ಪ್ರವಾಸಿ ಇಂಗ್ಲೆಂಡ್ ವಿರುದ್ಧ ಚೆನ್ನೈ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಮೊದಲ ದಿನದಾಟದಿಂದಲೇ ಹಿನ್ನಡೆ ಪಡೆದ ತಂಡ ಚೇತರಿಸಲೇ ಇಲ್ಲ. ನಾಲ್ಕನೇ ಇನ್ನಿಂಗ್ಸ್ ನಲ್ಲಿ 420 ರನ್ ಗಳಿಸಬೇಕಾದ ಗುರಿ ಪಡೆದ ವಿರಾಟ್ ಬಳಗ ಸತತ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಇಂತಹದೇ ಸಂದರ್ಭ 2008ರಲ್ಲಿಯೂ ಎದುರಾಗಿತ್ತು. ಆಗಲೂ ಎದುರಾಳಿ ಇದೇ ಇಂಗ್ಲೆಂಡ್, ಮೈದಾನವೂ ಅದೇ ಚೆನ್ನೈನ ಚಿದಂಬರಂ ಸ್ಟೇಡಿಯಂ. ಆದರೆ ಪಂದ್ಯದ ಫಲಿತಾಂಶ ಮಾತ್ರ ಬದಲಾಗಿತ್ತು. ಕಾರಣ ವೀರೂ, ಸಚಿನ್ ಮತ್ತು ಯುವಿ!
ಅದು 2008ರ ಡಿಸೆಂಬರ್ ನಲ್ಲಿ ನಡೆದ ಇಂಗ್ಲೆಂಡ್ ಸರಣಿಯ ಮೊದಲ ಟೆಸ್ಟ್ ಪಂದ್ಯ. ಮುಂಬೈ ಉಗ್ರ ದಾಳಿ ನಡೆದು ತಿಂಗಳಷ್ಟೇ ಆಗಿತ್ತು. ಏಕದಿನ ಸರಣಿಯ ಐದು ಪಂದ್ಯಗಳನ್ನು ಆಡಿದ್ದ ಇಂಗ್ಲೆಂಡ್ ತಂಡ ದಾಳಿಯ ಬಳಿಕ ಭದ್ರತಾ ಕಾರಣಗಳಿಂದ ತವರಿಗೆ ಮರಳಿತ್ತು. ಆದರೆ ಮತ್ತೆ ಧೈರ್ಯ ಮಾಡಿ ಎರಡು ಟೆಸ್ಟ್ ಪಂದ್ಯಗಳ ಸರಣಿಯಾಡಲು ಭಾರತಕ್ಕೆ ಆಗಮಿಸಿತ್ತು. ಹೀಗಾಗಿ ಭಾವನಾತ್ಮಕವಾಗಿಯೂ ಈ ಸರಣಿ ಮಹತ್ವ ಪಡೆದಿತ್ತು.
ಚೆನ್ನೈ ಅಂಗಳದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ನಾಯಕನ ಆಯ್ಕೆಯನ್ನು ಸಮರ್ಥಿಸುವಂತೆ ಬ್ಯಾಟಿಂಗ್ ಮಾಡಿದ್ದರು ಆರಂಭಿಕರಾದ ಆ್ಯಂಡ್ರ್ಯೂ ಸ್ಟ್ರಾಸ್ ಮತ್ತು ಅಲಿಸ್ಟರ್ ಕುಕ್. ಸ್ಟ್ರಾಸ್ ಭರ್ಜರಿ ಶತಕ ಬಾರಿಸದರೆ ಕುಕ್ ಅರ್ಧ ಶತಕದ ಆಟವಾಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 316 ರನ್ ಗಳಿಸಿತ್ತು.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕುಸಿತ ಕಂಡಿತ್ತು. ಅಗ್ರ ಬ್ಯಾಟ್ಸ್‌ಮನ್ ಗಳು ವೈಫಲ್ಯ ಅನುಭವಿಸಿದರು. ನಾಯಕ ಧೋನಿ ಅರ್ಧ ಶತಕ ಬಾರಿಸಿದರೆ, ಹರ್ಭಜನ್ ಸಿಂಗ್ 40 ರನ್ ಗಳಿಸಿದ್ದರು. ತಂಡ ಗಳಿಸಿದ್ದು 241 ರನ್ ಮಾತ್ರ. 75 ರನ್ ಗಳ ಹಿನ್ನಡೆ!
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ತಂಡ ಮತ್ತೆ ಉತ್ತಮ ಮೊತ್ತ ಕಲೆ ಹಾಕಿತ್ತು. ಅಲಿಸ್ಟರ್ ಕುಕ್, ಇಯಾನ್ ಬೆಲ್, ಕೆವಿನ್ ಪೀಟರ್‌ಸನ್ ಒಂದಂಕಿ ಮೊತ್ತಕ್ಕೆ ಔಟಾದರೂ ನಾಲ್ಕನೇ ವಿಕೆಟ್ ಗೆ ಜೊತೆಯಾದ ಆ್ಯಂಡ್ರ್ಯೂ ಸ್ಟ್ರಾಸ್ ಮತ್ತು ಪಾಲ್ ಕಾಲಿಂಗ್‌ವುಡ್ ದ್ವಿಶತಕ ಜೊತೆಯಾಟ ನಡೆಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಸ್ಟ್ರಾಸ್ ಇಲ್ಲೂ ಶತಕ ಸಿಡಿಸಿದರು. ಉಭಯ ಆಟಗಾರರು ತಲಾ 108 ರನ್ ಗಳಿಸಿದರು.
ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಬೇಕಾದ ಗುರಿ 387 ರನ್. ಭಾರತದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನೋಡಿದ್ದ. ಆಂಗ್ಲರು ಈ ಪಂದ್ಯದಲ್ಲಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದರು. ಅದುವರೆಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿ ಜಯ ಗಳಿಸಿ ಬರೋಬ್ಬರಿ 32 ವರ್ಷವಾಗಿತ್ತು. ಹೀಗಾಗಿ ಈ ಪಂದ್ಯ ಪೀಟರ್ಸನ್ ಬಳಗದ ಪಾಲಾಯಿತೆಂದು ಕ್ರಿಕೆಟ್ ಪಂಡಿತರು ಶರಾ ಬರಿದಿದ್ದರು. ಆದರೆ ಚಿಪಾಕ್ ಅಂಗಳದಲ್ಲಿ ಬಿರುಗಾಳಿಯೊಂದು ಎದ್ದಿತ್ತು. ಅದು ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತ್ತು. ಅದರ ಹೆಸರು ” ವೀರೆಂದ್ರ ಸೆಹವಾಗ್’
ಟೆಸ್ಟ್ ಕ್ರಿಕೆಟ್ ನಲ್ಲೂ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸುವ ಸೆಹವಾಗ್ ಇಲ್ಲೂ ಅದನ್ನೇ ಮಾಡಿದರು. ಸಿಕ್ಕ ಎಸೆತಗಳನ್ನು ದಂಡಿಸಿದರು. ಇಂಗ್ಲೆಂಡ್ ಬೌಲರ್ ಗಳಿಗೆ ದಿಕ್ಕು ತೋಚದಂತಾಗಿತ್ತು. ಗೆಲುವಿನ ಹುಮ್ಮಸ್ಸಿನಲ್ಲಿದ್ದ ಆಂಗ್ಲರ ಹಾರಾಟ ಅರ್ಧ ಗಂಟೆಯಲ್ಲೇ ನಿಂತಿತ್ತು. ಕೇವಲ 68 ಎಸೆತ ಎದುರಿಸಿದ ವೀರೂ ನಾಲ್ಕು ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದ್ದರು. ಗಂಭೀರ್ ಜೊತೆಗೆ ಮೊದಲ ವಿಕೆಟ್ ಗೆ 117 ರನ್ ಸೇರಿಸಿದಾಗ ಭಾರತಕ್ಕೂ ಈ ಪಂದ್ಯ ಗೆಲ್ಲಬಹುದು ಎಂಬ ವಿಶ್ವಾಸ ಮೂಡಿತ್ತು.
ಆದರೆ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ನಾಲ್ಕು ರನ್ ಗೆ ಔಟಾದರೆ ಕೆಲವೇ ಹೊತ್ತಲ್ಲಿ 63 ರನ್ ಗಳಿಸಿದ್ದ ಗೌತಮ್ ಗಂಭೀರ್ ಕೂಡಾ ಔಟಾದರು. ನಂತರ ಕ್ರೀಸಿಗಿಳಿದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಆಂಗ್ಲರ ಎಸೆತಗಳನ್ನು ಸಮರ್ಥವಾಗಿ ಎದುರಿಸತೊಡಗಿದರು. ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಜೊತೆಗೂಡಿದ ಸಚಿನ್ ಅರ್ಧಶತಕದ ಜೊತೆಯಾಟವಾಡಿದರು. ಆದರೆ 26 ರನ್ ಗಳಿಸಿದ್ದ ಲಕ್ಷ್ಮಣ್ ಔಟಾದಾಗ ಭಾರತದ ಗೆಲವಿಗೆ ಇನ್ನೂ 150ಕ್ಕೂ ಹೆಚ್ಚು ರನ್ ಅಗತ್ಯವಿತ್ತು. ಆಗ ಒಂದಾದವರು ಸಚಿನ್- ಯುವರಾಜ್ ಜೋಡಿ!
ಈ ಎಡಗೈ- ಬಲಗೈ ಜೋಡಿ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿ ರನ್ ಗಳಿಸಲಾರಂಭಿಸಿತು. ಮಾಂಟಿ ಪನಸರ್- ಗ್ರೇಮ್ ಸ್ವಾನ್ ಸ್ಪಿನ್ ಜೋಡಿಯನ್ನು ಸಮರ್ಥವಾಗಿ ಎದುರಿಸಿದ ಸಚಿನ್- ಯುವಿ ಲೀಲಾಜಾಲವಾಗಿ ರನ್ ಗಳಿಸಿದರು. ಕೊನೆಯದಾಗಿ ಭಾರತ ತಂಡಕ್ಕೆ ಗೆಲುವಿಗೆ ನಾಲ್ಕು ರನ್ ಅವಶ್ಯವಿದ್ದರೆ, ಸಚಿನ್ ತೆಂಡೂಲ್ಕರ್ 99ರಲ್ಲಿ ಆಡುತ್ತಿದ್ದರು. ಶತಕಕ್ಕೆ ಕೇವಲ ಒಂದು ರನ್ ಬಾಕಿ. ಗ್ರೇಮ್ ಸ್ವಾನ್ ಎಸತೆದ ಚೆಂಡನ್ನು ಸಚಿನ್ ಲಾಂಗ್ ಲೆಗ್ ಬೌಂಡರಿಯತ್ತ ಬಾರಿಸಿದರು. ಚೆಂಡು ಬೌಂಡರಿ ಗೆರೆ ಮುಟ್ಟುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ 30 ಸಾವಿರ ಮಂದಿ ಕುಣಿದು ಕುಪ್ಪಳಿಸಿದ್ದರು. ಭಾರತ ಐತಿಹಾಸಿಕ ಟೆಸ್ಟ್ ಗೆದ್ದರೆ, ಸಚಿನ್ ತೆಂಡೂಲ್ಕರ್ 41 ನೇ ಶತಕ ಬಾರಿಸಿದ್ದರು.
ಸಚಿನ್- ಯುವಿ ಜೋಡಿ ಐದನೇ ವಿಕೆಟ್ ಗೆ ಅಜೇಯ 163 ರನ್ ಜೊತೆಯಾಟವಾಡಿದ್ದರು. ಯುವರಾಜ್ ಸಿಂಗ್ ಅಜೇಯ 85 ರನ್ ಗಳಿಸಿದ್ದರು. ಸಚಿನ್ ಶತಕ ಗಳಿಸಿದರೂ, ತಂಡ ಗೆಲ್ಲಬಹುದೆಂಬ ನಂಬಿಕೆ ಮೂಡಿಸಿದ್ದ ವಿರೇಂದ್ರ ಸೆಹವಾಗ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.
ಅದು ಕೇವಲ ಗೆಲುವಾಗಿರಲಿಲ್ಲ. ಭಾವನಾತ್ಮಕವಾಗಿ ಅತ್ಯಂತ ದೊಡ್ಡ ಗೆಲುವಾಗಿತ್ತು. ನಾಲ್ಕನೇ ಇನ್ನಿಂಗ್ಸ್ ದೊಡ್ಡ ಮೊತ್ತವನ್ನು ಚೇಸ್ ಮಾಡಲು ಸಾಧ್ಯವೇ ಇಲ್ಲವೆಂದವರಿಗೆ ತಿರುಗೇಟು ನೀಡಿದ ಗೆಲುವಾಗಿತ್ತು. ಭಾರತಕ್ಕೆ ಹೊಸ ಹುಮ್ಮಸ್ಸು ನೀಡಿದ ಗೆಲುವಾಗಿತ್ತು. ಒಗ್ಗಟ್ಟಿನಿಂದ ಆಡಿದರೆ ಯಾವ ಗುರಿಯೂ ಕಠಿಣವಲ್ಲ ಎಂದು ತೋರಿಸಿಕೊಟ್ಟ ಗೆಲುವಾಗಿತ್ತು.
ಕೀರ್ತನ್ ಶೆಟ್ಟಿ ಬೋಳ