Advertisement

ಕಡಂದಲೆ ನಲ್ಲೆಗುತ್ತು ಕಿಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣ

10:18 PM May 13, 2019 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಸಚ್ಚೇರಿ ಪೇಟೆ ಮತ್ತು ಕಡಂದಲೆ ಭಾಗದ ಕೃಷಿಕರ ಪಾಲಿನ ಆಶಾಕಿರಣವೆನಿಸಿರುವ ನಲ್ಲೆಗುತ್ತು ಸಮೀಪದ ಕಿಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

Advertisement

ಶಾಸಕರ ಮುತುವರ್ಜಿ
ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್‌ ಅವರ ಮುತುವರ್ಜಿಯಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಸಚ್ಚೇರಿಪೇಟೆ ಶಾಂಭವಿ ನದಿಯ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಶಿಲಾನ್ಯಾಸ ನಡೆದು ಸುಮಾರು ಶೇ. 40 ಕಾಮಗಾರಿ ನಡೆದ ಸಂದರ್ಭ ಮಳೆ ಆರಂಭವಾದ ಕಾರಣ ಸ್ಥಗಿತಗೊಳಿಸಲಾಗಿತ್ತು. ಬಳಿಕ ಕಾಮಗಾರಿ ನಡೆದಿದ್ದು ಶೇ.90ರಷ್ಟು ಪೂರ್ಣಗೊಂಡಿದೆ.

ಹಲವು ವರ್ಷದ ಕನಸು
ಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಸಚ್ಚೇರಿಪೇಟೆ ಹಾಗೂ ಕಡಂದಲೆ ಗ್ರಾಮದ ಕೃಷಿಕರಿಗೆ ನೀರಾವರಿಗಾಗಿ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಹಲವು ವರ್ಷದ ಹಿಂದೆ ನಲ್ಲೆಗುತ್ತು ಸಮೀಪ ಶಾಂಭವಿ ನದಿಗೆ ಅಡ್ಡದಾಗಿ ಕಿಂಡಿ ಅಣೆಕಟ್ಟು ಕಟ್ಟಲಾಗಿತ್ತು. ಇದರಿಂದ ಬೋಳ, ಕಡಂದಲೆ ಹಾಗೂ ಮುಂಡ್ಕೂರು ಗ್ರಾಮ ವ್ಯಾಪ್ತಿಯ ಸಾವಿರಾರು ಎಕ್ರೆ ಕೃಷಿ ಭೂಮಿಗೆ ನೀರು ಸಿಗುತ್ತಿತ್ತು. ಆದರೆ ಕ್ರಮೇಣ ಅಣೆಕಟ್ಟು ಶಿಥಿಲಗೊಂಡಿದ್ದು, ವಾಹನ ಸಂಚಾರವೂ ಅಪಾಯಕಾರಿಯಾಗಿತ್ತು. ಈ ಭಾಗದ ಕೃಷಿಕರು ಅಣೆಕಟ್ಟಿನಲ್ಲಿ ಪ್ಲಾಸ್ಟಿಕ್‌ ಹಾಕಿ ನೀರು ತಡೆ ಹಿಡಿಯುತ್ತಿದ್ದರೂ ಪ್ರಯೋಜನವಿರಲಿಲ್ಲ. ಕೊನೆಗೆ ಜನರ ಒತ್ತಾಯದ ಮೇರೆಗೆ ಕಿಂಡಿ ಅಣೆಕಟ್ಟಿನ ಮರುನಿರ್ಮಾಣಕ್ಕೆ ಮುಂದಾಗಿದ್ದು, ಈಗ ಕನಸು ಈಡೇರುತ್ತಿದೆ.

ಅಣೆಕಟ್ಟು ಜತೆ ನಿರ್ಮಾಣವಾಗುತ್ತಿರುವ ಸೇತುವೆ ಯಿಂದಾಗಿ ಸಚ್ಚೇರಿಪೇಟೆ ಮತ್ತು ಕಡಂದಲೆಗೆ ಸಂಪರ್ಕ ಸುಲಭವಾಗಲಿದೆ. ಸಚ್ಚೇರಿಪೇಟೆ ಪ್ರದೇಶದ ಜನ ನಿಟ್ಟೆ, ಕಾರ್ಕಳ ಪರಿಸರವನ್ನು ಸಂಪರ್ಕಿಸಲು ಈ ರಸ್ತೆ ಸಮೀಪವಾಗಿರುವುದರಿಂದ ನಿತ್ಯದ ಓಡಾಟಕ್ಕೆ ಜನ ಈ ಮರ್ಗವನ್ನೇ ಬಳಸಬಹುದು.

Advertisement

ಕೃಷಿಕರ ಬವಣೆ ನೀಗಿಸುವುದೇ ನಮ್ಮ ಗುರಿ
ಮುಂಡ್ಕೂರು ಗ್ರಾ.ಪಂ.ನಲ್ಲಿ ಈ ಹಿಂದಿನ ಆಡಳಿತದ ಅವಧಿಯಿಂದಲೇ ಸ್ವಜಲಧಾರಾ ಯೋಜನೆಯ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಮಂಗಳ ಹಾಡಲಾಗಿದೆ. ಇದೀಗ ಕೃಷಿಕರ ನೀರಿನ ಬವಣೆ ನೀಗಿಸುವುದೇ ನಮ್ಮ ಗುರಿ.
-ಶುಭಾ ಪಿ.ಶೆಟ್ಟಿ,ಅಧ್ಯಕ್ಷೆ,ಮುಂಡ್ಕೂರು ಗ್ರಾ.ಪಂ.

ಕನಸು ನನಸಾಗಲಿದೆ
ಮಳೆಗಾಲ ಮುಗಿಯುತ್ತಿದ್ದಂತೆ ಕೃಷಿಗೆ ಬೇಕಾಗುವ ನೀರನ್ನು ಸಂಗ್ರಹಿಸಲು ಈ ಭಾಗದ ಕೃಷಿಕರು ಹರಸಾಹಸ ಪಡುತ್ತಿದ್ದರು. ಪ್ಲಾಸ್ಟಿಕ್‌ ಹಾಕಿ ನೀರನ್ನು ಸಂಗ್ರಹಿಸುತ್ತಿದ್ದರು. ಆದರೆ ಕೆಲವೊಂದು ಬಾರಿ ನೀರಿನ ಒತ್ತಡಕ್ಕೆ ಮಣ್ಣು ಸಹಿತ ಪ್ಲಾಸ್ಟಿಕ್‌ ಹರಿದು ನೀರು ಪೋಲಾದದ್ದೂ ಇದೆ. ಈ ಬಾರಿ ಬಹು ವರ್ಷದ ಕನಸು ನನಸಾಗಲಿದೆ.
-ಸುಬ್ಬಣ್ಣ ಶೆಟ್ಟಿ,ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next