Advertisement
ಮಂಗಳೂರು: ಸಾಮಾನ್ಯವಾಗಿ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಆಗಿಸಬೇಕೆಂದು ಹೆತ್ತವರು ಸದಾ ಶ್ರಮಿಸುತ್ತಿರುತ್ತಾರೆ. ಆದರೆ ಇಲ್ಲಿ ಹಾಗಲ್ಲ ಮಗನನ್ನು ದೇಶ ಸೇವೆಗೇ ಸಮರ್ಪಿಸಬೇಕು ಎಂಬ ಆಕಾಂಕ್ಷೆ ತಾಯಿಗೆ ತೀವ್ರವಾಗಿತ್ತು. ಅದರಂತೆ ಮಗನೂ ದೇಶಸೇವೆಗೆ ಹೊರಟ. ಆ ಪುತ್ರನೇ ಕುಳಾಯಿಯ ಹವಾಲ್ದಾರ್ ದೀಪಕ್ ಐತಾಳ್.ತಾಯಿ, ಪತ್ನಿ ಹಾಗೂ ಮಗಳೊಂದಿಗೆ ದೀಪಕ್ ಐತಾಳ್
ಬಂಟ್ಸ್‌ಹಾಸ್ಟೆಲ್ ರಾಮಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸವಿತಾ ಐತಾಳ್ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಿವು ಮೂಡಿಸುತ್ತಿದ್ದ ಸವಿತಾ ಐತಾಳ್, ಎಳವೆಯಿಂದಲೇ ಮಗನಲ್ಲಿ ದೇಶಸೇವೆಯ ಅರಿವು ಬಿತ್ತಿದರು. ಅದು ಫಲವನ್ನೂ ಕೊಟ್ಟಿತು. ಕಳೆದ 19 ವರ್ಷಗಳಿಂದ ಭೂಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಜರ್ ನೇಗಿ ಸ್ಫೂರ್ತಿ ಮಾತು
ಡಿಪ್ಲೊಮಾ ಶಿಕ್ಷಣ ಪೂರೈಸಿದ ಬಳಿಕ ಗ್ಯಾರೇಜ್‌ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ಅವರಿಗೆ, ಗ್ಯಾರೇಜ್‌ಗೆ ಕಾರು ಸರ್ವೀಸ್‌ಗೆ ಬರುತ್ತಿದ್ದ ಸುಭೇದಾರ್ ಮೇಜರ್ ನೇಗಿ ಅವರ ಪರಿಚಯವಾಯಿತು. ಭಾರತೀಯ ಸೇನೆಯ ಕುರಿತು ಅವರು ಹೇಳುತ್ತಿದ್ದ ಪ್ರತಿ ಮಾತುಗಳು ಸ್ಫೂರ್ತಿಯಾಗುತ್ತಿದ್ದವು. ‘ದೇಶಪ್ರೇಮದ ಬಗ್ಗೆ ಮನೆಯಲ್ಲಿ ಎಳವೆಯಲ್ಲಿಯೇ ಪಾಠ ಸಿಕ್ಕಿದರೆ, ಸುಭೇದಾರ್ ಮೇಜರ್ ನೇಗಿ ಅವರ ಪ್ರೇರಣೆಯೂ ನನ್ನ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ’ ಎನ್ನುತ್ತಾರೆ ದೀಪಕ್.
Related Articles
ಮಗನನ್ನು ಸೇನೆಗೆ ಸೇರಿಸಬೇಕೆಂಬ ತಾಯಿಯ ತುಡಿತಕ್ಕೆ ಮಗನೂ ಸ್ಪಂದಿಸಿ ಹೊರಟಾಗ ಸಂಬಂಧಿಕರೆಲ್ಲ ಕಳುಹಿಸುವುದೇ ಬೇಡ ಎಂದಿದ್ದರು. ಸೇನೆಗೆ ಸೇರುವ ಬಗ್ಗೆ ಪ್ರತಿಯೊಬ್ಬರಲ್ಲೂ ಭಯ ಆವರಿಸಿತ್ತು. ಆದರೆ ತಾಯಿ ಮಾತ್ರ ದಿಟ್ಟತನದಿಂದಲೇ ಮಗನನ್ನು ದೇಶಸೇವೆಗೆ ಕಳುಹಿಸಿ ಕೊಟ್ಟಿದ್ದರು. ಇದೀಗ 19 ವರ್ಷಗಳಿಂದ ರಾಷ್ಟ್ರ ರಕ್ಷಣೆಯಲ್ಲಿ ಧನ್ಯತಾಭಾವ ಕಾಣುತ್ತಿದ್ದಾರೆ ದೀಪಕ್.
Advertisement
ಏರ್‌ಡಿಫೆನ್ಸ್‌ನಲ್ಲಿ 13 ವರ್ಷ ಕೆಲಸಉರ್ವ ಕೆನರಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಕುಶಾಲನಗರ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ, ಮಂಗಳೂರು ಕೆಪಿಟಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. 7ನೇ ತರಗತಿಯಲ್ಲಿದ್ದಾಗ ತಂದೆ ರಾಮಕೃಷ್ಣ ಐತಾಳ್ ಅವರು ಅಗಲಿದ್ದು ಬಳಿಕ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಲ್ಲದೆ, ದೀಪಕ್ ಅವರನ್ನು ಸೇನೆಗೆ ಸೇರಿಸುವಲ್ಲೂ ಯಶಸ್ವಿಯಾಗಿದ್ದಾರೆ. 2000ರ ಜ.4ರಂದು ಸೇನೆಗೆ ಸೇರಿದ ದೀಪಕ್ ಅವರು ಸೇನೆಯ ಏರ್ ಡಿಫೆನ್ಸ್‌ನಲ್ಲಿ 13 ವರ್ಷಗಳ ಸೇವೆಯ ಬಳಿಕ ಪಠಾಣ್‌ಕೋಟ್, ಜಮ್ಮು -ಕಾಶ್ಮೀರ, ಗುಜರಾತ್, ಬರೋಡ, ಜೋಧ್‌ಪುರ್, ದಿಲ್ಲಿ, ದಕ್ಷಿಣ ಆಫ್ರಿಕಾದ ಕಾಂಗೋ (ಶಾಂತಿ ಪಾಲನಾ ಪಡೆ) ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಗ್ವಾಲಿಯರ್‌ನಲ್ಲಿ ಆರ್ಮಿ ಏವಿಯೇಶನ್ ಆಗಿದ್ದು, ಪ್ರಸ್ತುತ ಜಮ್ಮು -ಕಾಶ್ಮೀರದ ಶ್ರೀನಗರದಲ್ಲಿ ಸೇವಾ ನಿರತರಾಗಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಲೇ ಖಾಸಗಿಯಾಗಿ ಪಿಯು, ಬಿಕಾಂ ಶಿಕ್ಷಣ ಪೂರೈಸಿದ್ದಾರೆ. ಪತ್ನಿ ರಾಜ್ಯವರ್ಧಿನಿ ಐತಾಳ್ ಗೃಹಿಣಿಯಾಗಿದ್ದರೆ, ಮಗಳು ಐಸಿರಿ ಐತಾಳ್ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಧೈರ್ಯದಿಂದ ಮಗನನ್ನು ಕಳುಹಿಸಿದೆ
ಮಗ ಹುಟ್ಟಿದಾಗಲೇ ಅವನನ್ನು ದೇಶಸೇವೆಗೆ ಕಳುಹಿಸಬೇಕೆಂದು ನಿರ್ಧರಿಸಿದ್ದೆ. ಅದರಂತೆ ಅವನು ದೇಶರಕ್ಷಣೆಗೆ ಹೋಗಿದ್ದಾನೆ. ಆಗೆಲ್ಲ ಸಂಬಂಧಿಕರು ಕಳುಹಿಸಬೇಡಿ ಎಂದು ಭಯದ ಮಾತುಗಳನ್ನಾಡಿದ್ದರು. ಆದರೆ ನಾನು ಧೈರ್ಯದಿಂದ ಸೇನೆಗೆ ಕಳುಹಿಸಿಕೊಟ್ಟೆ. ದೇಶ ರಕ್ಷಣೆ ಮಾಡುತ್ತಿರುವ ನನ್ನ ಮಗನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ.
-ಸವಿತಾ ಐತಾಳ್, ದೀಪಕ್ ತಾಯಿ ಪತಿಯ ಬಗ್ಗೆ ಹೆಮ್ಮೆ
ಸೇನೆಯಲ್ಲಿ ಕಾರ್ಯ ನಿರ್ವಹಿಸುವುದು ಎಂದರೆ ಸುಲಭವಲ್ಲ. ಹಲವಾರು ಸವಾಲುಗಳಿರುತ್ತವೆ. ಆದರೆ ಅವೆಲ್ಲವನ್ನು ಎದುರಿಸಿ ದೇಶಸೇವೆ ಯನ್ನೇ ಉಸಿರಾಗಿಸಿಕೊಂಡಿರುವ ಪತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.
–ರಾಜ್ಯವರ್ಧಿನಿ ಐತಾಳ್,
ದೀಪಕ್ ಅವರ ಪತ್ನಿ ದೇಶಸೇವೆಯ ತುಡಿತವಿರಲಿ
ರಾಷ್ಟ್ರ ರಕ್ಷಣೆ ಕಾಯಕದಲ್ಲಿ ಹಲವಾರು ಸವಾಲುಗಳಿವೆ. ಆ ಸವಾಲುಗಳನ್ನೆಲ್ಲ ಎದುರಿಸಿ ತಾಯಿ ಭಾರತಿಯನ್ನು ರಕ್ಷಿಸುವ ಕೈಂಕರ್ಯ ತೊಟ್ಟಾಗ ಖುಷಿಯಾಗುತ್ತದೆ. ಯುವಕರು ದೇಶಸೇವೆಯ ತುಡಿತ ಹೊಂದಿರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕೆಂಬ ಆಶಯ ನನ್ನದು.
-ದೀಪಕ್ ಐತಾಳ್ ಧನ್ಯಾ ಬಾಳೆಕಜೆ