ಧಾರವಾಡ: ತಾಯಿ ಜೀವಂತ ದೇವತೆ. ಅವಳು ಪುಣ್ಯಕ್ಷೇತ್ರದಷ್ಟೇ ಪವಿತ್ರಳು ಎಂದು ಸೊಲ್ಲಾಪುರ ಬಿ.ಎಡ್. ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಡಾ| ಚಿತ್ರಾ ನಾಯಕ ಹೇಳಿದರು.
ಕವಿಸಂನಲ್ಲಿ ಕುಸುಮ ವಿಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ತಾಯಿಯ ದೃಷ್ಟಿಯಲ್ಲಿ ಗಂಡು ಮಗು-ಹೆಣ್ಣು ಮಗು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವೇ ಇಲ್ಲ. ಜಗತ್ತಿನಲ್ಲಿ ತನಗಾಗಿ ಏನೊಂದನ್ನು ಬಯಸದ ನಿಸ್ವಾರ್ಥ ಮತ್ತು ಕರುಣಾಮಯಿ ಎಂದರೆ ತಾಯಿ ಮಾತ್ರ. ಅಂತಹ ತ್ಯಾಗಮಯಿಯಾದ ತಾಯಿ ನೀಡಿದ ಒಳ್ಳೆಯ ಸಂಸ್ಕಾರ ಶಿಕ್ಷಣದಿಂದಲೇ ಡಾ| ರಾಜನ್ ದೇಶಪಾಂಡೆ ಜೀವನದಲ್ಲಿ ಸಾಧನೆ ಹಾಗೂ ಸಫಲತೆ ಹೊಂದಲು ಸಾಧ್ಯವಾಯಿತು. ಡಾ| ದೇಶಪಾಂಡೆ ಅವರು ಕವಿಸಂನಲ್ಲಿ ದತ್ತಿ ಇಡುವ ಮೂಲಕ ಮಮತೆಯ ಮಾತೆಯನ್ನು ನಿರಂತರವಾಗಿ ಸ್ಮರಿಸುವುದು ಪುಣ್ಯದ ಕಾರ್ಯ ಎಂದರು.
ದತ್ತಿ ಆಶಯ ಕುರಿತು ಮಾತನಾಡಿದ ಡಾ| ರಾಜನ್ ದೇಶಪಾಂಡೆ, ಜಗತ್ತಿನ ಅತ್ಯುತ್ತಮ ಶಿಕ್ಷಕಿ ತಾಯಿ. ಅವಳಿಗೆ ಮಕ್ಕಳ ಬಗ್ಗೆ ಇರುವ ಪ್ರೀತಿ, ವಾತ್ಸಲ್ಯ, ಮಮಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯ ಸೇವೆ ಅವಳು ಜೀವಂತ ಇದ್ದಾಗ ಮಾಡುವ ಸದ್ಭುದ್ಧಿ ಬೆಳೆಯಬೇಕು ಎಂದರು. ಕವಿಸಂನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಹತ್ತಿಮತ್ತೂರಿನ ಶ್ರೇಷ್ಠ ತಾಯಿ ಗೌರವ ಸನ್ಮಾನಕ್ಕೆ ಪಾತ್ರರಾದ ಬಸಮ್ಮ ಕಬ್ಬೇರ ಅವರನ್ನು ಸನ್ಮಾನಿಸಲಾಯಿತು. ಯಮನಪ್ಪ ಕಬ್ಬೇರ ತಮ್ಮ ತಾಯಿಯ ಕುರಿತು ಮಾತನಾಡಿದರು. ಕುಸುಮಾ ದೇಶಪಾಂಡೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ| ಶೈಲಜಾ ಅಮರಶೆಟ್ಟಿ ವಂದಿಸಿದರು.