Advertisement

ಮನೆ ನಿರ್ಮಾಣದ ಬಹುತೇಕ ಕೆಲಸ ಒಬ್ಬರೇ ಮುಗಿಸಿದರು!

11:09 AM Nov 16, 2018 | |

ಸವಣೂರು: ಸವಣೂರು ಗ್ರಾಮದ ಮಾಂತೂರು ನಿವಾಸಿ ಫಾರೂಕ್‌ ಅವರು ಒಬ್ಬಂಟಿಯಾಗಿ ತನ್ನ ಮನೆಯ ಶೇ. 75ರಷ್ಟು ಕೆಲಸಕಾರ್ಯಗಳನ್ನು ತಾನೊಬ್ಬನೇ ಮಾಡಿ ಮುಗಿಸಿದ್ದಾರೆ. ಮನೆಯ ತಾರಸಿ ಹೊರತುಪಡಿಸಿ ಅಡಿಪಾಯದಿಂದ ಹಿಡಿದು ಗೋಡೆ ಕಟ್ಟಿ, ಸಾರಣೆಯ ತನಕದ ಕೆಲಸವನ್ನು ಯಾರ ನೆರವು ಇಲ್ಲದೆ ಏಕಾಂಗಿಯಾಗಿ ಮಾಡಿದ್ದಾರೆ. ಮರ ಕೊಯ್ಯುವ ಯಂತ್ರದ ಆಪರೇಟರ್‌ ಆಗಿ ವೃತ್ತಿ ನಿರ್ವಹಿಸುತ್ತಿರುವ ಫಾರೂಕ್‌ ಸಕಲ ಕಲಾ ವಲ್ಲಭರು ಎಂದರೆ ತಪ್ಪಾಗಲಾರದು.

Advertisement

ಮನೆಯ ಎಲೆಕ್ಟ್ರೀಶಿಯನ್‌, ಅಡುಗೆ, ಪೈಂಟಿಂಗ್‌, ಪ್ಲಂಬಿಂಗ್‌, ಸಾರಣೆ ಮೊದಲಾದ ರೀತಿಯ ಕೆಲಸಗಳಲ್ಲಿ ಪರಿಣಿತಿ ಪಡೆದಿರುವ ಅವರು ತಮ್ಮ ಕಲಾ ಚಟುವಟಿಕೆಗಳಿಂದಲೂ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ. ಪ್ರತೀ ವರ್ಷ ಈದ್‌ ಮೀಲಾದ್‌ ಮೆರವಣಿಗೆಗೆ ತನ್ನ ದ್ವಿಚಕ್ರ ವಾಹನವನ್ನು ವಿಭಿನ್ನ ಶೈಲಿಯಲ್ಲಿ ಸಿಂಗರಿಸುವ ಅವರ ಚಾಕಚಕ್ಯತೆ ಗ್ರಾಮದಲ್ಲಿ ಗಮನ ಸೆಳೆದಿದೆ.

ಸುಲಭದ ಮಾತೇ ಅಲ್ಲ
ಸರಕಾರದ ಯೋಜನೆಯ ಸಹಕಾರದೊಂದಿಗೆ ನಿರ್ಮಿಸುತ್ತಿರುವ ಮನೆ ಇದಾಗಿದೆ. ಏಳು ಅಡಿ ಆಳದ ತಳಪಾಯಕ್ಕೆ ಲೋಡುಗಟ್ಟಲೆ ಕಾಡು ಕಲ್ಲುಗಳನ್ನು ಒಬ್ಬನೇ ತುಂಬಿದ್ದಾರೆ. ಮಣ್ಣು ಬೆರೆಸಿ ಓರಣವಾಗಿ ಜೋಡಿಸಿ, ಅದರ ಮೇಲೆ ಕೆಂಪು ಕಲ್ಲಿನ ಪಂಚಾಂಗವನ್ನೂ ಫಾರೂಕ್‌ ಒಬ್ಬರೇ ನಿರ್ಮಿಸಿದ್ದಾರೆ. ಅನಂತರ ಸಂಪೂರ್ಣ ಗೋಡೆಯನ್ನು ಕಟ್ಟಿದ್ದಾರೆ. ಅವರೇ ಮೇಸ್ತ್ರಿ. ಅವರೇ ಹೆಲ್ಪರ್‌. ಕಿಟಕಿ ಮತ್ತು ದಾರಂದಗಳನ್ನು ಇರಿಸುವಾಗ ಮಾತ್ರ ನಾಲ್ಕು ಮಂದಿ ಕೆಲಸಗಾರರ ಸಹಾಯವನ್ನು ಪಡೆದುಕೊಂಡಿದ್ದಾರಂತೆ.

ತಾರಸಿಯ ಕೆಲಸವನ್ನು ಸೆಂಟ್ರಿಂಗ್‌ ಕೆಲಸದವರಿಂದ ಮಾಡಿಸಿದ್ದಾರೆ. ಈಗ ಮನೆಯ ಮುಕ್ಕಾಲು ಭಾಗದಷ್ಟು ಕೆಲಸ ಪೂರ್ಣಗೊಂಡಿದ್ದು, ಇನ್ನುಳಿದ ಕೊನೆಯ ಹಂತದ ಕೆಲಸಗಳು ಬಾಕಿ ಇವೆ. ಅವುಗಳನ್ನೂ ಕೂಡಾ ತಾನೊಬ್ಬನೇ ಮಾಡಿ ಮುಗಿಸುತ್ತೇನೆ ಎನ್ನುತ್ತಾರೆ ಫಾರೂಕ್‌. 

ಆತ್ಮವಿಶ್ವಾಸ ಇದೆ
ನನ್ನ ಕನಸಿನ ಮನೆಯ ಗಾರೆ, ವಯರಿಂಗ್‌, ಪ್ಲಂಬಿಂಗ್‌, ಪೈಂಟಿಂಗ್‌ ಕೆಲಸಗಳನ್ನು ತಾನೊಬ್ಬನೇ ಮುಗಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನಗಿದೆ. ಇಲ್ಲಿಯ ತನಕ ಸುಮಾರು 3.60 ಲ.ರೂ. ವ್ಯಯಿಸಿದ್ದೇನೆ. ತನ್ನ ಒಂಟಿ ದುಡಿಮೆಯ ಮೂಲಕ ಕೆಲಸಗಾರರಿಗೆ ಕೊಡಬೇಕಾಗಿದ್ದ 3 ಲಕ್ಷ ರೂ.ನಷ್ಟು ಹಣ ಉಳಿತಾಯವಾಗಿದೆ.
– ಫಾರೂಕ್‌,
ಮನೆ ನಿರ್ಮಿಸುತ್ತಿರುವವರು

Advertisement

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next