ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರ ಅಂತ ಕೇಳ್ಪಟ್ಟೆ. ಇಷ್ಟು ಅಕ್ಕಿಗೆ ಇಷ್ಟು ನೀರು, ಇಷ್ಟು ಜನ ಊಟಕ್ಕಿದ್ದರೆ ಈ ಪಾತ್ರೆಯಲ್ಲಿ ಅನ್ನ… ಹೀಗೆ ಅಡುಗೆಯ ಲೆಕ್ಕಾಚಾರವನ್ನು ತಾಳ್ಮೆಯಿಂದ ಕಲಿಸಿ ಕೊಡಿ. ನಾನು ವಿಧೇಯ ವಿದ್ಯಾರ್ಥಿನಿಯಾಗಿ ಕಲಿಯುತ್ತೇನೆ. ಆತುರ- ಕೋಪಗಳಿಗೆ ನಾ ಫೇಮಸ್ಸು. ನಿಧಾನವಾಗಿ ತಿದ್ದಿ ತೀಡಿದರೆ ನಿಮ್ಮಂತೆಯೇ ಒಳ್ಳೆ ಗೃಹಿಣಿಯಾಗುತ್ತೇನೆ…
ಡಿಯರ್ ಅತ್ತೆ,
ನನ್ನ ನಿಮ್ಮ ಸಂಬಂಧ ಇನ್ನಷ್ಟೇ ಶುರುವಾಗಬೇಕಿದೆ. ನಿಮ್ಮ ಮಗನ ಜೊತೆ ನಾನು ಸಪ್ತಪದಿ ತುಳಿಯುವುದು ಅಂತ ನಿಶ್ಚಯವಾದ ದಿನದಿಂದಲೇ, “ಸೊಸೆ ಹೇಗೋ, ಏನೋ?’ ಎಂಬ ದುಗುಡ ನಿಮ್ಮನ್ನು ಕಾಡುತ್ತಿರಬಹುದು. ಆ ಆತಂಕ ನನಗೂ ಆಗುತ್ತಿದೆ. ಎಲ್ಲಾ ಹೆಣ್ಣುಮಕ್ಕಳೂ ಅಷ್ಟೇ, ಗಂಡನನ್ನು ಒಪ್ಪಿಕೊಂಡಷ್ಟು ಸುಲಭವಾಗಿ ಅತ್ತೆಯನ್ನು ಒಪ್ಪಿಕೊಳ್ಳುವುದಿಲ್ಲವಂತೆ. ಅತ್ತೆಯೂ ಅಮ್ಮನಂತೆ ಎಂದುಕೊಂಡರೆ ಸಂಸಾರ ಹಾಲು-ಜೇನು ಅಂತ ಅಮ್ಮ ಹೇಳುತ್ತಿರುತ್ತಾಳೆ. ಅದಕ್ಕಾಗಿ ನಾವಿಬ್ಬರೂ ಸ್ವಲ್ಪ ಸ್ವಲ್ಪ ಬದಲಾಗಬೇಕಲ್ವಾ? ಏನಂತೀರಿ?
ಬೆಂಗ್ಳೂರಲ್ಲಿ ಬೆಳೆದ ನಾನು ಕೊಂಚ ಮಾಡ್ರನ್ ಮೋಹಕ್ಕೆ ಒಳಗಾದವಳೇ. ಹಾಗಂತ ಅದರಿಂದ ಹೊರ ಬರುವುದಿಲ್ಲ ಅಂತಲ್ಲ. ನಿಮ್ಮೂರಿನ ಸಂಸ್ಕೃತಿ, ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ಆ ಸಮಯದಲ್ಲಿ ನೀವು ನನ್ನನ್ನು ದೂರಿದರೆ, ನನ್ನ ಮೇಲೆ ಸಿಟ್ಟಾದರೆ ನಮ್ಮಿಬ್ಬರ ಸಂಬಂಧ ಹಳಸಬಹುದು. ಮದುವೆಯಾದ ಹೊಸತರಲ್ಲಿ ಅಡುಗೆ-ಉಡುಗೆ ವಿಚಾರದಲ್ಲೇ ಅತ್ತೆ- ಸೊಸೆ ನಡುವೆ ಭಿನ್ನಾಭಿಪ್ರಾಯ ಬರುವುದಂತೆ. “ಬೇರೆ ಡ್ರೆಸ್‌ಗಿಂತ ಸೀರೆಯಲ್ಲೇ ನೀನು ಜಾಸ್ತಿ ಚಂದ ಕಾಣಿ¤’ ಅಂತ ಸಕಾರಾತ್ಮಕವಾಗಿ ತಿದ್ದಿದರೆ ನನಗೂ ಬೇಸರವಾಗದು. ಚುಚ್ಚು ಮಾತುಗಳಿಗಿಂತ, ಮೆಚ್ಚುಗೆಯ ಮೂಲಕವೂ ತಿದ್ದಲು ಸಾಧ್ಯವಿದೆಯಲ್ಲ.
ಇಲ್ಲಿಯವರೆಗೆ ಓದು-ಕೆಲಸ ಅಂತೆಲ್ಲ ನೆಪ ಹೇಳುತ್ತಾ ಅಡುಗೆ ಮನೆಯಿಂದ ದೂರವಿದ್ದೆ. ಅಡುಗೆಯೇ ಗೊತ್ತಿಲ್ಲ ಅಂತಲ್ಲ; ಅಪರೂಪಕ್ಕೊಮ್ಮೆ ಅಡುಗೆ ಮಾಡಿ, ಬಡಿಸಿ ಅಪ್ಪನಿಂದ ಶಭಾಷ್‌ಗಿರಿ ಪಡೆದಿದ್ದೂ ಇದೆ. ಆದರೆ, ನಿತ್ಯದ ಅಡುಗೆಯ ಜವಾಬ್ದಾರಿ ಅಮ್ಮನದ್ದೇ ಆಗಿತ್ತು. ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರ ಅಂತ ಕೇಳ್ಪಟ್ಟೆ. ಇಷ್ಟು ಅಕ್ಕಿಗೆ ಇಷ್ಟು ನೀರು, ಇಷ್ಟು ಜನ ಊಟಕ್ಕಿದ್ದರೆ ಈ ಪಾತ್ರೆಯಲ್ಲಿ ಅನ್ನ… ಹೀಗೆ ಅಡುಗೆಯ ಲೆಕ್ಕಾಚಾರವನ್ನು ತಾಳ್ಮೆಯಿಂದ ಕಲಿಸಿ ಕೊಡಿ. ನಾನು ವಿಧೇಯ ವಿದ್ಯಾರ್ಥಿನಿಯಾಗಿ ಕಲಿಯುತ್ತೇನೆ. ಆತುರ- ಕೋಪಗಳಿಗೆ ನಾ ಫೇಮಸ್ಸು. ನಿಧಾನವಾಗಿ ತಿದ್ದಿ ತೀಡಿದರೆ ನಿಮ್ಮಂತೆಯೇ ಒಳ್ಳೆ ಗೃಹಿಣಿಯಾಗುತ್ತೇನೆ.
ನಮ್ಮಿಬ್ಬರ ಆಚಾರ-ವಿಚಾರ, ಸಂಪ್ರದಾಯ, ಬದುಕಿನ ನೋಟಗಳು ಭಿನ್ನವಾಗಿವೆ. ಅವುಗಳು ಒಂದುಗೂಡದ ಹೊರತು ನಾವಿಬ್ಬರೂ ಒಂದಾಗಲು ಸಾಧ್ಯವಿಲ್ಲ. ಆದಷ್ಟು ಬೇಗ ಅವುಗಳೆಲ್ಲವನ್ನು ಕಲಿಯುವ ಪ್ರಯತ್ನ ಮಾಡುತ್ತೇನೆ. ಕಲಿಸುವ ಆಶ್ವಾಸನೆ ನೀವು ಕೊಡಬೇಕಿದೆ. ನಿಮಗೆ ಇಷ್ಟವಾಗದ ವಿಚಾರಗಳಿಗೆ ನೀವು ನನ್ನ ಮೇಲೆ ಒತ್ತಡ ಹಾಕುವ, ನಿಯಂತ್ರಣ ಹೇರುವ ಬದಲು, ಮಗನ ಮೂಲಕ ಪ್ರೀತಿಯಿಂದ ತಿಳಿಸಿ, ತಿದ್ದಿ ಬಿಡಿ. ಆಗ, ನಿಮ್ಮಿಂದ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಅಂತ ನನಗೂ ಕಿರಿಕಿರಿಯಾಗುವುದಿಲ್ಲ. “ನೀನು ಹೀಗೆ ಮಾಡಿದ್ದು ತಪ್ಪು’ ಎಂದು ನೇರವಾಗಿ ನೀವು ಹೇಳಿಬಿಟ್ಟರೆ, ಬಹುಷಃ ನನಗೂ ಬೇಸರವಾಗಬಹುದು. ಹೇಳಬೇಕಾದುದನ್ನು ಮಗನ ಮೂಲಕ, ಪ್ರೀತಿಯ ಲೇಪನದಿಂದ ತಿಳಿಸಿದರೆ ಸಮಸ್ಯೆ ಪರಿಹಾರವಾಯಿತು.
ತವರು ಮನೆಯನ್ನು ಪೊಲೀಸ್ ಸ್ಟೇಷನ್ ಮಾಡಿಕೊಂಡು, ಗಂಡನ ಮನೆಯ ದೂರುಗಳನ್ನು ದಾಖಲಿಸಲು ನನಗಿಷ್ಟವಿಲ್ಲ. ಹಾಗಾಗಿಯೇ ತವರಿನಿಂದ 300 ಕಿ.ಮೀ. ದೂರವಿರುವ ನಿಮ್ಮ ಮನೆಗೆ ಸೊಸೆಯಾಗಿ ಬರುತ್ತಿರುವುದು. ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಅಮ್ಮನ ಬಳಿ ಹೇಳಿದರೆ, ಆಕೆ ಎಲ್ಲ ತಾಯಂದಿರಂತೆ ಮಗಳ ಸ್ಥಾನದಲ್ಲಿ ನಿಂತು ಯೋಚಿಸುತ್ತಾಳೇ ವಿನಃ ನಿಮ್ಮ ಸ್ಥಾನದಲ್ಲಿ ನಿಂತು ಯೋಚಿಸುವುದಿಲ್ಲ. ಆಗ ನಾನು ಸರಿ, ನೀವು ತಪ್ಪು ಎಂಬ ಭಾವನೆ ನನ್ನಲ್ಲಿ ಮೂಡಬಹುದು. ನಿಮ್ಮ ಒಂದು ಮಾತಿನಿಂದ ನನಗೆ ಬೇಸರವಾದರೆ ಅದನ್ನು ಗಂಡನ ಬಳಿ ಹೇಳಿ ಅವನ ಮನಸ್ಸು ಕೆಡಿಸಲೂ ನಂಗಿಷ್ಟವಿಲ್ಲ. ಬಹುಷಃ, ಕೊಂಚ ಕಣ್ಣೀರು ಹಾಗೂ ಒಂದು ಹೊತ್ತಿನ ಉಪವಾಸದಲ್ಲಿಯೇ ನನ್ನ ಕೋಪ- ತಾಪ ಕಡಿಮೆಯಾಗಲಿದೆ. ಪ್ರತಿದಿನ ನಾವಿಬ್ಬರೂ ಒಂದೇ ಸೂರಿನಡಿ ಬದುಕಬೇಕಲ್ಲ, ಹಾಗಾಗಿ, ಯಾವ ಜಗಳವನ್ನೂ ದೀರ್ಘವಾಗಿ ಎಳೆದು ಸಂಬಂಧ ಕೆಡಿಸಿಕೊಳ್ಳುವುದು ಬೇಡ.
ಕೊನೆಯದಾಗಿ ಒಂದ್ಮಾತು: ಹಳೆಯ ಕಾಲದವರಂತೆ ಅತ್ತೆಯಲ್ಲಿ ಅಮ್ಮನನ್ನು ಹುಡುಕುವವಳು ನಾನಲ್ಲ. ಬದಲಿಗೆ ಆಕೆಯಲ್ಲಿ ಅಚ್ಚುಮೆಚ್ಚಿನ ಸ್ನೇಹಿತೆಯನ್ನು ಕಾಣಲು ಇಚ್ಛಿಸುತ್ತೇನೆ. ಯಾಕಂದ್ರೆ, ಅಮ್ಮನ ಬಳಿ ಮುಚ್ಚಿಟ್ಟ ಸಂಗತಿಗಳನ್ನೂ ಗೆಳತಿಯೆದುರು ಹೇಳಿ, ಹಗುರಾಗುತ್ತೇವಲ್ಲ. ಲೆಟ್ಸ್ ಬಿ ಫ್ರೆಂಡ್ಸ್ ಅತ್ತೆ!
ನಿಮ್ಮ ಅಂತರಂಗ ಸೇರಲು ಬಯಸಿರುವ ಭಾವಿ ಸೊಸೆ
ಶ್ರುತಿ ಮಲೆನಾಡತಿ