Advertisement
ಆಕೆ ನಡುಗುವ ಕೈಯಿಂದ ಬ್ರಷ್ ಹಿಡಿದು ಪೇಂಟಿಂಗ್ ಮಾಡುವುದಾಗಲಿ, ಸೂಜಿ ಹಿಡಿದು ಕಸೂತಿ ಮಾಡುವುದಾಗಲಿ ಸಾಧ್ಯವಿರಲಿಲ್ಲ. ಆದರೂ ಆಕೆ ಶಿಬಿರಕ್ಕೆ ಬಂದಿದ್ದಳು. ಹೀಗಾಗಿ ಆಕೆಯಿಂದ ಏನಾದರೂ ಮಾಡಿಸಬೇಕಿತ್ತು. ಎಲಿಸ್‌ಗೆ ನನ್ನಲ್ಲಿದ್ದ wooden block stamps ಕೊಟ್ಟೆ. ಪೈಂಟ್ ಅಲ್ಲಿ ಅದ್ದಿ ಬಟ್ಟೆ ಮೇಲೆ ಒತ್ತಿದರಾಯಿತು ಎಂದು ಆಕೆಯನ್ನು ಹುರಿದುಂಬಿಸಿದೆ. ಆದರೆ ಆಕೆ ಅಲ್ಲಿ ಎಲ್ಲರ ಮುಂದೆ ಅದನ್ನು ಪ್ರಯತ್ನ ಮಾಡುವ ಧೈರ್ಯ ಮಾಡಲಿಲ್ಲ. ಮತ್ತೆ ಆ ಚಿತ್ತಾರದ ಅಚ್ಚು ನೋಡಿ ನನ್ನ ಹತ್ತಿರವೂ ಈ ಥರದ ಬ್ಲಾಕ್ಸ್ ಇವೆ. ಮನೆಯಲ್ಲೇ ಮಾಡುತ್ತೇನೆ ಎಂದು ಪೈಂಟ್ ತೆಗೆದು ಕೊಂಡು ಹೋದವಳು 2 ವಾರ ವಾಪಸ್ ಶಿಬಿರಕ್ಕೆ ಬರಲೇ ಇಲ್ಲ. ಈಗ ನನಗೆ ನಿಜಕ್ಕೂ ಕಿರಿ ಕಿರಿ ಆಗಿತ್ತು.
Related Articles
Advertisement
ನನ್ನ ಮಗಳು ಹುಟ್ಟಿದ ಸಮಯವದು. ನನ್ನ ಅಮ್ಮ ಬೆಲ್ಫಾಸ್ಟ್ ಗೆ ಬಂದಿದ್ದರು. ಮಗುವನ್ನು ಪ್ರಾಮಿನಲ್ಲಿ ಹಾಕಿಕೊಂಡು ಅಮ್ಮ, ಮಗಳು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದೆವು. ಆ ಮಧ್ಯೆ ಶಾಪಿಂಗ್ ಮಾಲ್, ಬಸ್ ಸ್ಟಾಪ್, ಅಂಗಡಿಗಳಲ್ಲಿ ಎದುರಾಗುತ್ತಿದ್ದ ಅಜ್ಜಿಯರು ಪ್ರಾಮಿನೊಳಗೆ ಬಗ್ಗಿ ಮಗುವನ್ನು ನೋಡಿ. ಹೊಗಳಲು ಶುರು ಮಾಡುತ್ತಿದ್ದರು. ಅಮ್ಮನಿಗೆ ಇದು ವಿಚಿತ್ರ ಅನಿಸುತ್ತಿತ್ತು. “ಅಲ್ವೇ ಅವರ ಮಕ್ಕಳು ಅಷ್ಟು ಚಂದ ಇರ್ತಾವೆ. ಕೆಂಚು ಕೂದಲು, ಹಾಲು ಬಿಳುಪಿನ ಬಣ್ಣ. ಗುಲಾಬಿ ತುಟಿ. ತಿಂಗಳ ಮಗು ಎಂದರೆ ನಂಬಲಾರದಷ್ಟು ಬೆಳವಣಿಗೆ. ಅಷ್ಟೆಲ್ಲ ಇದ್ದು ನಮ್ಮ ಮಕ್ಕಳನ್ನು ಯಾಕೆ ಹೊಗಳ್ಳೋದು?’ ಎಂದು ಅವರು ಹೇಳುವಾಗ ನಾನು, “ನಿನ್ನ ಮೊಮ್ಮಗಳು ಜಗದೇಕ ಸುಂದರಿ, ನಿನಗೆ ಮಾತ್ರ ಅರ್ಥ ಆಗಿಲ್ಲ’ ಎಂದು ತಮಾಷೆಯ ಉತ್ತರ ಕೊಡುತ್ತಿದ್ದೆ. ಆದರೆ, ಹಿಂದೆಯೇ ಪ್ರಶ್ನೆಯು ಹುಟ್ಟುತ್ತಿತ್ತು. ಹೌದಲ್ವಾ ಯಾಕೆ? ಉತ್ತರವೂ ನನ್ನ ಮನದಲ್ಲೇಈ ಅಜ್ಜಿ ಎಂದರೆ ಹಾಗೇ ಅಲ್ಲವೇ? ವಿನಾಕಾರಣ ಪ್ರೀತಿ ತೋರುವ ತುಂಬು ಮನಸಿನವರು.
ಇಲ್ಲಿನ ಅಜ್ಜಿಯರ ಕುರಿತು ಇಷ್ಟವಾಗುವ ಇನ್ನೊಂದು ಗುಣ ವೆಂದರೆ ಅವರ ಧಿರಿಸು, ಅಲಂಕಾರ, ತಮಗೆ ತಾವು ಕೊಟ್ಟುಕೊಳ್ಳುವ ಆ ಸಮಯ. ಕಾಫಿ ಶಾಪ್‌ನಲ್ಲಿ ಗೆಳತಿಯರೊಂದಿಗೆ ಕುಳಿತು ಹರಟೆ ಹೊಡೆಯುತ್ತ ಕ್ರೋಷೆ, ನಿಟ್ಟಿಂಗ್ ಮಾಡುತ್ತಾ ಟೀ ಡ್ಯಾನ್ಸಿಂಗ್ ಬಗ್ಗೆ, ಕೈದೋಟದ ಬಗ್ಗೆ ಮಾತಾಡುತ್ತಿರುವ ಇವರನ್ನು ಕಂಡರೆ 90ರ ವಯಸ್ಸಿನಲ್ಲೂ ತನ್ನ ಅಡುಗೆ ತಾನೇ ಮಾಡಿಕೊಂಡು, ಬೇಸಗೆ ಬಂದರೆ ಹಪ್ಪಳ ಸಂಡಿಗೆ, ಮಳೆಗಾಲ ಬಂದರೆ ಪತ್ರೊಡೆ, ಚಿಗುರಿನ ತಂಬಳಿ ಬಗ್ಗೆ ಆಲೋಚಿಸುತ್ತಾ, ಕೊಟ್ಟಿಗೆಯಲ್ಲಿರುವ ಆಕಳು ಕರುವನ್ನು ನೋಡಿಕೊಂಡು, ಪಕ್ಕದ ಮನೆಯವರು ತಕರಾರಿನಲ್ಲಿರುವ ಬೇಲಿಯ ಅಕ್ಕ ಪಕ್ಕ ಸರಿದರೂ ಮೈಯೆಲ್ಲ ಕಿವಿಯಾಗುವ, ಫೋನ್‌ನಲ್ಲಿ ಗುಟ್ಟು ಹೇಳುತ್ತೇನೆ ಎಂದು ಪಿಸು ಮಾತಾಡುವ, ನನ್ನ ಸ್ವಾವಲಂಬಿ ಅಜ್ಜಿ ನೆನಪಾಗುತ್ತಾರೆ.
ಒಮ್ಮೆ ಬಸ್ ಸ್ಟಾಪ್‌ನಲ್ಲಿ ನಿಂತಿದ್ದೆ. ನಿಗದಿತ ಸಮಯಕ್ಕೆ ಬರುವ ಬಸ್ ಆ ದಿನ ಬಂದಿರಲಿಲ್ಲ. ಪಕ್ಕದಲ್ಲಿ ನಿಂತಿದ್ದ ಅಜ್ಜಿ ತುಂಬಾ ಸುಂದರವಾಗಿದ್ದರು. ತಡೆಯಲಾಗದೆ “ಯು ಅರ್ ಸೋ ಬ್ಯೂಟಿಫುಲ್.. ಅಂದೇ’. ಒಹ್ ತುಂಬಾ ವರ್ಷಗಳ ಅನಂತರ ಈ ಮಾತನ್ನು ಕೇಳಿದ್ದು ಭಾಳ ಖುಷಿಯಾಯಿತು ಎಂದರು. ಬಳಿಕ ತಮ್ಮನ್ನು ಎಥನಾ ಎಂದು ಪರಿಚಯಿಸಿಕೊಂಡು ಮಾತು ಮುಂದುವರಿಯಿತು. ಈ ನಡುವೆ ಎರಡು ಸಲ ಬಸ್ ಬರದಿದ್ದನ್ನು ಅಸಮಾಧಾನದಿಂದ ಹೇಳಿದೆ. ನಾನು ಪದೆಪದೇ ವಾಚ್ ನೋಡಿಕೊಳ್ಳುತ್ತಿದ್ದುದನ್ನು ಗಮನಿಸಿದ ಆಕೆ “ಮಗು ಕಾಯುವಿಕೆ ಎಷ್ಟು ಹಿತವಲ್ವಾ? ನೋಡು ಬಸ್ ಸಮಯಕ್ಕೆ ಬಂದಿದ್ದರೆ ನನ್ನ, ನಿನ್ನ ಭೇಟಿಯೇ ಆಗ್ತಿರಲಿಲ್ಲ. ಬದುಕಿನ ಇಳಿ ವಯಸ್ಸಿನಲ್ಲಿ ಇಂಥದ್ದೊಂದು ಮಾತು ಕೇಳುವುದು ಎಷ್ಟು ಖುಷಿ ಗೊತ್ತಾ? ಕಾಯುವಿಕೆಯನ್ನು ಯಾವುದೇ ಬೇಸರ ಇಲ್ಲದೆ ಖುಷಿಯಿಂದ ಕಳೆದು ಬಿಡು’ ಎನ್ನುವಷ್ಟರಲ್ಲಿ ಮೂರು ಬಸ್‌ಗಳು ಒಂದರ ಹಿಂದೆ ಒಂದು ಬಂದವು.
ಆ ಬಸ್‌ನಲ್ಲಿ ಟ್ರಾವೆಲ್ ಕಾರ್ಡ್ ಸ್ಕ್ಯಾನ್ ಆಗಲೇ ಇಲ್ಲ. ಬ್ಯಾಗ್ ಎಲ್ಲ ತಡಕಾಡಿದರೂ ಟಿಕೆಟ್‌ಗೆ ಆಗುವಷ್ಟು ಚಿಲ್ಲರೆ ಸಿಗಲಿಲ್ಲ. ಅಜ್ಜಿಯೇ ಮುಂದೆ ಬಂದು ನನ್ನ ಟಿಕೆಟ್ ಹಣ ಕೊಟ್ಟರು. ಸೀಟ್ ಮೇಲೆ ಕೂತು ಹಣ ಹುಡುಕಿ ಆಕೆಗೆ ವಾಪಸ್ ಕೊಡಲು ಹೋದರೆ, ತೆಗೆದುಕೊಳ್ಳಲೇ ಇಲ್ಲ.
ಹೀಗೆ ತುಂಬಾ ವರ್ಷಗಳ ಹಿಂದೆ ಉಡುಪಿ- ಬೆಳಗಾವಿ ಬಸ್‌ನಲ್ಲಿ ಬೇಸಗೆ ರಜೆಗೆ ಅಜ್ಜಿ ಮನೆಗೆ ಹೋಗುವಾಗ ದಾರಿಯಲ್ಲಿ ತಿನ್ನಲು ಅಮ್ಮ ಮಾಡಿಕೊಟ್ಟ ಸಿಹಿ ಪಡ್ಡು ತಂದಿದ್ದ ಡಬ್ಬಿ ತೆರೆದ ಗಳಿಗೆಯಲ್ಲೇ ಡ್ರೈವರ್ ಬ್ರೇಕ್ ಹಾಕಿದ ಭರಕ್ಕೆ ಪಡ್ಡುಗಳೆಲ್ಲ ಹಾರಿ ಸುತ್ತಮುತ್ತಲಿನ ಸೀಟಿನಡಿ ಸೇರಿದವು. ನನ್ನ ಪಕ್ಕ ಕುಳಿತಿದ್ದ ವಯಸ್ಸಾದ ಸಿಸ್ಟರ್ ಒಬ್ಬರು ತಮ್ಮ ಬುತ್ತಿ ಹಂಚಿಕೊಂಡಿದ್ದು, ಆ ಸ್ಪಂಜಿನಂಥ ದೋಸೆಗಳ ರುಚಿ ಈಗಲೂ ನೆನಪಾಗುತ್ತದೆ. ಹೀಗೆ ಆಗೀಗ ಸಿಕ್ಕಿ ಮುದ್ದುಗರೆಯುವ, ಮಾತು, ನಡೆಯಲ್ಲೇ ಪಾಠ ಹೇಳಿಕೊಡುವ ಈ ಹಿರಿಜೀವಗಳಿಗೆ ನಾನು ಚಿರಋಣಿ.
ಅಮಿತಾ ರವಿಕಿರಣ್,
ಬೆಲ್‌ಫಾಸ್ಟ್,
ನಾರ್ದನ್ ಐರೆಲಂಡ್