Advertisement

ಮದರ್‌ ಇಂಡಿಯಾ; 14 ವರ್ಷದ ಮಗನನ್ನು ಎತ್ತಿಕೊಂಡೇ ಹೋಗ್ತಿದ್ದ ತಾಯಿ…

10:08 AM Dec 12, 2019 | mahesh |

ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿಯಲ್ಲಿ ಇದ್ದಾಳೆ. ಹದಿನಾಲ್ಕು ವರ್ಷದ ವಿಕಲಚೇತನ ಮಗನನ್ನು ದಿನವೂ ಶಾಲೆಗೆ ಹೊತ್ತು ಸಾಗುವ ಆಕೆಯನ್ನು ದೇವತೆ ಎನ್ನದೆ ಬೇರೆ ಏನೆಂದು ಕರೆಯಬಹುದು?

Advertisement

ರಾಮಾಯಣದ ಶ್ರವಣಕುಮಾರನನ್ನು ನೆನಪಿಸುವ ಈ ತಾಯಿಯ ಹೆಸರು ಜಯಲಕ್ಷ್ಮಿ. ಅಪ್ಪಟ ಅನಕ್ಷರಸ್ಥ, ಹಳ್ಳಿ ಹೆಂಗಸು. ಗಂಡನ ಸಾವಿನ ನಂತರ, ಮೂರು ಮಕ್ಕಳಿರುವ ಕುಟುಂಬದ ಏಕೈಕ ಆಧಾರ ಸ್ತಂಭ. ಅದರಲ್ಲೂ ಹಿರಿಯ ಮಗ, 14 ವರ್ಷದ ರಾಜೇಶ್‌ ಬಾಬು ವಿಕಲಚೇತನ. ಆತನ ಎರಡೂ ಕಾಲುಗಳಲ್ಲಿ ಸ್ವಾಧೀನವಿಲ್ಲ. ತಾನೂ ಎಲ್ಲರಂತೆ ಓದಬೇಕು, ವಿದ್ಯಾವಂತನಾಗಬೇಕು ಎಂದು ಕನಸು ಕಾಣುತ್ತಿರುವ ರಾಜೇಶ್‌ಗೆ ಬೆನ್ನೆಲುಬಾಗಿ ನಿಂತಿರುವ ಅಮ್ಮ, ಅವನನ್ನು ಪ್ರತಿನಿತ್ಯ 8 ಕಿ.ಮೀ. ಹೆಗಲ ಮೇಲೆ ಹೊತ್ತೂಯ್ದು ಶಾಲೆ ಕಲಿಸುತ್ತಿದ್ದಾರೆ.

ಕಾಲುಗಳ ಸ್ವಾಧೀನ ತಪ್ಪಿತು
ಎಲ್ಲ ಮಕ್ಕಳಂತೆ ಕುಣಿದು, ಜಿಗಿದು ನಲಿಯುತ್ತಿದ್ದ ರಾಜೇಶ್‌ಗೆ 10ನೇ ವಯಸ್ಸಿನಲ್ಲಿ ಎರಡೂ ಕಾಲುಗಳ ಸ್ವಾಧೀನ ತಪ್ಪಿದವು. ಮಗನ ಸ್ಥಿತಿ ಕಂಡು ಮರುಗಿದ ಹೆತ್ತವರು, ಮಗನನ್ನ ಎತ್ತಿಕೊಂಡು ಹತ್ತಾರು ಆಸ್ಪತ್ರೆ, ದೇವಸ್ಥಾನಗಳನ್ನು ಸುತ್ತಿದರು. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಹೀಗಿರುವಾಗ, ತಂದೆಯೂ ತೀರಿಕೊಂಡರು. ಅಮ್ಮನ ಸಹಾಯದಿಂದ ರಂಗವ್ವನಹಳ್ಳಿಯಲ್ಲೇ ಇದ್ದ ಶಾಲೆಯಲ್ಲಿ ರಾಜೇಶ್‌ 7ನೇ ತರಗತಿ ಮುಗಿಸಿದ.

ನಿಂಗೆ ನಾನಂದ್ರೆ ಇಷ್ಟ ಇಲ್ವಾ?
ಆ ಊರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ಅವನನ್ನು ದೂರದ ಶಾಲೆಗೆ ಕರೆದೊಯ್ಯುವುದು ಕಷ್ಟ ಎನ್ನಿಸಿದಾಗ ಜಯಲಕ್ಷ್ಮಿ, ಇಷ್ಟು ಓದಿದ್ದು ಸಾಕು, ಇನ್ಮುಂದೆ ಮನೆಯಲ್ಲಿಯೇ ಇರು ಎಂದುಬಿಟ್ಟರು. ಆಗ ರಾಜೇಶ್‌- “ಅಮ್ಮಾ, ನಿಂಗೆ ನಾನಂದ್ರೆ ಇಷ್ಟ ಇಲ್ಲ ಅಲ್ವಾ? ನಿಂಗೆ ಅವರಿಬ್ಬರ ಮೇಲೆ ಮಾತ್ರ ಪ್ರೀತಿ. ಅದಕ್ಕೇ ನೀನು ನನ್ನನ್ನು ಶಾಲೆಗೆ ಕಳಿಸುತ್ತಿಲ್ಲ’ ಎಂದು ಗಲಾಟೆ ಮಾಡಿದ. ಶಾಲೆಗೆ ಹೋಗಲೇಬೇಕು ಅಂತ ಹಠ ಹಿಡಿದು, ಊಟ ಬಿಟ್ಟ.

ಹೊತ್ತುಕೊಂಡೇ ಸಾಗಿದರು
ಸರಿ, ಎಷ್ಟು ಕಷ್ಟವಾದರೂ ಮಗನನ್ನು ಓದಿಸಲೇಬೇಕು ಅಂತ ನಿರ್ಧರಿಸಿದ ಜಯಲಕ್ಷ್ಮಿ, ನಾಲ್ಕು ಕಿ.ಮೀ. ದೂರದ ರಾಣಿಕೆರೆ ಶಾಲೆಗೆ ರಾಜೇಶನನ್ನು ಸೇರಿಸಿದರು. ಹುಡುಗನಿಗೆ ಮೂರು ಚಕ್ರದ ಸೈಕಲ್‌, ಹಾಸ್ಟೆಲ್‌ನಲ್ಲಿ ಸೀಟ್‌ ಕೂಡಾ ಸಿಕ್ಕಿತು. ಆದರೆ, ಸೈಕಲ್‌ ತಿರುಗಿಸಿ ಶಾಲೆಗೆ ಹೋಗುವಷ್ಟು ತ್ರಾಣ ಅವನಲ್ಲಿ ಇರಲಿಲ್ಲ. ಹಾಸ್ಟೆಲ್‌ನಲ್ಲಿ ಬದುಕುವುದು ಕೂಡಾ ಆ ಚಿಕ್ಕ ಹುಡುಗನಿಗೆ ಕಷ್ಟವೇ. ಇನ್ನು, ರಂಗವ್ವನಹಳ್ಳಿಯಿಂದ ಶಾಲೆಗೆ ಸಾರಿಗೆ ಸೌಕರ್ಯವೂ ಸರಿ ಇರಲಿಲ್ಲ. ಹಾಗಾಗಿ, ಮಗನನ್ನು ಪ್ರತಿ ದಿನ ಹೆಗಲ ಮೇಲೆ ಹೊತ್ತೂಯ್ದು ಶಾಲೆ ತಲುಪಿಸತೊಡಗಿದರು ಜಯಲಕ್ಷ್ಮಿ.

Advertisement

ದಿನಕ್ಕೆ ಎಂಟು ಕಿ.ಮೀ.
14 ವರ್ಷದ ಮಗನನ್ನು, ಅವನ ಚೀಲವನ್ನು ಹೊತ್ತುಕೊಂಡು ಬೆಳಗ್ಗೆ ನಾಲ್ಕು ಕಿ.ಮೀ. ನಡೆಯುತ್ತಿದ್ದ ಜಯಲಕ್ಷ್ಮಿ, ಮಗನನ್ನು ಶಾಲೆಯ ಒಳಗೆ ಕೂರಿಸಿ, ಶಾಲೆಗೆ ಸಮೀಪವಿದ್ದ ಮರದ ಕೆಳಗೆ ಕುಳಿತು ದಿನ ಕಳೆಯುತ್ತಿದ್ದರು. ಸಂಜೆ ಮತ್ತೆ ನಾಲ್ಕು ಕಿ.ಮೀ. ನಡೆದು ವಾಪಸ್‌ ಬರುತ್ತಿದ್ದರು. ಈ ಪಾದಯಾತ್ರೆ ಆರು ತಿಂಗಳು ನಡೆದಿದೆ!

ಸರ್ಕಾರಿ ಕೆಲಸ ಸಿಕ್ಕರೆ…
ರಾಜೇಶ್‌ ಬಾಬುವಿನ ಶ್ರವಣ ಶಕ್ತಿಯೂ ಕೊಂಚ ಮಂದವಾಗಿದೆ. ಶಿಕ್ಷಕರು ಮಾಡುವ ಪಾಠವನ್ನು ಅಂದಾಜಿನಲ್ಲಿ ಕೇಳಿಸಿಕೊಂಡು, ಸ್ವಪ್ರಯತ್ನದಿಂದ ಓದಿ, ಪರೀಕ್ಷೆಯಲ್ಲಿ ಅಂಕ ಗಳಿಸುತ್ತಿದ್ದಾನೆ. ಮಗನಿಗೆ ಯಾವುದಾದರೂ ಒಂದು ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಅಂತ ತಾಯಿ ಆಸೆಪಟ್ಟರೆ, ಮಗರಾಯ, “ಅಮ್ಮಾ, ನಾನು ಚೆನ್ನಾಗಿ ಓದಿ ಕೆಲಸ ಹಿಡಿದು, ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ’ ಎಂದು ಆಕೆಯಲ್ಲಿ ತೃಪ್ತಿಯ ನಗು ಮೂಡಿಸುತ್ತಾನಂತೆ.

ಊಟ ಬೇಡ ಅಂತಿದ್ದ
ಅಮ್ಮ ದಿನವೂ ನನ್ನನ್ನು ಹೊತ್ತು ಓಡಾಡುತ್ತಿದ್ದಾಳೆ. ನಾನು ಚೆನ್ನಾಗಿ ಊಟ ಮಾಡಿ, ತೂಕ ಹೆಚ್ಚಿದರೆ ಅಮ್ಮನಿಗೆ ಕಷ್ಟವಾಗುತ್ತದೆ ಎಂದು ರಾಜೇಶ್‌, ಹಗಲು ಹೊತ್ತಿನಲ್ಲಿ ಊಟ ಬೇಡ ಅನ್ನುತ್ತಿದ್ದನಂತೆ! ಬೆಳಗ್ಗೆ ಮತ್ತು ಮಧ್ಯಾಹ್ನ ಟೀ. ಬಿಸ್ಕೆಟ್‌ ಅಷ್ಟೇ ತಿನ್ನುತ್ತಿದ್ದ. ರಾತ್ರಿ ಮಾತ್ರ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದನಂತೆ. ಮಗನ ಭಾರದ ಜತೆಗೆ ಪುಸ್ತಕಗಳ ಚೀಲ, ನೀರಿನ ಬಾಟಲಿ ಕೂಡಾ ಇರುತ್ತಿದ್ದುದರಿಂದ ಅಮ್ಮನಿಗೆ ಮತ್ತೂ ಕಷ್ಟವಾಗುತ್ತಿತ್ತು. ಹಾಗಾಗಿ, ಕೆಲವು ಪುಸ್ತಕಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದ ರಾಜೇಶ್‌, ನೀರಿನ ಬಾಟಲಿಯೂ ಬೇಡ ಅನ್ನುತ್ತಿದ್ದ.

ಇಲಾಖೆಯಿಂದ ಆಟೋ ವ್ಯವಸ್ಥೆ
ತಾಯಿ-ಮಗನ ಕಷ್ಟಕ್ಕೆ ಈಗ ಶಿಕ್ಷಣ ಇಲಾಖೆ ಸ್ಪಂದಿಸಿದೆ. ಬಾಲಕನನ್ನು ನಿತ್ಯವೂ ಶಾಲೆಗೆ ಕರೆದೊಯ್ಯಲು ಹಾಗೂ ಮನೆಗೆ ವಾಪಸ್‌ ಬಿಡಲು ಆಟೋ ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ, ಸ್ಕೂಲ್‌ ಬ್ಯಾಗ್‌ನಲ್ಲಿ ಎಲ್ಲ ಪುಸ್ತಕ ಇಟ್ಟು, ನೀರಿನ ಬಾಟಲಿಯನ್ನೂ ಇಡಬಹುದು ಎನ್ನುವುದು ತಾಯಿ ಜಯಲಕ್ಷಿ¾ಯ ಸಂತಸ.

ರಂಗವ್ವನಹಳ್ಳಿಯ ಜಯಲಕ್ಷ್ಮಿ ಅವರಿಗೆ ಪಗಲಬಂಡೆಯ ವೀರಣ್ಣ ಅವರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು. ರಾಜೇಶ್‌ ಬಾಬು, ಸತೀಶ್‌ ಬಾಬು, ಶಂಕರ ವಿಜಯ ಎಂಬ ಹೆಸರಿನ ಅವರಿಗೆ ಕ್ರಮವಾಗಿ 14, 12, 10 ವರ್ಷ. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ವೀರಣ್ಣ, ಮೂರೂವರೆ ವರ್ಷದ ಹಿಂದೆ ಕಿಡ್ನಿ ಸಮಸ್ಯೆಯಿಂದ ನಿಧನರಾದರು. ಸ್ವಂತ ಮನೆ, ಜಮೀನು, ಎರಡೂ ಇಲ್ಲದ ಕಾರಣ, ಮಕ್ಕಳನ್ನು ಕಟ್ಟಿಕೊಂಡು ಜಯಲಕ್ಷ್ಮಿ ತವರಿಗೆ ವಾಪಸ್‌ ಬರಬೇಕಾಯ್ತು. ಕೂಲಿ ಮಾಡಿಕೊಂಡು ಬದುಕಲು ನಿರ್ಧರಿಸಿದರು.

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next