ಬೀದರ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮುಂದುವರೆದಂತೆಲ್ಲ ಹೊಸ ಆವಿಷ್ಕಾರ ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ರೋಬೋಟ್ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುವ ಕಾರ್ಯಕ್ಕೆ ಮಹತ್ವ ನೀಡಲಾಗುತ್ತಿದೆ ಎಂದು ದಾವಣಗೆರೆ ಶಿವಗಂಗೋತ್ರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್.ವಿ. ಹಲಸೆ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಶನಿವಾರ ಎಲೆಕ್ಟ್ರಾನಿಕ್ ವಿಭಾಗದಿಂದ ಮಾನವ ಯಂತ್ರ (ರೋಬೋಟ್) ತಂತ್ರಜ್ಞಾನ ಮತ್ತು ಗಣಕಯಂತ್ರದ ಮೇಲೆ ಎಲೆಕ್ಟ್ರಾನಿಕ್ ಸರ್ಕ್ನೂಟ್ ಜೋಡಣೆ ಕುರಿತು ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೋಬೋಟ್ ತಂತ್ರಜ್ಞಾನದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಾಗೂ ಸಮಯ ಉಳಿತಾಯ ಮಾಡಲು ಸಾಧ್ಯ ಎಂದು ಹೇಳಿದರು.
ತಾಂತ್ರಿಕ ಬೆಳವಣಿಗೆಯಿಂದ ಮನುಷ್ಯನಿಗೆ ಸಂಶೋಧನೆಗೆ ಉಪಯುಕ್ತವಾಗುತ್ತಿದೆ. ಕೆಲಸ ಕಾರ್ಯಗಳ ಗುಣಮಟ್ಟ ಸುಧಾರಿಸುತ್ತಿದೆ. ನೂರಾರು ಕಾರ್ಮಿಕರ ಕೆಲಸವನ್ನು ಒಂದೇ ಯಂತ್ರ ಮಾಡುವುದರಿಂದ ಒಟ್ಟಿಗೆ ಹಲವಾರು ಕೆಲಸಗಳು ಸುಗಮವಾಗಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ವಸ್ತುಗಳ ಪುನರ್ಬಳಕೆಯಿಂದ ಹೊಸ ಹೊಸ ಆವಿಷ್ಕಾರಗಳು ಹೊರ ಹೊಮ್ಮುತ್ತವೆ. ಹೊಸ ಹೊಸ ಸಾಫ್ಟವೇರ್‌ಗಳು ಬೆಳಕಿಗೆ ಬಂದು ಸಂಶೋಧನಾ ಪ್ರಮಾಣದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಹೊಸ ತಂತ್ರಜ್ಞಾನ ಕುರಿತು ತಿಳಿದುಕೊಳ್ಳುವ ಮೂಲಕ ಹೊಸ ಸಂಶೋದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ.ಜಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಬೋಟ್ ತಂತ್ರಜ್ಞಾನದಿಂದ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಿಸುತ್ತದೆ. ಆಡಳಿತ ನಿರ್ವಹಣೆ ಬಲಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಾಮರ್ಥ್ಯ ಹೆಚ್ಚಾಗಿ ಯುವ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು. ಪುಣೆ ಎಲೆಕ್ಟ್ರಾನಿಕ್ ವಿಭಾಗದ ಸಂಪನ್ಮೂಲ ವ್ಯಕ್ತಿ ದೀಪಕ ಶೆಟ್ಟೆ ಮಾತನಾಡಿ, ಕೈಗಾರಿಕೋದ್ಯಮ ಅಭಿವೃದ್ಧಿಯಾಗಲು ರೋಬೋಟ್ ತಂತ್ರಜ್ಞಾನ ಬಹು ಉಪಯುಕ್ತ. ಜೊತೆಗೆ ನಿರಿಕ್ಷೆಗೂ ಮೀರಿ ವಸ್ತುಗಳ ಪಾರದರ್ಶಕತೆ ಇದರಿಂದ ಸಾಧ್ಯ ಎಂದರು.
ಕರ್ನಾಟಕ ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಪ್ರೊ| ರಾಜೇಂದ್ರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ| ಎಂ.ಎಸ್. ಪಾಟೀಲ, ರವಿಶಂಕರ ಸೂರ್ಯವಂಶಿ, ಎಲೆಕ್ಟ್ರಾನಿಕ್ ವಿಭಾಗದ ಪ್ರಾಧ್ಯಾಪಕ ಅನಿಲಕುಮಾರ ಚಿಕಮಣ್ಣೂರ್, ಆರ್.ಎಚ್. ಪಾಟೀಲ, ಸಂಸ್ಥೆ ಸಂಯೋಜನಾಧಿಕಾರಿ ಅಭಯಕುಮಾರ ಪಾಟೀಲ, ಸೋಮನಾಥ ಬಿರಾದಾರ ಇತರರಿದ್ದರು.