ಯುವ ಗಾಯಕ ಅಲೋಕ್ ಈಗಾಗಲೇ ಹಲವು ಕನ್ನಡ ಗೀತೆಗಳನ್ನು ರ್ಯಾಪ್ ಶೈಲಿಯಲ್ಲಿ ಹಾಡಿದ್ದು ಗೊತ್ತೇ ಇದೆ. ಈಗ ರಾಕ್ ಶೈಲಿಯಲ್ಲೊಂದು ಕನ್ನಡದ ಹಾಡನ್ನು ಹಾಡುವ ಮೂಲಕ ಗಮನಸೆಳೆದಿದ್ದಾರೆ. ಹೌದು, “ತಾಯಿ ಕನ್ನಡ’ ಎಂಬ ಹೆಸರಿನ ಹೊಸ ವೀಡೀಯೋ ಹಾಡೊಂದನ್ನು ಹಾಡುವುದರ ಜತೆಗೆ ತಾವೇ ಸಾಹಿತ್ಯ ಬರೆದು ಸಂಗೀತವನ್ನೂ ನೀಡಿದ್ದಾರೆ.
ಅದಷ್ಟೇ ಅಲ್ಲ, ಆ ಹಾಡನ್ನು ಸ್ವತಃ ಅಲೋಕ್ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಿದ್ದಾರೆ. ಅಂದಹಾಗೆ, ಆ ಹಾಡಲ್ಲಿ ಶಾಲೆಯ ಮಕ್ಕಳು ಹಾಗು ಕೆಲ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ನಟ ಶ್ರೀಮುರಳಿ ಅವರು ವೀಡಿಯೋ ಸಾಂಗ್ ಬಿಡುಗಡೆ ಮಾಡುವ ಮೂಲಕ ಅಲೋಕ್ ಹಾಗು ತಂಡಕ್ಕೆ ಶುಭಹಾರೈಸಿದ್ದಾರೆ.
ಅಂದಹಾಗೆ, ಈ ಹಾಡನ್ನು ಬೆಂಗಳೂರು, ಮುರುಡೇಶ್ವರ, ಜೋಗ್‌ಫಾಲ್ಸ್ ಸೇರಿದಂತೆ ಇನ್ನಿತರೆ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಹಿಟ್ಸ್ ದಾಖಲಾಗಿರುವುದು ವಿಶೇಷ. ಈ ಹಾಡಲ್ಲಿ ಕನ್ನಡ ಭಾಷೆ, ನೆಲ, ಜಲ ಹಾಗು ಉಳಿವಿನ ಕುರಿತು ಸಂದೇಶವಿದೆ. ಇನ್ನು, ಇನ್‌ಫೋಸಿಸ್ ಸುಧಾಮೂರ್ತಿ, ನಾಯಕಿಯರಾದ ಮಯೂರಿ, ಸಂಯುಕ್ತ ಹೊರನಾಡು, ಆಯುಷಿ ಇತರರು ಬೆಂಬಲಿಸಿದ್ದಾರೆ.
ಈ ವಿಶೇಷ ಎನಿಸುವ ಹಾಡಲ್ಲಿ ಗಿಟಾರ್, ಡ್ರಮ್ಸ್ ಹಾಗು ಇನ್ನಿತರೆ ಉಪಕರಣಗಳನ್ನು ಬಳಸಲಾಗಿದೆ. ಸುನಿತಾ ಮಂಜುನಾಥ್ ಈ ವೀಡಿಯೋ ಹಾಡನ್ನು ನಿರ್ಮಿಸಿದ್ದಾರೆ. ಕನ್ನಡಕ್ಕೆ ಸಂಬಂಧಿಸಿ ಈ ಹಾಡನ್ನು ನವೆಂಬರ್ ಒಂದರಂದು ಬಿಡುಗಡೆ ಮಾಡುವುದಕ್ಕಿಂತ, ಒಂದು ವಾರದ ಬಳಿಕ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ, “ತಾಯಿ ಕನ್ನಡ’ ವೀಡಿಯೋ ಹಾಡನ್ನು ಬಿಡುಗಡೆ ಮಾಡಿ, ಕನ್ನಡಿಗರಿಗೆ ಅರ್ಪಿಸಿರುವುದಾಗಿ ಹೇಳುತ್ತಾರೆ ಅಲೋಕ್.