ಶಿವಮೊಗ್ಗ : ಜಿಲ್ಲೆಯಲ್ಲಿ ಕೋವಿಡ್ ಕರಾಳತೆ ಮುಂದುವರೆದಿದೆ. ಇಲ್ಲಿನ ಬಸವನಗುಡಿಯಲ್ಲಿ ಕೆಲವೆ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇದಕ್ಕೆ ಮಹಾಮಾರಿ ಕರೋನಾವೆ ಕಾರಣವಾಗಿದೆ.
ಬಸವನಗುಡಿ ನಾಲ್ಕನೆ ಅಡ್ಡರಸ್ತೆಯ ಪ್ಲಾಸ್ಟಿಕ್ ವ್ಯಾಪಾರಿ ಸುರೇಶ್ ಕರೋನಾಗೆ ತುತ್ತಾಗಿದ್ದರು. ಕಳೆದ ಹತ್ತು ದಿನದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ಥಿತಿ ಗಂಭೀರವಾಗಿದೆ. ವೈದ್ಯರು ಈ ವಿಚಾರವನ್ನು ಸುರೇಶ್ ಅವರ ಮನೆಗೆ ತಿಳಿಸಿದ್ದರು.
ಸುರೇಶ್ ಅವರ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದು ತಾಯಿ ಗೌರಮ್ಮ ಆಘಾತಕ್ಕೊಳಗಾಗಿದ್ದರು. ಸಂಜೆ ಆರು ಗಂಟೆ ಹೊತ್ತಿಗೆ ಮನೆಯಲ್ಲೇ ಗೌರಮ್ಮ ಕೊನೆಯುಸಿರೆಳೆದಿದ್ದಾರೆ. ಇದಾಗಿ ಐದು ಗಂಟೆ ಕಳೆಯುವುದರಲ್ಲಿ ಸುರೇಶ್ ಅವರು ಕರೋನಾಗೆ ಬಲಿಯಾಗಿದ್ದಾರೆ. ಸುರೇಶ್ ಅವರಿಗೆ ಪತ್ನಿ, ಎಳನೆ ತರಗತಿ ಓದುತ್ತಿರುವ ಓರ್ವ ಪುತ್ರಿ ಮತ್ತು ನಾಲ್ಕೆನ ತರಗತಿ ಓದುತ್ತಿರುವ ಪುತ್ರಿ ಇದ್ದಾರೆ.
ಮಗಳ ಹುಟ್ಟುಹಬ್ಬದಂದೆ ಅಪ್ಪ ಸಾವು
ಮತ್ತೊಂದು ಪ್ರಕರಣದಲ್ಲಿ ಮಗಳ ಹುಟ್ಟುಹಬ್ಬದ ದಿನವೇ ತಂದೆ ಕರೋನಾಗೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ರಿಪ್ಪನ್ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿ ಯುವರಾಜ್ (43) ಕರೋನಾಗೆ ತುತ್ತಾಗಿದ್ದರು.
ವಾರದ ಹಿಂದೆ ಯುವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಮೃತರಾಗಿದ್ದಾರೆ. ಅವರ ಮಗಳು ಶಾಂಭಾವಿ ಹುಟ್ಟುಹಬ್ಬದ ದಿನವೇ ಕೊನೆಯುಸಿರೆಳೆದಿದ್ದಾರೆ. ಒಂದು ವಾರದ ಹಿಂದಷ್ಟೆ ಯುವರಾಜ್ ಅವರ ತಾಯಿ ಮೃತಪಟ್ಟಿದ್ದರು.