ಬೆಂಗಳೂರು: ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ 15ರಿಂದ 29ನೇ ವಯಸ್ಸಿನವರು ಎರಡನೇ ಸ್ಥಾನದಲಿದ್ದು ಆತ್ಮಹತ್ಯೆಗೆ ಮಾನಸಿಕ ಅಸ್ವಸ್ಥತೆಯೂ ಒಂದು ಕಾರಣ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗದ ಅಧ್ಯಕ್ಷ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಯುವ ಜನರು ಮತ್ತು ಮಾನಸಿಕ ಆರೋಗ್ಯ ವಿಷಯ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಲಿಂಗಕಾಮ, ದ್ವಿಲಿಂಗಿ, ಲಿಂಗ ಪರಿವರ್ತನೆ ಮತ್ತು ಕೈದಿಗಳು ಆತ್ಮಹತ್ಯೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮದ್ಯಪಾನ , ವೈವಾಹಿಕ ಸಂಬಂಧಗಳಲ್ಲಿ ಬಿರುಕು, ಖನ್ನತೆ, ಕೀಳರಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.
ಆತಂಕ, ಖನ್ನತೆ, ಹಿಸ್ಟೀರಿಯಾ, ನಡವಳಿಕೆ ದೋಷ, ನಿದ್ರಾಹೀನತೆ, ಮರೆವು, ಲೈಂಗಿಕ ಸಮಸ್ಯೆಗಳಿಗೆ ಔಷಧಗಳು ಲಭ್ಯವಿವೆ. ಮನೋ ರೋಗಗಳಿಗೆ ಚಿಕಿತ್ಸೆ ಇದೆ ಎಂಬುದು ವಿದ್ಯಾವಂತರಿಗೂ ತಿಳಿಯದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಪಂದನ ಸಂಸ್ಥೆಯ ಆರೋಗ್ಯ ಕೇಂದ್ರದ ನಿರ್ದೇಶಕ ಡಾ. ಮಹೇಶ್ ಮಾತನಾಡಿ, ಸ್ವಾಸ್ಥ್ಯ ಮನಸ್ಸಿನ ಕಾಳಜಿಯೊಂದಿಗೆ ಮನೋರೋಗದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡುವ ಮೂಲಕ ಅವರು ಕೂಡ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಿದೆ ಎಂಬುದನ್ನು ತಿಳಿಸುವ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ಡಾ.ಸಂಗೀತ ಅಮರ್‌ನಾಥ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 5 ಕೋಟಿ ಜನ ಖನ್ನತೆಯಿಂದ ಬಳಲುತ್ತಿ¨ªಾರೆ. ವಿಶ್ವದಲ್ಲಿ ಇದರ ಸಂಖ್ಯೆ ಸುಮಾರು 30 ಕೋಟಿಗೂ ಅಧಿಕ ಎಂದು ತಿಳಿಸಿದರು.