Advertisement

ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು

01:32 PM Jul 07, 2022 | Team Udayavani |

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ ತಾಯಿ-ಮಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಭಕ್ಷಿಗಾರ್ಡನ್‌ ನಿವಾಸಿ ಜಯಂತಿ (45) ಮತ್ತು ಆಕೆಯ ಪುತ್ರಿ ಸೋನಿಯಾ (21) ಬಂಧಿತರು. ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ 272 ಗ್ರಾಂ ತೂಕದ ಚಿನ್ನಾಭರಣ, 997 ಗ್ರಾಂ ಬೆಳ್ಳಿಯ ವಸ್ತುಗಳು, 1,72 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ದೂರುದಾರ ವಿಶಾಲ್‌ ಎಂಬುವರ ಮನೆಯಲ್ಲಿ ಕೆಲ ತಿಂಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ ತಾಯಿ, ಮಗಳು ಮನೆಯವರ ವಿಶ್ವಾಸಗಳಿಸಿದ್ದರು. ಹೀಗಾಗಿ ಮನೆಯ ಎಲ್ಲೆಡೆ ಓಡಾಡುತ್ತಿದ್ದರು. ವಿಶಾಲ್‌ ಉದ್ಯಮಿಯಾಗಿದ್ದು, ಅವರ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ದಂಪತಿ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು ಆರೋಪಿಗಳು ಮನೆಯ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣಗಳನ್ನು ಆಗಾಗ್ಗೆ ಕಳವು ಮಾಡುತ್ತಿದ್ದರು. ಇತ್ತೀಚೆಗೆ ಮನೆಯ ಮಾಲೀಕರು ಕಬೋರ್ಡ್‌ ನೋಡಿಕೊಂಡಾಗ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಡು ಆರೋಪಿಗಳನ್ನು ವಿಚಾರಣೆ ನಡೆಸಲಾಗಿತ್ತು. ಆಗ ಯಾವುದೇ ಮಾಹಿತಿ ಇಲ್ಲವೆಂದು ಹೇಳಿಕೆ ನೀಡಿದ್ದರು. ಆದರೆ, ಆರೋಪಿಗಳು ಬ್ರ್ಯಾಡೆಂಡ್‌ ಬಟ್ಟೆಗಳು, ಕ್ಯಾಬ್‌ಗಳಲ್ಲಿ ಓಡಾಡುತ್ತಿದ್ದರು. ಜತೆಗೆ ಈ ಹಿಂದೆ ಜಯಂತಿ ತನ್ನ ಸ್ವಂತ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಅಡಮಾನ ಇಟ್ಟಿದ್ದು, ಅವುಗಳನ್ನು ಬಿಡಿಸಿಕೊಂಡಿರಲಿಲ್ಲ. ಈ ಅನುಮಾನದ ಮೇರೆಗೆ ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.

ವಿಶಾಲ್‌ ಮನೆಯಲ್ಲಿ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಕದ್ದು ಐಷಾರಾಮಿ ಜೀವನದ ಜತೆಗೆ ತನ್ನ ಒಡವೆಗಳನ್ನು ಬಿಡಿಸಿಕೊಳ್ಳಲು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next