Advertisement

ಬಿಜೆಪಿಯ ಲಕ್ಷ್ಮಣ ಸವದಿ ವಿರುದ್ಧ ಮೋಟಗಿಮಠ ಶ್ರೀ ಸ್ಪರ್ಧೆ

09:45 AM Jan 17, 2018 | |

ಬೆಳಗಾವಿ: ಸ್ವಾಮೀಜಿಗಳ ರಾಜಕೀಯ ಪ್ರವೇಶಕ್ಕೆ ವೇದಿಕೆಯಾಗಿದ್ದ ಬಿಜೆಪಿ ಪ್ರಮೇಯ ಈಗ ಕಾಂಗ್ರೆಸ್‌ಗೂ ವ್ಯಾಪಿಸಿದೆ. ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ವಿರುದ್ಧ ಕಾಂಗ್ರೆಸ್‌ನಿಂದ ಲಿಂಗಾಯತ ಸಮಾಜದ ಪ್ರಭಾವಿ ಸ್ವಾಮೀಜಿ ಮೋಟಗಿ ಮಠದ ಪ್ರಭು ಚನ್ನಬಸವ ಶ್ರೀಗಳು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

Advertisement

ಅಥಣಿ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಲಕ್ಷ್ಮಣ ಸವದಿ ಈ ಭಾಗದ ಪ್ರಭಾವಿ ನಾಯಕ. ಇದು ಬಿಜೆಪಿಯ ಭದ್ರಕೋಟೆಯೂ ಹೌದು. ಸವದಿ ಅವರ ವೈಯಕ್ತಿಕ ವರ್ಚಸ್ಸಿನ ಮುಂದೆ ಕಾಂಗ್ರೆಸ್‌ಗೆ ಇಲ್ಲಿ ಎದ್ದು ನಿಲ್ಲುವುದು  ದುಸ್ತರ. ಸದನದಲ್ಲಿ ನೀಲಿ ಚಿತ್ರ ನೋಡಿದ ಆರೋಪ ಮಧ್ಯೆಯೂ ಸವದಿ ಕಳೆದ ಬಾರಿ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಖಚಿತವಾಗಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಕಾಂಗ್ರೆಸ್‌ ಈಗ ಪ್ರಭಾವಿ ಮಠಾಧೀಶರ ಮೇಲೆ ಕಣ್ಣು ಹಾಕಿದೆ. ಈ ಮೂಲಕ ತನ್ನ ಪಾರಂಪರಿಕ ಮತ ಬ್ಯಾಂಕ್‌ ಜತೆಗೆ ಲಿಂಗಾಯತ ಸಮಾಜದ ಮತ ಸೆಳೆಯುವ ತಂತ್ರ ರೂಪಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸ್ವಾಮೀಜಿ ಅವರೊಂದಿಗೆ ಈಗಾಗಲೇ ಎರಡು ಸುತ್ತಿನ ಮಾತು ಕತೆ ನಡೆಸಿದ್ದಾರೆ. ಶ್ರೀಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರೊಂದಿಗೂ ಸ್ವಾಮೀಜಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಸ್ವಾಮೀಜಿ ಏನಂತಾರೆ?: ಈ ಎಲ್ಲ ಬೆಳವಣಿಗೆಗಳ  ಕುರಿತು “ಉದಯವಾಣಿ’ ಜತೆ ಮಾತನಾಡಿದ ಮೋಟಗಿಮಠದ ಚನ್ನಬಸವ ಸ್ವಾಮೀಜಿ, ಇದು ಇಂದು, ನಿನ್ನೆ ನಡೆದ ಬೆಳವಣಿಗೆ ಅಲ್ಲ. 10 ತಿಂಗಳಿಂದ ಸ್ಪರ್ಧೆಗಾಗಿ ನನ್ನ ಮೇಲೆ ಒತ್ತಾಯ ಬರುತ್ತಲೇ ಇದೆ. ದಿನ ನಿತ್ಯ ಸಾವಿರಾರು ಜನ ಹಾಗೂ ರಾಜಕಾರಣಿಗಳು ನೀವು ರಾಜಕೀಯಕ್ಕೆ ಬರಬೇಕು. ಅಥಣಿ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕೇಳುತ್ತಲೇ ಇದ್ದಾರೆ. ಪ್ರತಿಯೊಬ್ಬರೂ ಬದಲಾವಣೆ ಬಯಸಿದ್ದಾರೆ. ಅದಕ್ಕೆಂದೇ ನನ್ನನ್ನು ಕರೆದಿದ್ದಾರೆ ಎಂದರು. ಕೇವಲ ಉತ್ತರ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣಕ್ಕೆ ಬರುವುದಲ್ಲ. ದಕ್ಷಿಣ ಭಾರತದಲ್ಲೂ ಈ ಪ್ರಯೋಗ ಆಗಬೇಕು. ಅಂತಹ ಪ್ರಯೋಗಕ್ಕೆ ನೀವು ಮುನ್ನುಡಿ ಬರೆಯಬೇಕೆಂದು ಒತ್ತಾಯ ಮಾಡಿದ್ದಾರೆ. ಮಠಾಧೀಶರು ರಾಜಕಾರಣಕ್ಕೆ ಹೋಗಬಾರದೆಂಬ ಅಭಿಪ್ರಾಯ ನನ್ನದಲ್ಲ. ಜನಸೇವೆಗೆ ಹಲವು ದಾರಿಗಳಿವೆ. ಅದರಲ್ಲಿ ರಾಜಕಾರಣವೂ ಒಂದು. ಜನರ ಒತ್ತಾಯದ ಜೊತೆಗೆ ರಾಜ್ಯ ಹಾಗೂ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ನಾಯಕರು ನನ್ನ ಜತೆ ಸಂಪರ್ಕದಲ್ಲಿದ್ದಾರೆ. ನಮ್ಮ ವಿಚಾರ ಹಾಗೂ ಅಭಿಪ್ರಾಯ ಕಾಂಗ್ರೆಸ್‌ ಜತೆ ಹೊಂದಿಕೆಯಾದರೆ ಸ್ಪರ್ಧಿಸುತ್ತೇನೆ ಎಂದರು.

ಸ್ವಾಮೀಜಿಯೇ ಏಕೆ?: ಲಿಂಗಾಯತ ಪಂಚಮ ಸಾಲಿ ಸಮಾಜದ ಮತದಾರರು ಇಲ್ಲಿ ನಿರ್ಣಾಯಕರು. ಹೀಗಾಗಿ ಕಾಂಗ್ರೆಸ್‌ ಈ ಸಮಾಜದ ಪ್ರಭಾವಿ ಸ್ವಾಮೀಜಿ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿ ಅದಕ್ಕಾಗಿ ತೆರೆಮರೆಯ ಕಾರ್ಯಚಟು ವಟಿಕೆ ನಡೆಸಿದೆ. ಹಿಂದುಳಿದ ವರ್ಗದವರ ಜತೆ ಲಿಂಗಾಯತರು ಕೈ ಜೋಡಿಸಿದರೆ ಗೆಲುವು ಸುಲಭ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. 

ಜಿದ್ದಿಗೆ ಬಿದ್ದ ಜಾರಕಿಹೊಳಿ ಸಹೋದರರು!
ಜಿಲ್ಲಾ ಸಹಕಾರಿ ಬ್ಯಾಂಕ್‌ ರಾಜಕಾರಣದಲ್ಲಿ ಮೊದಲಿಂದಲೂ ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯ. ಶಾಸಕ ಸವದಿಗೆ ಸೋಲುಣಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಜಾರಕಿಹೊಳಿ ಬ್ರದರ್ಸ್‌ ಇದಕ್ಕಾಗಿ ಮೋಟಗಿಮಠದ ಸ್ವಾಮೀಜಿಗೆ ಗಾಳ ಹಾಕಿದ್ದಾರೆ. ಇದುವರೆಗೆ ನಡೆದಿರುವ ಮಾತುಕತೆ ಫಲಪ್ರದವಾಗಿದ್ದೇ ಆದರೆ ಬೆಳಗಾವಿ ಜಿಲ್ಲೆ ಮೊದಲ ಬಾರಿಗೆ ಪ್ರಭಾವಿ ಕಾವಿಧಾರಿಯೊಬ್ಬರನ್ನು ಚುನಾವಣಾ ಅಖಾಡದಲ್ಲಿ ಕಾಣಲಿದೆ.

Advertisement

ಮೋಟಗಿಮಠದ ಸ್ವಾಮೀಜಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿದೆ. ಈ ನಿಟ್ಟಿನಲ್ಲಿ ಮಾತುಕತೆ ಸಹ ನಡೆದಿದೆ. ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿರುವುದರಿಂದ ಸ್ವಾಮೀಜಿ ಸ್ಪರ್ಧೆ ಅನುಕೂಲವಾಗಲಿದೆ. ಕಾಂಗ್ರೆಸ್‌ಗೆ ಇದು ಪ್ಲಸ್‌ ಪಾಯಿಂಟ್‌.
 ●ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next