Advertisement
ಈ ವಲಯದ ಬಹುತೇಕ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಭೀತಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು ಈ ಸಮಸ್ಯೆಯೇ ಈ ಬಾರಿಯ ಗ್ರಾ.ಪಂ. ಚುನಾವಣೆಯ ಪ್ರಚಾರದ ಪ್ರಮುಖ ವಿಷಯ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ಕೇಳಿಬಂದಿರುವುದು ಚರ್ಚೆಯಲ್ಲಿರುವ ಇನ್ನೊಂದು ಪ್ರಮುಖ ವಿಷಯವಾಗಿದೆ.ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಮನೆ ನಿವೇಶನ ನೀಡಲು, ಅನೇಕ ಕಡೆಗಳಲ್ಲಿ ಶ್ಮಶಾನ ನಿರ್ಮಾಣಕ್ಕೂ ಅಡ್ಡಿ ಎದುರಾಗಿದೆ. ನೀರಿನ ಸಮಸ್ಯೆ ಕೆಲವೆಡೆ ಇದೆಯಾದರೂ ಅದಕ್ಕೆ ಸಾಕಷ್ಟು ಹೋರಾಟಗಳಾಗಿ ತಕ್ಕ ಮಟ್ಟಿಗೆ ಪರಿಹಾರದ ಮಾರ್ಗಗಳನ್ನೂ ಕಂಡುಕೊಳ್ಳಲಾಗಿದೆ.
ಕಲ್ಲಮುಂಡ್ಕೂರು ಗ್ರಾ.ಪಂ. ಕಲ್ಲಮುಂಡ್ಕೂರು ಮತ್ತು ನಿಡ್ಡೋಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. 7 ವಾರ್ಡ್‌ಗಳಲ್ಲಿ 16 ಸ್ಥಾನಗಳಿವೆ. ಈಗಾಗಲೇ 1 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದ 15 ಸ್ಥಾನಗಳಿಗೆ 33 ಮಂದಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ಇಲ್ಲಿ ಕಾಂಗ್ರೆಸ್ ಬೆಂಬಲಿತರೆದುರು ನಿಂತ ಬಂಡಾಯ ಅಭ್ಯರ್ಥಿ ಅಧ್ಯಕ್ಷೆಯಾದರೆ ಬಿಜೆಪಿ ಬೆಂಬಲಿತರೆದುರು ನಿಂತ ಬಂಡಾಯ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಲ್ಲ ಮುಂಡ್ಕೂರು ಗ್ರಾ.ಪಂ.ನಲ್ಲಿ ಶ್ಮಶಾನಕ್ಕೆ ಜಾಗ ನಿಗದಿಯಾಗಿದ್ದರೂ ಶ್ಮಶಾನ ನಿರ್ಮಾಣವಾಗಿಲ್ಲ. ನೀರು ಪೂರೈಕೆಯ ಸಮಸ್ಯೆ ಹೇಳಿಕೊಳ್ಳುವಷ್ಟಿಲ್ಲ. ಸೀ ಫುಡ್ ಪಾರ್ಕ್ ಪುತ್ತೂರಿನಿಂದ ನಿಡ್ಡೋಡಿಗೆ ಬರಲಿದೆ ಎಂಬ ವದಂತಿಯಿಂದ ಪರಿಸರ ಪ್ರಿಯರು ಆತಂಕಿತರಾಗಿದ್ದಾರೆ. ಪಡುಮಾರ್ನಾಡು: ಮನೆ ನಿವೇಶನದ ಕೊರತೆ
ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಇರುವ ಪಡುಮಾರ್ನಾಡು ಗ್ರಾ.ಪಂ. ಪರಿಸರ ರಮ್ಯ ಪಂಚಾಯತ್. ಒಟ್ಟು 5 ವಾರ್ಡ್‌ಗಳಿದ್ದು 18 ಸ್ಥಾನಗಳಿವೆ. ಈಗಾಗಲೇ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 16 ಸ್ಥಾನಗಳಲ್ಲಿ 39 ಮಂದಿ ಸ್ಪರ್ಧಿ ಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ಸಮಬಲದ ನಡುವೆ ಬಿಜೆಪಿ ಬೆಂಬಲಿತರ ಆಡಳಿತವಿತ್ತು. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಮನೆ ನಿವೇಶನ ನೀಡಲಾಗುತ್ತಿಲ್ಲ. ಶ್ಮಶಾನ ನಿರ್ಮಿಸಲೂ ಸಮಸ್ಯೆಯಾಗಿದೆ.
Related Articles
ಮೂಡುಬಿದಿರೆಯ ಪಶ್ಚಿಮದಲ್ಲಿರುವ ಪುತ್ತಿಗೆ ಗ್ರಾ.ಪಂ. 6 ವಾರ್ಡ್‌ಗಳಿದ್ದು 21 ಸ್ಥಾನಗಳನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿ 16, ಜೆಡಿಎಸ್ 4 ಮತ್ತು ಎಸ್‌ಡಿಪಿಐ ಬೆಂಬಲಿತರೋರ್ವರು ವಿಜೇತರಾಗಿದ್ದರು. ಈ ಬಾರಿ ಕಾಂಗ್ರೆಸ್ ಬೆಂಬಲಿತರೋರ್ವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 20 ಸ್ಥಾನಗಳಲ್ಲಿ 45 ಮಂದಿ ಕಣದಲ್ಲಿದ್ದಾರೆ.
Advertisement
ಪೆಲತಡ್ಕ ಕಂಚಿಬೈಲು ಪ್ರದೇಶದಲ್ಲಿರುವ 5 ಸೆಂಟ್ಸ್ ಕಾಲನಿಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ದಾರಿದೀಪ, ನೀರಿನ ಸಮಸ್ಯೆಯೂ ಇದೆ. ಉಳಿದಂತೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪುತ್ತಿಗೆಯಲ್ಲೂ ಜೀವಂತವಾಗಿದೆ. ಕೆಲವೆಡೆ ಮನೆ ನಿವೇಶನ ನೀಡಲು ಸಮಸ್ಯೆಯಾಗಿದೆ. ಹೊಂದಾಣಿಕೆಯ ಕೊರತೆಯಿಂದಾಗಿ ಗ್ರಾಮೀಣ ಕೂಡುರಸ್ತೆಗಳು ಇನ್ನೂ ನಿರ್ಮಾಣವಾಗಿಲ್ಲ. ಹಾಗಾಗಿ ಸಮಗ್ರ ಅಭಿವೃದ್ಧಿ ಎಂಬುದು ಕನಸಾಗಿಯೇ ಉಳಿದಿದೆ. ಕ್ರೀಡಾ ಪ್ರತಿಭೆಗಳಿದ್ದರೂ ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡದೆ ಸಮಸ್ಯೆಯಾಗಿದೆ. ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಪಾಲಡ್ಕ: ಪ್ರಬಲ ಪೈಪೋಟಿಪಾಲಡ್ಕ ಗ್ರಾ.ಪಂ.ನಲ್ಲಿ 6 ವಾರ್ಡ್‌ಗಳಿದ್ದು 16 ಸ್ಥಾನಗಳಿವೆ. ಕಳೆದ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿತರು ತಲಾ 7 ಸ್ಥಾನಗಳನ್ನು , ಜೆಡಿಎಸ್ ಬೆಂಬಲಿತರು 2 ಸ್ಥಾನಗಳಲ್ಲಿ ಜಯ ಗಳಿಸಿದ್ದರು. ಕುತೂಹಲಕಾರಿ ಸನ್ನಿವೇಶದಲ್ಲಿ ಜೆಡಿಎಸ್ ಬೆಂಬಲಿತೆ ಅಧ್ಯಕ್ಷೆಯಾದರೆ ಕಾಂಗ್ರೆಸ್ ಬೆಂಬಲಿತರು ಉಪಾಧ್ಯಕ್ಷರಾದರು. ಈ ಬಾರಿ 38 ಮಂದಿ ಕಣದಲ್ಲಿದ್ದಾರೆ.
ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಮನೆ ನಿವೇಶನ ನೀಡಲು ಕೊಂಚ ತೊಡಕಾಗಿದೆ. ಕೂಡು ರಸ್ತೆಗಳು ನಿರ್ಮಾಣಕ್ಕೂ ಹಲವು ತೊಡಕುಗಳಿವೆ. ತೆಂಕ ಮಿಜಾರು: ಡೀಮ್ಡ್ ಫಾರೆಸ್ಟ್‌ನದ್ದೇ ಸಮಸ್ಯೆ
ತೆಂಕಮಿಜಾರು ಮತ್ತು ಬಡಗ ಮಿಜಾರು ಗ್ರಾಮಗಳ ವ್ಯಾಪ್ತಿಯ ತೆಂಕ ಮಿಜಾರು ಗ್ರಾ.ಪಂ.ನಲ್ಲಿ 6 ವಾರ್ಡ್ ಗಳಿದ್ದು ಒಟ್ಟು 22 ಸ್ಥಾನಗಳಿವೆ. ಈಗಾಗಲೇ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನ ಗಳಿಗಾಗಿ 44 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಅವಧಿಯಲ್ಲಿ 13 ಕಾಂಗ್ರೆಸ್, 5 ಬಿಜೆಪಿ, 4 ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಮೊದಲ ಅವಧಿಗೆ ಆಡಳಿತ ನಡೆಸಿ, ಬಳಿಕ ಜೆಡಿಎಸ್ ಬೆಂಬಲಿತರು ಕುತೂಹಲಕಾರಿ ಸನ್ನಿವೇಶದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಪಂಚಾಯತ್ ಉಳಾಯಿಯಂಗಡಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಮೀಸಲಿಟ್ಟ ಜಾಗ ಹಾಗೇ ಉಳಿದುಕೊಂಡಿದೆ. ಮನೆ ನಿವೇಶನಗಳನ್ನು ನೀಡಲೂ ಸಮಸ್ಯೆ ಉಂಟಾಗಿದೆ. ಮೂರನೇ ವಾರ್ಡ್‌ನ ದೇವಕುದ್ರುವಿನಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದರೂ ನೀರಿನ ಸಮಸ್ಯೆ ಉಳಿದು ಕೊಂಡಿದೆ. ನೂಯಿಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ ಸಮಸ್ಯೆ ಇದೆ. ಗಾಂಧಿ ಗ್ರಾಮ ಪುರಸ್ಕೃತ ಬೆಳುವಾಯಿ
ಒಂದೇ ಗ್ರಾಮ ವ್ಯಾಪ್ತಿಯಲ್ಲಿ ಒಂದೇ ಗ್ರಾಮ ಪಂಚಾಯತ್, ಒಂದೇ ತಾಲೂಕು ಪಂಚಾಯತ್ ವ್ಯಾಪ್ತಿ ಇರುವ ಬೆಳುವಾಯಿ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ಕಳೆದ ಅವಧಿಯಲ್ಲಿ ಒಂದೇ ಪಕ್ಷದ (ಬಿಜೆಪಿ) ಬೆಂಬಲಿತರಿಬ್ಬರ ಅಧ್ಯಕ್ಷತೆಯ ಸಂದರ್ಭ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಹೆಗ್ಗಳಿಕೆ ಈ ಪಂಚಾಯತ್‌ಗೆ ಇದೆ. ಇಲ್ಲಿ 7 ವಾರ್ಡ್‌ಗಳಲ್ಲಿ ಒಟ್ಟು 26 ಸ್ಥಾನಗಳಿವೆ. ಈ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತರು 20, ಕಾಂಗ್ರೆಸ್ ಬೆಂಬಲಿತರು 6 ಮಂದಿ ಗೆದ್ದಿದ್ದರು.ಈ ಬಾರಿ ಕೆಲವು ಕಡೆ ಮೀಸಲಾತಿ ಬದಲಾವಣೆಯಿಂದಾಗಿ ಕೆಲವರು ತಮ್ಮ ವಾರ್ಡ್ ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಂತಿಮವಾಗಿ 26 ಸ್ಥಾನಗಳಿಗೆ 58 ಮಂದಿ ಸ್ಪರ್ಧಿಸುತ್ತಿದ್ದಾರೆ. ಬೆಳುವಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿರುವುದರಿಂದಾಗಿ ಪಟ್ಟಣದ ಮಾದರಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಪೆರೋಡಿಯಲ್ಲಿ ಜಾಗ ಗುರುತಿಸಲಾಗಿದ್ದರೂ ಸ್ಥಳೀಯರ ಪ್ರತಿರೋಧದಿಂದಾಗಿ ತೊಡಕಾಗಿದೆ. ಗಾಂಧೀನಗರದಲ್ಲಿ ಕುಸಿದುಬಿದ್ದಿರುವ ಸೇತುವೆ ಪುನರ್‌ನಿರ್ಮಾಣವಾಗಬೇಕಿದೆ. ಜಲಜೀವನ ಮಿಶನ್‌ನಡಿಯಲ್ಲಿ ಕುಡಿಯುವ ನೀರಿನ ಯೋಜನೆ ಕಾರ್ಯಗತವಾದಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ.