ ಕಲಾಸಂಗಮದ ಅಧ್ಯಕ್ಷ ಅಬ್ದುಲ್ ಅಜೀಜ್ ಬೈಕಂಪಾಡಿ, ’13 ವರ್ಷಗಳ ಹೋರಾಟದ ಫಲವಾಗಿ ಸರಕಾರ ನಮಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ನೀಡಿತು. ಬ್ಯಾರಿ ಭಾಷೆ, ಸಾಹಿತ್ಯ, ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಕಲಾರಂಗ 12 ಅಂಶಗಳನ್ನು ಕರಪತ್ರಗಳ ಮೂಲಕ ಸಮುದಾಯದ ಮುಂದಿರಿಸುತ್ತಿದೆ. ಮಾತೃಭಾಷೆ ಬಗೆಗಿನ ಕೀಳರಿಮೆ ದೂರ ಮಾಡುವುದು, ಮನೆಯಲ್ಲಿ ಮಕ್ಕಳ ಜತೆಗೆ ಬ್ಯಾರಿ ಭಾಷೆಯಲ್ಲೇ ಮಾತನಾಡುವುದು, ಶಾಲೆಗಳಲ್ಲಿ ದಾಖಲಾತಿ ಸಂದರ್ಭದಲ್ಲಿ ಮಾತೃಭಾಷೆ ಬ್ಯಾರಿ ಎಂದು ನಮೂದಿಸುವುದು, ಬ್ಯಾರಿ ಭಾಷೆಯಲ್ಲಿ ಕಥೆ, ಕವನಗಳನ್ನು ಬರೆಯುವವರಿಗೆ ಪ್ರೋತ್ಸಾಹ ನೀಡುವುದು ಮುಂತಾದುವು ಇದರಲ್ಲಿ ಒಳಗೊಂಡಿವೆ. ತೇರು ಜಿಲ್ಲೆಯ ವಿವಿಧೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ವಿವರಿಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮಹಮ್ಮದ್ ಮಸೂದ್ ಶುಭ ಹಾರೈಸಿದರು.
ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಮಾಜಿ ಮೇಯರ್ ಕೆ. ಅಶ್ರಫ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಅಸ್ಲಂ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಬ್ಯಾರಿ ಬ್ರಿಗೇಡ್ ಅಧ್ಯಕ್ಷ ಅನ್ವರ್ ರೀಕೋ, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಬ್ಯಾರಿ ಕಲಾವಿದರ ವೇದಿಕೆಯ ಅಧ್ಯಕ್ಷ ಬಶೀರ್ ಅಹಮ್ಮದ್ ಕಿನ್ಯ, ನಿಲಾವು ಕಲಾವೇದಿಕೆಯ ಅಧ್ಯಕ್ಷ ಮಹಮ್ಮದ್ ಫೈಝಿ, ಮೆಲ್ತ್ತೇನೆ ಅಧ್ಯಕ್ಷ ಅಲಿ ಕುಂಞಿ ಪಾರೆ, ಮುಖಂಡರಾದ ಅಜೀಜ್ ಪರ್ತಿಪಾಡಿ, ಎನ್.ಎಸ್. ಕರೀಂ, ಅಬ್ದುಲ್ ಖಾದರ್, ಕಾಂಗ್ರೆಸ್ ಸೇವಾದಳದ ಅಶ್ರಫ್ ಮತ್ತಿತರರು ಅತಿಥಿಗಳಾಗಿದ್ದರು.ಸಂಚಾಲಕ ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಯು.ಎಚ್. ಖಾಲಿದ್ ಉಜಿರೆ ನಿರೂಪಿಸಿದರು.