ಶ್ರೀನಗರ್: ಪೂಂಚ್ ನ ಸುರಾನ್ ಕೋಟ್ ಪ್ರದೇಶದಲ್ಲಿ ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರ ಅಬು ಝರಾರ್ ನನ್ನು ಹತ್ಯೆಗೈದಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ. ಪೂಂಚ್ ಜಿಲ್ಲೆಯ ಸುರಾನ್ ಕೋಟ್ ಪ್ರದೇಶದ ಬುಫ್ಲಿಯಾಜ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪಕ್ಷದ ಅಭ್ಯರ್ಥಿ ಗೆದ್ದ ಸಂಭ್ರಮಕ್ಕೆ ಡಾನ್ಸ್ ಮಾಡಿದ ಶಾಸಕಿ ರೂಪಾಲಿ ನಾಯ್ಕ್
ಅಡಗುತಾಣದಿಂದ ಭದ್ರತಾ ಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದ್ದರು, ಆದರೆ ಸೇನೆಯ ಪ್ರತಿ ದಾಳಿಯಲ್ಲಿ ವಿದೇಶಿ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇನ್ನುಳಿದ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ಎ.ಕೆ.47, ನಾಲ್ಕು ಮ್ಯಾಗಝೀನ್ಸ್, ಒಂದು ಗ್ರೆನೇಡ್ ಹಾಗೂ ನಗದು (ಭಾರತದ ಕರೆನ್ಸಿ) ಹಣ ವಶಪಡಿಸಿಕೊಂಡಿದ್ದು, ಸಾವನ್ನಪ್ಪಿರುವ ಮೋಸ್ಟ್ ವಾಂಟೆಡ್ ಉಗ್ರನಿಗೆ ಪಾಕಿಸ್ತಾನದ ನಂಟಿದೆ ಎಂಬುದು ಬಹಿರಂಗವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಪೂಂಚ್ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿರುವುದಾಗಿ ಭದ್ರತಾ ಪಡೆ ತಿಳಿಸಿದೆ.