ಹೊಸದಿಲ್ಲಿ: ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನವು ರಾಜಕೀಯ ಒತ್ತಡದ ಕಾರಣಕ್ಕೆ ನಡೆದಿದೆ ಎಂದು ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.
ಅಲ್ಲದೆ ಸಿಸೋಡಿಯಾ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವುದನ್ನು ಹೆಚ್ಚಿನ ಸಿಬಿಐ ಅಧಿಕಾರಿಗಳು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.
“ಹೆಚ್ಚಿನ ಸಿಬಿಐ ಅಧಿಕಾರಿಗಳು ಮನೀಶ್ ಬಂಧನವನ್ನು ವಿರೋಧಿಸಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಅವರೆಲ್ಲರಿಗೂ ಸಿಸೋಡಿಯಾ ಮೇಲೆ ಅಪಾರ ಗೌರವವಿದೆ. ಅಲ್ಲದೆ ಸಿಸೋಡಿಯಾ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ಅವರನ್ನು ಬಂಧಿಸಲು ರಾಜಕೀಯ ಒತ್ತಡವು ತುಂಬಾ ಹೆಚ್ಚಿತ್ತು, ತಮ್ಮ ರಾಜಕೀಯ ಧಣಿಗಳಿಗೆ ವಿಧೇಯರಾಗಿ ಸಿಬಿಐ ಅಧಿಕಾರಿಗಳು ವರ್ತಿಸಿದ್ದಾರೆ” ಎಂದು ಕೇಜ್ರಿವಾಲ್ ಸೋಮವಾರ ಟ್ವೀಟ್ ಮಾಡಿದ್ದಾರೆ.
ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು, “ಬಿಜೆಪಿಯು ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಲು ಬಯಸುತ್ತದೆ, ಇದು ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿಯಾಗಿದೆ” ಎಂದಿದ್ದಾರೆ.
ಎಂಟು ಗಂಟೆಗಳ ವಿಚಾರಣೆಯ ನಂತರ ಭಾನುವಾರ ಸಂಜೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. 2021-22 ರ ಅಬಕಾರಿ ನೀತಿಯ ಕರಡು ಮತ್ತು ಅನುಷ್ಠಾನದಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.