Advertisement

56 ಕೋಟಿ ರೂ.ವೆಚದಲ್ಲಿ ತಾಯಿ ಮಗು ಆಸ್ಪತ್ರೆ

05:46 PM Nov 29, 2021 | Team Udayavani |

ಕನಕಪುರ: ಇನ್ಫೋಸಿಸ್‌ ಸಂಸ್ಥೆ ಅಧ್ಯಕ್ಷೆ ಸುಧಾಮೂರ್ತಿ ನೆರವಿನಿಂದ ತಾಲೂಕಿನ ಜನರ ಸೇವೆಗೆ ಸುಸಜ್ಜಿತವಾದ ತಾಯಿ-ಮಗು ಹೈಟೆಕ್‌ ಆಸ್ಪತ್ರೆ ತಲೆಯೆತ್ತಿದೆ. ಈ ಹಿಂದೆ ಇದ್ದ ತಾಯಿಮಗು ಆಸ್ಪತ್ರೆ ಜಾಗದಲ್ಲಿ ಹಳೆ ಕಟ್ಟಡ ತೆರವುಗೊಳಿಸಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಇನ್ಫೋಸಿಸ್‌ ಸಂಸ್ಥೆ ಅಧ್ಯಕ್ಷೆ ಸುಧಾಮೂರ್ತಿ ಮುಂದೆ ಬಂದಿದ್ದರು. ಕಾಮಗಾರಿ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡಿದ್ದ ಅವರು ನನ್ನ ಮಕ್ಕಳು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದರು.

Advertisement

ಹಾಗಾಗಿ ಸರ್ಕಾರದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಒಂದು ಅವಕಾಶ ಸಿಕ್ಕಿದೆ. ಕನಕಪುರ ತಾಲೂಕಿನ ಜನತೆಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದಾಗಿ ಭರವಸೆ ನೀಡಿ, ಪೀಠೊಪಕರಣ ಮತ್ತು ವೈದ್ಯಕೀಯ ಉಪಕರಣಗಳನ್ನು ಸರ್ಕಾರ ದಿಂದಲೇ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದರು.

ಕೊಟ್ಟ ಮಾತಿನಂತೆ ಆಸ್ಪತ್ರೆ ನಿರ್ಮಾಣ: ಇನ್ಫೋಸಿಸ್‌ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಸುಮಾರು 56 ಕೋಟಿ ರೂ.ವೆಚ್ಚದಲ್ಲಿ 140 ಕ್ಕೂ ಹೆಚ್ಚು ಬೆಡ್‌ಗಳ ವ್ಯವಸ್ಥೆ ಇರುವ ಸುಸಜ್ಜಿತವಾದ ತಾಯಿ ಮಗು ಆಸ್ಪತ್ರೆ ಕಟ್ಟಡ ನಿರ್ಮಿಸಿದ್ದಾರೆ. ಬಹುತೇಕ ಕಾಮಗಾರಿ ಪೂರ್ಣ ಗೊಂಡಿದ್ದು, ಇನ್ನೊಂದೆರಡು ತಿಂಗಳಲ್ಲಿ ತಾಲೂಕಿಗೆ ಆಸ್ಪತ್ರೆ ಸೇವಾ ಸೌಲಭ್ಯ ದೊರೆಯಲಿದೆ.

ಬಡ ರೋಗಿಗಳಿಗೆ ಹೈಟೆಕ್‌ ಆಸ್ಪತ್ರೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ನೆಲಮಹಡಿ ಹೊರತುಪಡಿಸಿ 3 ಮಹಡಿಯಿರುವ ಕಟ್ಟಡದಲ್ಲಿ 143 ಹಾಸಿಗೆಗಳ ವ್ಯವಸ್ಥೆಯಿದ್ದು, ಐಸಿಯು ಘಟಕ, ಒಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, 10 ಪಿಡಿಯಾಟ್ರಿಕ್‌ ವಾರ್ಡ್‌ ಸೇರಿದಂತೆ ವೈದ್ಯರು, ಸಿಬ್ಬಂದಿ ವರ್ಗಕ್ಕೆ ವಿಶ್ರಾಂತಿ ಕೊಠಡಿಗಳು, ರೋಗಿಗಳಿಗೆ ಶೌಚಾಲಯ ನಿರ್ಮಿಸ ಲಾಗಿದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರು ಮತ್ತು ಬಾಣಂತಿಯರು, ಸಾರ್ವಜನಿಕರ ಅನುಕೂಲಕ್ಕೆಂದು ಮೂರು ಲಿಫ್ಟ್ ಅಳವಡಿಸಲಾಗಿದೆ. 2 ಲಿಫ್ಟ್ ಗಳನ್ನು ಸಾರ್ವಜನಿಕರಿಗೆ, 1ಲಿಫ್ಟ್ನ್ನು ಗರ್ಭಿಣಿ ಮತ್ತು ರೋಗಿಗಳಿಗೆ ಮೀಸಲಿರಿಸಲಾಗಿದೆ.

Advertisement

ಇತರೆ ಸೌಲಭ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ: ಐಸಿಯು ಘಟಕ ಒಪಿಡಿ ಶಸ್ತ್ರಚಿಕಿತ್ಸಾ ಘಟಕ ಸೇರಿದಂತೆ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು, ಪೀಠೊಪಕರಣ ಅಳವಡಿಸಲು 20 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದು, ಹೆಚ್ಚುವರಿಯಾಗಿ ವೈದ್ಯರು ಮತ್ತು ಸಿಬ್ಬಂದಿ ನಿಯೋಜಿಸಬೇಕಿದೆ. ವಿವಿಧ ವಿಭಾಗದ ಪ್ರಸವ ತಜ್ಞರು, ಮಕ್ಕಳ ವೈದ್ಯರು, ಅನಸ್ತೇಶಿಯ ವೈದ್ಯರು, ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ.

ಇದನ್ನೂ ಓದಿ;- ನಟಿ Jacqueline Fernandez ಬ್ಯೂಟಿಫುಲ್ ಫೋಟೋ ಗ್ಯಾಲರಿ

ಈ ಸಂಬಂಧ ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಅತ್ಯಾಧುನಿಕ ಆಸ್ಪತ್ರೆಗೆ ಬೇಕಿರುವ ಸೌಲಭ್ಯ ಪಟ್ಟಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದಾರೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌ ಅವರು ಬೇಟಿ ನೀಡಿ ಆಸ್ಪತ್ರೆಗೆ ಬೇಕಿರುವ ಅಗತ್ಯ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.

ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ: ರೋಗಿಗಳು ಮತ್ತು ಸಾರ್ವಜನಿಕರು ಆಸ್ಪತ್ರೆ ಪ್ರವೇಶಿಸಲು ಎರಡು ಕಡೆ ಸ್ಟೇರ್‌ಕೇಸ್‌ ನಿರ್ಮಾಣ ಮಾಡಲಾಗಿದೆ. ನೆಲ ಮಹಡಿ ಯಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯಿದೆ. ಸುಮಾರು ಹತ್ತಕ್ಕೂ ಹೆಚ್ಚು ಕಾರುಗಳ ನಿಲುಗಡೆ, ಮೂವತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನ, ಎರಡು ಅಂಬುಲೆನ್ಸ್‌ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಶೀಘ್ರವೇ ಆಸ್ಪತ್ರೆ ಕಾರ್ಯಾರಂಭ ಮಾಡಲಿ: ಕಟ್ಟಡ ಸಂಪೂರ್ಣವಾಗಿ ಪೂರ್ಣಗೊಂಡಿದ್ದು ವಿದ್ಯುತ್‌ ಸಂಪರ್ಕ ಆಸ್ಪತ್ರೆಯ ಸುತ್ತ ವಾಕಿಂಗ್‌ ಪಾತ್‌, ಕಾಂಪೌಂಡ್‌ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೇ ಇನ್ನೊಂದೆರಡು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಇನ್ಫೋಸಿಸ್‌ ಸಂಸ್ಥೆ ವತಿ ಯಿಂದ ಸರ್ಕಾರಕ್ಕೆ ಕಟ್ಟಡ ಹಸ್ತಾಂತರಿಸುವ ಪ್ರಕ್ರಿಯೆ ಮುಗಿಯಲಿದೆ. ಸರ್ಕಾರ ಆಸ್ಪತ್ರೆಗೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಪಾರದರ್ಶಕ ನೀತಿಯಿಂದ ಸಾರ್ವಜನಿಕರಿಗೆ ಸೇವೆ ಒದಗಿಸಿ ಅನುಕೂಲ ಒದಗಿಸಬೇಕಿದೆ.

ರೋಗಗ್ರಸ್ತವಾಗದಿರಲಿ ಸರ್ಕಾರಿ ಆಸ್ಪತ್ರೆ: ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಪ್ರಸ್ತುತ ಹೆರಿಗೆ ಆಸ್ಪತ್ರೆಯಲ್ಲಿ ಬಡವರನ್ನು ಸುಲಿಗೆ ಮಾಡುತ್ತಿ ರುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಇಂತಿಷ್ಟು ಎಂದು ದರ ನಿಗದಿ ಮಾಡಿದ್ದಾರೆ ಎಂಬ ಆರೋಪ, ದೂರು ಕೇಳಿ ಬಂದಿವೆ. ಸಿಎಸ್‌ಆರ್‌ ಅಡಿಯಲ್ಲಿ ನಿರ್ಮಾಣವಾದ ಈ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಶಿಸ್ತಿನ ಆಡಳಿತ ಮಂಡಳಿ ನೇಮಿಸಿ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಖಾಸಗಿ ಆಸ್ಪತ್ರೆಯನ್ನು ಮೀರಿಸುವ ಹಾಗೇ ಆರೋಗ್ಯ ಸೇವೆ ಒದಗಿಸಬೇಕಿದೆ.

ಆಸ್ಪತ್ರೆ ಕಟ್ಟಡದಂತೆ ಸೇವೆಯೂ ವಿಶಾಲವಾಗಿರಲಿ: ಆಸ್ಪತ್ರೆ ಕಟ್ಟಡ ವಿಶಾಲವಾಗಿದ್ದು ಮುಂದೆ ಇಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ದಾದಿಯರು, ಸಿಬ್ಬಂದಿ ಕೂಡ ವಿಶಾಲ ಸೇವಾ ಮನೋಭಾವದಿಂದ ಬಡರೋಗಿಗಳ ಆರೈಕೆ ಮಾಡಬೇಕಿದೆ. ಬಡಜನರ ಸೇವಾ ಮನೋಭಾವ, ವಿಶಾಲ ಹೃದಯದಿಂದ ಇಸ್ಫೋಸಿಸ್‌ ಸಂಸ್ಥೆ ಅಧ್ಯಕ್ಷೆ ಸುಧಾಮೂರ್ತಿ ತಾಲೂಕಿನ ಜನರಿಗೆ ಹೈಟೆಕ್‌ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಾರೆ.

ಅವರ ಉದ್ದೇಶಕ್ಕೆ, ಆಶಯಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವ ಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆಸ್ಪತ್ರೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಭ್ರಷ್ಟಮುಕ್ತ ಆಡಳಿತ ಅಧಿಕಾರಿಗಳಿಗೆ ಸವಾಲಾಗಿದ್ದು ಇದನ್ನು ಹೇಗೆ ಟೇಕಪ್‌ ಮಾಡ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

“ಜಿಲ್ಲೆಯಲ್ಲೇ ಕನಕಪುರ ತಾಲೂಕಿನಲ್ಲಿ ಆತ್ಯಾಧುನಿಕ ತಾಯಿ ಮಗು ಆಸ್ಪತ್ರೆಯನ್ನು ಸುಧಾ ಮೂರ್ತಿ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆಗೆ ಬೇಕಿರುವ ಮೂಲಭೂತ ಸೌಲಭ್ಯ, ಪಿಠೊಪರಕಣ, ವೈದ್ಯಕೀಯ ಉಪಕರಣಗಳು ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿಗಳ ನಿಯೋಜನೆಗೂ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಘ್ರವಾಗಿ ಆಸ್ಪತ್ರೆ ಕಾರ್ಯಾರಂಭವಾಗಲಿದೆ.” ಡಾ. ನಿರಂಜನ್‌, ಡಿಎಚ್‌

Advertisement

Udayavani is now on Telegram. Click here to join our channel and stay updated with the latest news.

Next