ಬೆಂಗಳೂರು: ಶಾರ್ಟ್ ಸರ್ಕಿಟ್‌ನಿಂದ ಕಾರಿಗೆ ಬೆಂಕಿ ತಗುಲಿ ನಾಲ್ಕು ವರ್ಷ ಮಗು ಹಾಗೂ ತಾಯಿ ಸಜೀವ ದಹನವಾಗಿರುವ ಘಟನೆ ವೈಟ್‌ಫೀಲ್ಡ್ ಬಳಿಯ ನೆಲ್ಲೂರು ಹಳ್ಳಿಯ ಸುಮಧುರ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಬೆಳಗಾವಿ ಮೂಲದ ನೇಹಾ ವರ್ಮಾ (30) ಹಾಗೂ ಇವರ ನಾಲ್ಕು ವರ್ಷದ ಪುತ್ರ ಪರಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾಪಿಂಗ್ ಮಾಡಲು ಮಧ್ಯಾಹ್ನ ಹೊರ ಹೋಗಿದ್ದ ತಾಯಿ, ಮಗು 3.30ರ ಸುಮಾರಿಗೆ ವಾಪಸ್ ಬಂದಿದ್ದು, ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಗೆ ಬಂದು ಕಾರು ಪಾರ್ಕಿಂಗ್ ಮಾಡುವಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಮೂಲದ ರಾಜೇಶ್ ಎಂಬುವವರು ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ವೈಟ್‌ಫೀಲ್ಡ್‌ನಲ್ಲಿ ಸಣ್ಣ ಸಾಫ್ಟ್ವೇರ್ ಕಂಪನಿ ನಡೆಸುತ್ತಿದ್ದಾರೆ. 6 ವರ್ಷಗಳ ಹಿಂದೆ ನೇಹಾ ವರ್ಮಾ ಅವರನ್ನು ವಿವಾಹವಾಗಿದ್ದು, ನೆಲ್ಲೂರು ಹಳ್ಳಿಯ ಸುಮಧುರ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ, ಪುತ್ರನೊಂದಿಗೆ ವಾಸವಿದ್ದರು. ಶುಕ್ರವಾರ ಬೆಳಗ್ಗೆ ಪತಿ ರಾಜೇಶ್ ಕಂಪನಿಗೆ ಹೋಗಿದ್ದು, ನೇಹಾ, ಪುತ್ರ ಪರಮ್ ಜತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ರಿಡ್ಜ್ ಕಾರಿನಲ್ಲಿ ಶಾಪಿಂಗ್‌ಗೆ ಹೋಗಿದ್ದರು.
ಮಧ್ಯಾಹ್ನ 3.30ರ ಸುಮಾರಿಗೆ ಶಾಪಿಂಗ್ ಮುಗಿಸಿಕೊಂಡು ವಾಪಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ನೆಲಮಳಿಗೆಯಲ್ಲಿ ಕಾರು ಪಾರ್ಕ್ ಮಾಡುವಾಗ ಇದಕ್ಕಿದ್ದಂತೆ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಇಡೀ ಕಾರಿಗೆ ಬೆಂಕಿ ಆವರಿಸಿದ್ದು, ಹೊರಬರಲಾಗದೆ ತಾಯಿ, ಮಗು ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಜತೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ. ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಬಂದ ನೇಹಾ ಪತಿ ರಾಜೇಶ್ ಆತಂಕಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ನೆಲಮಾಳಿಗೆಯಲ್ಲಿರುವ ಸ್ವಿಚ್ ಬೋರ್ಡ್ ಮತ್ತು ವೈರ್‌ಗಳು ಸುಟ್ಟು ಕರಕಲಾಗಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಅಪಾರ್ಟ್‌ಮೆಂಟ್‌ನಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ಬಿಳಿರುವ ಸಿಲಿಂಡರ್ ಸ್ಫೋಟದಿಂದ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ವೈಟ್‌ಫೀಲ್ಡ್ ಠಾಣೆಯಲ್ಲಿ ದಾಖಲಾಗಿದೆ.