Advertisement

ಬಹುತೇಕ ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲ!

11:01 PM Jan 15, 2020 | Lakshmi GovindaRaj |

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಬಹುತೇಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಯಂ ಪ್ರಾಂಶುಪಾಲರೇ ಇಲ್ಲ. ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ 114 ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಯಂ ಪ್ರಾಂಶು ಪಾಲರಿಲ್ಲ. ಉಳಿದ ಜಿಲ್ಲೆಗಳ 457 ಸರ್ಕಾರಿ ಪಿಯು ಕಾಲೇಜಿನ ಲ್ಲಿನ ಕಾಯಂ ಪ್ರಾಂಶುಪಾಲರು ಇಲ್ಲದೇ ಇರುವುದರಿಂದ ಪ್ರಭಾರಿ ಪ್ರಾಂಶುಪಾಲರೇ ಕಾರ್ಯಭಾರ ನಡೆಸುತ್ತಿದ್ದಾರೆ.

Advertisement

ಹೈ.ಕ.ಭಾಗದ ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಎ-ವಲಯ (ನಗರ ಪ್ರದೇಶ)ದ ಬಹುತೇಕ ಎಲ್ಲ ಕಾಲೇಜುಗಳಲ್ಲೂ ಕಾಯಂ ಪ್ರಾಂಶುಪಾಲರಿದ್ದಾರೆ. ಬಿ ಮತ್ತು ಸಿ ವಲಯ( ಗ್ರಾಮಾಂತರ ಹಾಗೂ ಪಟ್ಟಣ)ದ ಬಹುತೇಕ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರಿಲ್ಲ. ಅದರಲ್ಲೂ ಪ್ರಾಂಶುಪಾಲರಿಲ್ಲದ ಕಾಲೇಜುಗಳಲ್ಲಿ ಸಿ-ವಲಯ ಹೆಚ್ಚಿದೆ ಎಂಬುದು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಪ್ರಾಂಶುಪಾಲರು ಇಲ್ಲದೇ ಇರುವ ಕಾಲೇಜುಗಳ ಪಟ್ಟಿಯಿಂದ ತಿಳಿದುಬಂದಿದೆ.

ಬೆಂಗಳೂರು ನಗರದಲ್ಲಿ(ಎ-ವಲಯ)ಕೇವಲ 2 ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರಿಲ್ಲ. ಉಳಿದಂತೆ ಎಲ್ಲ ಜಿಲ್ಲೆಗಳ ಎ ವಲಯದ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರಿದ್ದಾರೆ. ಬಿ ಮತ್ತು ಸಿ ವಲಯದ ಕಾಲೇಜುಗಳಲ್ಲಿ ಕಾಯಂ ಪ್ರಾಂಶು ಪಾಲರಿಲ್ಲ. ರಾಮನಗರ, ಬೆಳಗಾವಿ, ಬಾಗಲಕೋಟೆ, ವಿಜಯ ಪುರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಗದಗ, ಹಾವೇರಿ, ಧಾರವಾಡ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ತುಮಕೂರು, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಎ ವರ್ಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರು ಹುದ್ದೆ ಖಾಲಿಯಿಲ್ಲ. ಬದಲಿಗಾಗಿ ಬಿ ಮತ್ತು ಸಿ ವಲಯದ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರೇ ಇಲ್ಲದಾಗಿದೆ.

ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಪ್ರಾಂಶುಪಾಲರು ಅತಿ ಮುಖ್ಯವಾಗುತ್ತಾರೆ. ಕಾಲೇಜಿನಲ್ಲಿ ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳುವ ಜತೆಗೆ ಸರ್ಕಾರದ ಹಾಗೂ ಇಲಾಖೆಯ ಸೂಚನೆಗಳನ್ನು ಪ್ರಾಂಶುಪಾಲರ ಮೂಲಕವೇ ಅನುಷ್ಠಾ ನಕ್ಕೆ ಬರಬೇಕಾಗುತ್ತದೆ. ಇದೆಲ್ಲದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪ್ರಾಂಶುಪಾಲರ ಪಾತ್ರ ಅತ್ಯಂತ ದೊಡ್ಡದಿದೆ. ಕಾಲೇಜಿನಲ್ಲಿರುವ ಅತಿಥಿ ಉಪನ್ಯಾಸಕರ ಸಹಿತವಾಗಿ ಕಾಯಂ ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರ ಮೇಲೆ ಸದಾ ನಿಗ ಇಡಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಬಹುತೇಕ ಕಾಲೇಜುಗಳಲ್ಲಿ ಪ್ರಾಂಶುಪಾಲರು ಇಲ್ಲದೇ ಇರುವುದು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆಂತಕ ಸೃಷ್ಟಿಸಿದೆ.

ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿಯಾಗಿ ವರ್ಷಗಳೇ ಕಳೆದಿದೆ. ಸರ್ಕಾರವೂ ಭರ್ತಿ ಮಾಡಿಕೊಳ್ಳುವ ಅಥವಾ ಹಿರಿಯ ಪ್ರಾಧ್ಯಾಪಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡುವ ಕಾರ್ಯ ವೇಗವಾಗಿ ಮಾಡುತ್ತಿಲ್ಲ. ವರ್ಗಾವಣೆ ಸಂದರ್ಭದಲ್ಲಿ ಬಹುತೇಕರು ನಗರ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಹಿರಿಯ ಉಪನ್ಯಾಸಕರು ತಮ್ಮ ಕರ್ತವ್ಯ ನಿರ್ವಹಣೆಯ ಜತೆಗೆ ಪ್ರಾಂಶುಪಾಲರ ಕರ್ತವ್ಯವನ್ನು ನಿರ್ವಹಿಸಬೇಕಾದ ಸ್ಥಿತಿ ಇದೆ. ಹೆಚ್ಚುವರಿ ಕಾರ್ಯಗಳಿಂದಾಗಿ ಹಿರಿಯ ಉಪನ್ಯಾಸಕರು ಕಂಗೆಟ್ಟಿದ್ದಾರೆ ಎಂದು ಕಾಲೇಜು ಉಪನ್ಯಾಸಕರೊಬ್ಬರು ಮಾಹಿತಿ ನೀಡಿದರು.

Advertisement

ಬಡ್ತಿ ನೀಡಿ ಸರ್ಕಾರ ಆದೇಶ: ರಾಜ್ಯದ ಸರ್ಕಾರಿ ಪಿಯು ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರಲ್ಲಿ ಸೇವಾ ಜೇಷ್ಠತೆಯ ಆಧಾರದಲ್ಲಿ 95 ಮಂದಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಸೋಮವಾರ ಹೊರಡಿಸಿದೆ. ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯೋಜನೆ ನಡೆಯಲಿದೆ. ಸ್ಥಳ ನಿಯೋಜನೆಗೊಂಡ 7 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಈ ಬಗ್ಗೆ ಸಂಬಂಧಪಟ್ಟ ಉಪನಿರ್ದೇಶಕರಿಗೆ ವರದಿ ನೀಡಬೇಕು. ಹುದ್ದೆಗೆ ನಿಗದಿತ ದಿನದೊಳಗೆ ಹಾಜರಾಗದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಸೇವಾ ಜೇಷ್ಠತೆಯ ಆಧಾರದಲ್ಲಿ ಹಿರಿಯ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡುವ ಕೌನ್ಸೆಲಿಂಗ್‌ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 90 ಉಪನ್ಯಾಸಕರಿಗೆ ಸೇವಾ ಜೇಷ್ಠತೆಯ ಆಧಾರದಲ್ಲಿ ಬಡ್ತಿ ನೀಡಲಾಗಿದೆ. ಇನ್ನು ಸುಮಾರು 300 ಉಪನ್ಯಾಸಕರಿಗೆ ಬಡ್ತಿ ನೀಡುವ ಸಾಧ್ಯತೆ ಇದೆ. ಸುಮಾರು 400 ಕಾಲೇಜುಗಳಿಗೆ ಪ್ರಾಂಶುಪಾಲರ ನೇಮಕಾತಿ ನಡೆಯಬಹುದು. ಕಾಯಂ ಪ್ರಾಂಶುಪಾಲರಿಲ್ಲದೇ ಕಾಲೇಜು ನಡೆಸುವುಸು ತುಂಬ ಕಷ್ಟ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next