Advertisement
ಅಮ್ಮ ಎಂದಾಗ ಮೊದಲು ನೆನಪಾಗುವುದೇ ಅವಳ ಸ್ವಾಭಿಮಾನದ ಬದುಕು. ಯಾರಾ ಹಂಗು ಇಲ್ಲದೆ ಸ್ವತಂತ್ರವಾಗಿ ಬದುಕಬೇಕೆನ್ನುವ ಅವಳ ಛಲ.ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಆ ಛಲಗಾತಿ,ತುಳಿಯುವ ಜನರೆದುರು ತಲೆಎತ್ತಿ ಬದುಕಿದ ಬಾಲ್ಯದ ಅಸ್ಪಷ್ಟ ಚಿತ್ರಣಗಳು. ಬಡತನದ ಬೇಗುದಿ ಅವಳ ಬಾಲ್ಯದ ಆಸೆಗಳನು ಚಿವುಟಿತು. ಶಿಕ್ಷಣದ ಕನಸು ಅದೇ ಪರಿಯಲಿ ಕಮರಿತು.ಬಡತನದ ಆರ್ಭಟಕೆ ಆಕೆಯ ನೂರು ಕನಸುಗಳು ಸತ್ತ ಸದ್ದು, ಜಗಕೆ ಮಾತ್ರ ನಿಶಬ್ಧ.
Related Articles
Advertisement
ಆಕೆಯ ಅಡುಗೆಯ ಉಪ್ಪು ಹುಳಿ ಖಾರ ನೋಡುವ ಕೆಲಸ ಏನಿದ್ದರೂ ಸದಾ ನನ್ನದೇ. ನಾನು ಚೆನ್ನಾಗಿದೆ ಅಸ್ತು ಅಂದಮೇಲೆಯೇ ಆಕೆಯ ಮನಸಿಗೂ ತೃಪ್ತಿಯಾಗುವುದು. ಆಕೆಯ ಅಡುಗೆಗೆ,ಆಕೆ ತಲೆನೋವು ಎಂದಾಗ ಮಾಡಿ ಕೊಡುವ ಆ ವಿಶೇಷ ಚಹಾದ ಕಂಪಿಗೆ ನಾನೆಂದಿಗೂ ಅಭಿಮಾನಿಯೇ ಸರಿ.
ಮಾತೃಭಾಷೆಯನ್ನಷ್ಟೇ ಸ್ಪಷ್ಟವಾಗಿ ಮಾತನಾಡಬಲ್ಲ, ಕೇವಲ ಕನ್ನಡದಲ್ಲಿ ಸಹಿಯಷ್ಟೇ ಮಾಡಲು ಬರುವ, ಶಾಲೆಯ ಗಾಳಿಯು ಸೋಕದ ಅವಳು ನನ್ನ ಪಾಲಿಗೆ ಮಾತ್ರ ಅಸಾಮಾನ್ಯ ಶ್ರಮಜೀವಿ, ಜಗತ್ತಿನ ಶ್ರೇಷ್ಠ ತಾಯಿ, ಕುಟುಂಬ ನಿರ್ವಹಣೆಯಲ್ಲಿ ಉನ್ನತ ಪಧವೀದರೆ, ಅಡುಗೆಯಲ್ಲಿ ಅಸಾಧರಣ ಪ್ರತಿಭೆ, ಕಣ್ಣು ನೋಡಿಯೇ ನನ್ನ ಮನಸನರಿಯುವ ಮನೋವಿಜ್ಞಾನಿ, ಬಾಯಿಲೆಕ್ಕದಲ್ಲಿ ಕೂಡಿಸು, ಕಳೆ, ಗುಣಿಸು, ಭಾಗಿಸನ್ನು ಅರೆದು ಕುಡಿದಿರುವ ಗಣಿತ ಪಂಡಿತೆ.. ಹೀಗೆ ಹೇಳುತಾ ಹೋದರೆ ಆಕೆಯ ಗುಣಗಾನ ಅನಂತ.
ಕಷ್ಟಗಳ ಬೇಗೆಯಲ್ಲೇ ಬೆಂದ ಮತ್ತು ಬೆಯುತ್ತಿರುವ ಅವಳನ್ನು ಸುಖದ ಸುಪತ್ತಿಗೆಯಲ್ಲಿ ತೇಲಿಸುವುದೇ ನನ್ನ ಬಹುದೊಡ್ಡ ಕನಸು. ಅವರವರ ತಾಯಿಯ ವರ್ಣನೆಗೆ ಕೂತಾಗ ಪ್ರತಿಯೊಬ್ಬರು ಅಕ್ಷರ ಕೊರತೆಯ ತೊಂದರೆ ಎದುರಿಸುವ ಕವಿಗಳೇ. ಆಕೆಯ ವರ್ಣನೆ ನಿರಂತರ ಮತ್ತು ಅನಂತ ಅದಕೆ ಕೊನೆಯಿಲ್ಲ.
ಚೇತನ್ ಕಾಶಿಪಟ್ನ
ಎಸ್.ಡಿ.ಎಂ. ಕಾಲೇಜು
ಉಜಿರೆ.