Advertisement
ಪ್ರತಿ ತಾಯಿ ಮಗುವಿನ ಸಂಬಂಧ ಹಾಗೆಯೇ ಹಸಿ ಅಂಬೆಗಾಲಿನ ಹೆಜ್ಜೆಯಿಂದ ಸ್ವಂತ ಕಾಲಲ್ಲಿ ನಿಂತ ಮೇಲೂ ಅಮ್ಮ ಎಲ್ಲದಕ್ಕಿಂತ, ಎಲ್ಲರಿಗಿಂತ ಹೆಚ್ಚು ಎನ್ನುವ ಭಾವ ಬರಬೇಕೆಂದರೇ, ಮಾತೃ ಸ್ಪರ್ಶ ಹಾಗಿರಬೇಕು.
Related Articles
Advertisement
ಸುಖ, ಸೌಕರ್ಯ, ಆನಂದ, ಅನುಭೂತಿ, ಅಭಿಮಾನ, ಪ್ರೇಮ, ಆರಾಧನಾ ಭಾವನೆಗಳನ್ನು ತಾಯಿ ಪ್ರವರ್ತನೆ ಮೂಲಕ ಗರ್ಭಸ್ಥ ದೆಸೆಯಲ್ಲೇ ಹೊಂದಿಕೊಂಡಿರುವ ಮಗು ಈ ಹೊರ ಪ್ರಪಂಚಕ್ಕೆ ಬಂದಾಗಲೇ ತಾನು ರಕ್ಷಣೆ ಕಳಚಿಕೊಂಡ ಹಾಗೆ ಭಾವಿಸಿ ರೋಧಿಸುತ್ತದೆ.
ತಾಯಿ ಹಾಡನ್ನು ಕೇಳುತ್ತಾ ತಾಯಿಯ ಕಂಠವನ್ನು ಪದೇ ಪದೇ ಕೇಳುತ್ತಾ ತಾಯಿ ಕಂಠವನ್ನು ಗುರುತಿಸುವ ಸಾಮರ್ಥ್ಯ, ಕೇಳುವ ಶಕ್ತಿ, ಏಕಾಗ್ರತೆ ಅಭಿವೃದ್ಧಿ ಪಡುತ್ತದೆ. ಅವಯವಗಳಿಗೆ ಚೈತನ್ಯ ಮೂಡಿಸುತ್ತದೆ. ಇದು ತಾಯಿ ಹಾಗು ಮಗುವಿನ ನಡುವೆ ಬೆಸಯುವ ಕಾಣದಿರುವ ಭಾವ. ಸುಶ್ರಾವ್ಯವಾದ ಸಂಗೀತ, ವಿಶ್ರಾಂತಿಯನ್ನು ಕೊಟ್ಟು, ಭಯವನ್ನು ಕಳೆದು ಒಳ್ಳೆಯ ನಿದ್ದಗೆ, ತದನಂತರ ಒಳ್ಳೆಯ ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎನ್ನುವುದಕ್ಕೆ ಎರಡನೇ ಮಾತಿಲ್ಲ.
ಆದರೇ, ಇತ್ತೀಚಿನ ದಿನಗಳಲ್ಲಿ ತಾಯಿ ಮತ್ತು ಮಗುವನ್ನು ಬೇಗನೆ ಬೇರ್ಪಡಿಸುವ, ಒಟ್ಟಿಗೆ ಇರದಿದ್ದರೂ ಮಗುವನ್ನು ಹೆಚ್ಚು ಮುದ್ದಿಸದೆ, ಆರಂಭಿಕ ಹಂತದಲ್ಲೇ ಸ್ವಾತಂತ್ರ್ಯ ನೀಡುವ ಪರಿಕಲ್ಪನೆ, ಸಣ್ಣ ವಯಸ್ಸಿನಲ್ಲೇ ಪ್ಲೇ ಹೋಮ್ ಗಳಿಗೆ ಸೇರಿಸುವ ಉಪಕ್ರಮಗಳು, ಹೆತ್ತ ಮಗುವನ್ನು ಇನ್ನ್ಯಾರೋ ಆರೈಕೆ ಮಾಡುವ ‘ಪಕ್ಕಾ ಫಾರಿನ್ ಕಲ್ಚರ್’ ಅಂತ ಅನ್ನಿಸಿಬಿಡುವ ಧೋರಣೆಗಳು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಊಹಿಸಿಕೊಂಡರೇ, ಅಸಹನೀಯ ಅಂತನ್ನಿಸಿ ಬಿಡುತ್ತದೆ. ನಮ್ಮದಲ್ಲ ಅನ್ನಿಸುವಂತೆ ಆದ ಜಗತ್ತಿನ ಬದಲಾವಣೆಗಳಲ್ಲಿ ಈ ತಾಯಿ ಮಗುವಿನ ಸಂಬಂಧವವೂ ಸೇರಿಕೊಂಡಿರುವುದು ದುರಂತ.
ಓದಿ : ಕೋವಿಡ್ ಸೋಂಕಿನಿಂದ ರಕ್ಷಣೆ ಮಾಡುತ್ತದೆಯೇ ಸ್ಟೀಮಿಂಗ್..!? ಅಧ್ಯಯನಗಳು ಏನು ಹೇಳುತ್ತವೆ..?
ತಾಯಿಯ ಅಪ್ಪುಗೆ, ಮಡಿಲ ಬೆಚ್ಚಗೆ ಎನ್ನುವುದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಂಗತಿ. ತಾಯಿ ಮತ್ತು ಮಗುವಿನ ಚರ್ಮದ ಸೋಕುವಿಕೆ ಮಗುವಿಗೆ ಬೇಕಾದ ಆರಂಭಿಕ ಉಷ್ಣತೆಯನ್ನು ಕೊಡುವುದರ ಜತೆಗೆ ಮಾನಸಿಕವಾದ ಧೈರ್ಯವನ್ನೂ ತುಂಬುತ್ತದೆ. ಸೂಕ್ತ ಪ್ರಮಾಣದಲ್ಲಿ ತಾಯಿಯ ಸ್ಪರ್ಶವನ್ನು ಪಡೆದ ಮಕ್ಕಳು ತುಂಬ ಸೂಕ್ಷ್ಮ ಪ್ರಜ್ಞೆ, ಕಲಿಕಾ ಸಾಮರ್ಥ್ಯ ಮತ್ತು ಯಾವುದೇ ಕೆಲಸವನ್ನು ಮಾಡಬಲ್ಲ ಮಾನಸಿಕ ತಾಕತ್ತನ್ನು ಪಡೆಯುವುದನ್ನು ಆ ಮಕ್ಕಳ ಮುಂದಿನ ಬೆಳವಣಿಗೆಯಲ್ಲಿ ನಾವು ಕಾಣಬಹುದು. ಇದಕ್ಕೆ ಕಾರಣ, ಆರಂಭಿಕ ಹಂತದಲ್ಲಿ ಸಿಕ್ಕಿದ ಭಯಮುಕ್ತ ವಾತಾವರಣ ಮತ್ತು ಆತಂಕ ರಹಿತ ನೆಮ್ಮದಿ. ಜತೆಗೆ ಸರಿಯಾದ ನಿದ್ದೆ, ಒತ್ತಡಗಳಿಗೆ ಸೂಕ್ತವಾದ ಪ್ರತಿಸ್ಪಂದನೆ, ಪ್ರೌಢ ಕಾರ್ಯ ನಿರ್ವಹಣೆಗಳು.
ಅದೇ ತಾಯಿಯ ಸ್ಪರ್ಶವಿಲ್ಲದೆ ಬೆಳೆದ ಮಕ್ಕಳಲ್ಲಿ ಕಲಿಕೆ ಸಾಮರ್ಥ್ಯ ಕಡಿಮೆ ಇರುತ್ತದೆ. ಒತ್ತಡ, ಅಸಂಘಟಿತ ಬದುಕು ಮತ್ತು ಹೆಚ್ಚು ಚಾಂಚಲ್ಯವನ್ನು ಕೂಡಿರುತ್ತವೆ.
ಅಮ್ಮ ಹಾಡು ಹೇಳುವವಳಾಗಿದ್ದರೆ, ಮಗುವೂ ಅಮ್ಮನೊಡನೆ ಗುನುಗುನಿಸುತ್ತದೆ, ಅಮ್ಮ ಶಿಕ್ಷಕಿಯಾಗಿದ್ದರೆ ತಾನೂ ಅಮ್ಮನಂತೆ ಪಾಠ ಹೇಳಿಕೊಡುವ ಆಟ, ಅಮ್ಮ ಡಾಕ್ಟರ್ ಆಗಿದ್ದರೆ ಅಮ್ಮನಂತೆ ತಾನೂ ಎಲ್ಲರನ್ನೂ ಸ್ಟೆತಸ್ಕೋಪ್ ನಿಂದ ಪರೀಕ್ಷಿಸುವ ಆಟ ಹೀಗೆ ಅಮ್ಮನಂತೆ ಇರಲು ಬಯಸುವ ಮಗು, ಅದರ ಆಟಪಾಟ, ಅದರ ತೊದಲು ಮಾತನ್ನು ಕಣ್ತುಂಬಿ ಮನದುಂಬಿ ಅನುಭವಿಸುತ್ತಾಳೆ, ಅಮ್ಮ. ಪ್ರತಿ ಮಗುವೂ ಪುಟ್ಟ ಕೃಷ್ಣನೇ, ಪ್ರತಿ ತಾಯಿಯೂ ಯಶೋದೆಯೇ… ಹಾಗೆಯೇ ಅಮ್ಮ ಮಗುವಿನ ಸಂಬಂಧವಿರಬೇಕು.
ಸಂಬಂಧಗಳು ಜಾಳಾಗಬಾರದು. ಅದರಲ್ಲೂ ತಾಯಿ ಮತ್ತು ಮಗುವಿನ ಸಂಬಂಧವನ್ನು ಜಾಳಾಗುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅಮ್ಮ ಮಗುವಿನ ಸಂಬಂಧ ಇರಬೇಕು ಕೃಷ್ಣ ಯಶೋದೆಯಂತೆ.
ಓದಿ : ಉದಯವಾಣಿ ವರದಿ ಫಲಶ್ರುತಿ: ಅಮಾಸೆಬೈಲು ಆಯುಷ್ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಕೊಡುಗೆ