ಚಿಕ್ಕಬಳ್ಳಾಪುರ: ಮಾತೃ ಭಾಷೆ ಕನ್ನಡವಾದರೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅನ್ನ ಕೊಡುವ ಭಾಷೆ ಇಂಗ್ಲಿಷ್ ಆಗಿದೆ. ಪ್ರತಿಯೊಬ್ಬರಿಗೂ ಇಂಗ್ಲಿಷ್ ಶಿಕ್ಷಣ ಅಗತ್ಯವಾಗಿದ್ದರೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದು ಮೀಟಾ ಫಾರ್ ಸೋಶಿಯಲ್ ಸರ್ವೀಸ್‌ನ ಸಂಸ್ಥಾಪಕ ಅಧ್ಯಕ್ಷ ಪಿ.ಜಿ.ಗಿರಿ ತಿಳಿಸಿದರು.
ತಾಲೂಕಿನ ಕುಪ್ಪಹಳ್ಳಿಯಲ್ಲಿ ಮಾಸ್ ಸ್ತ್ರೀ ಶಕ್ತಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉಚಿತ ಇಂಗ್ಲಿಷ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಣ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇರುತ್ತೆ. ಶಿಕ್ಷಕರು ಮತ್ತು ಪೋಷಕರು ಅನಾವರಣಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಸಮಾಜದಲ್ಲಿ ಹೆಣ್ಣು, ಗಂಡು ಎಂಬ ಎರಡೇ ಜಾತಿ ಇರುವುದು. ಜಾತಿ, ಭೇದ ಮಾಡುವುದರಿಂದ ನಮಗೆ ಪ್ರೀತಿ ಸಿಗುವುದಿಲ್ಲ.
ಪರಿಕರ, ಶಿಕ್ಷಣ ಕೊಡಿಸಬೇಕು: ಪ್ರತಿಯೊಬ್ಬರು ಜಾತಿ-ಜಾತಿಗಾಗಿ ಪ್ರೀತಿಸುವ ಬದಲು ಮನುಷ್ಯ-ಮನುಷ್ಯನಿಗಾಗಿ ಬದುಕಿ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ನಿರಂತರ ಪ್ರಯತ್ನ ಮಾಡಬೇಕು. ಮಕ್ಕಳ ಅಂತರಂಗವನ್ನು ಅರಿತು ಭವಿಷ್ಯದ ಬದುಕಿನ ದಾರಿ ತೋರಿಸಬೇಕು. ಬುದ್ಧಿ ವಿಕಾಸಕ್ಕೆ ಪೂರಕ ಪರಿಕರಗಳು ಮತ್ತು ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಮಾನವೀಯ ಮೌಲ್ಯ ತಿಳಿಯಿರಿ: ಜಾಗತಿಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅವಶ್ಯವಿದ್ದು, ಅದಕ್ಕಾಗಿ ಅಭಿಮಾನ ಬದಿಗಿಟ್ಟು ಕೋರ್ಸ್‌ಗೆ ತಕ್ಕಂತೆ ಭಾಷೆ ಕಲಿಯಬೇಕು. ಗ್ರಾಮೀಣ ಭಾಗದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಶಿಕ್ಷಣ ತರಬೇತಿ ನೀಡಲಾಗುತ್ತಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಮನುಷ್ಯ ಮಾನವೀಯ ಮೌಲ್ಯಗಳನ್ನು ತಿಳಿದುಕೊಂಡು ಸಮಾಜದಲ್ಲಿ ಉನ್ನತ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಮಾರು 400 ಕ್ಕೂ ಹೆಚ್ಚು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾಸ್ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಅಮೃತ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಲುವಳ್ಳಿ ಗಜೇಂದ್ರ, ಗ್ರಾಪಂ ಸದಸ್ಯ ಗಾಂಡ್ಲಚಿಂತೆ ಗಂಗಪ್ಪ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಎಂ.ವಿ.ರಾಮಪ್ಪ, ಮುಖಂಡರಾದ ನರಸಿಂಹಪ್ಪ, ಮೂರ್ತಿ, ಶಿಕ್ಷಕ ಮಧು ಉಪಸ್ಥಿತರಿದ್ದರು.