Advertisement

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ: ಲಾಕ್‌ಡೌನ್‌ ಸಮಯದಲ್ಲಿ ಪ್ರಕರಣಗಳಲ್ಲಿ ಏರಿಕೆ !

05:25 PM Oct 07, 2020 | Karthik A |

ಮಣಿಪಾಲ: ಹತ್ರಾಸ್ ಪ್ರಕರಣವು ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಅತ್ಯಾಚಾರಗಳ ವಿರುದ್ಧದ ಚರ್ಚೆಗಳನ್ನು ಮತ್ತೊಮ್ಮೆ ಮುನ್ನೆಲೆ ತಂದಿದೆ.

Advertisement

ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೌಟುಂಬಿಕ ಹಿಂಸೆಯೂ ಅತೀ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಅಂಶವನ್ನು ಹಲವು ದಾಖಲೆಗಳನ್ನು ಖಚಿತಪಡಿಸುತ್ತದೆ.

ನಾವು ಅಂಕಿ ಅಂಶಗಳನ್ನು ನೋಡುವುದಾದರೆ ಮಹಿಳೆಯರ ಮೇಲಿನ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ (ಒಟ್ಟು ಪ್ರಕರಣಗಳಲ್ಲಿ ಶೇ. 31) ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿದೆ.

2018ರಿಂದ 2019ರ ವರೆಗೆ ಮಹಿಳೆಯರ ಮೇಲಿನ ಅಪರಾಧಗಳು ಶೇ. 7.3 ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿಯ ಅಪರಾಧಗಳು 2019 ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುತ್ತದೆ. 2019 ರಲ್ಲಿ ಮಹಿಳೆಯರ ವಿರುದ್ಧ 4,05,861 ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2018 ರಲ್ಲಿ 3,78,236 ಪ್ರಕರಣಗಳು ದಾಖಲಾಗಿವೆ.

ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ವೇಗ
ಮಹಿಳೆಯರ ಮೇಲಿನ ಅಪರಾಧಗಳ ಪ್ರಕರಣಗಳನ್ನು ನೋಡುವುದಾದರೆ ಈ ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. 2018 ರಲ್ಲಿ ಗಂಡ ಮತ್ತು ಸಂಬಂಧಿಕರ ದೌರ್ಜನ್ಯಕ್ಕೆ ಸಂಬಂಧಿಸಿದ ಕೌಟುಂಬಿಕ ಹಿಂಸಾಚಾರದ ಒಟ್ಟು ಪ್ರಕರಣಗಳು 1,04165 ಆಗಿದ್ದು, ಇದು 2019ರಲ್ಲಿ 1,2,6,575ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 21ರಷ್ಟು ಪ್ರಕರಣ ಏರಿಕೆ.

Advertisement

ನ್ಯಾಯಾಲಯಗಳ ಹೊರೆ ಹೆಚ್ಚುತ್ತಿವೆ
ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳೆ ನ್ಯಾಯಾಲಯಕ್ಕೆ ದೊಡ್ಡ ಹೊರೆ ಎಂದು ಎನ್‌ಸಿಆರ್‌ಬಿ ವರದಿಗಳು ತೋರಿಸುತ್ತವೆ. 2018 ರಲ್ಲಿ ಸುಮಾರು ಒಂದೂವರೆ ಲಕ್ಷ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ಬಾಕಿ ಇದೆ. 2019ರಲ್ಲಿ 54 ಸಾವಿರಕ್ಕೆ ಇಳಿಸಲಾಗಿದೆ. ಆದರೆ ನ್ಯಾಯಾಲಯದ ಹೊರೆ ಕಡಿಮೆಯಾಗಿಲ್ಲ 2018 ಕ್ಕೆ ಹೋಲಿಸಿದರೆ 2019 ರಲ್ಲಿ ಸುಮಾರು 30 ಸಾವಿರ ಪ್ರಕರಣಗಳ ಪೆಂಡೆನ್ಸಿ ಹೆಚ್ಚಾಗಿದೆ. 2018 ರಲ್ಲಿ 5.39 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ, ಇದು 2019 ರಲ್ಲಿ 5.70 ಲಕ್ಷಕ್ಕೆ ಏರಿದೆ. ಕನ್ವಿಕ್ಷನ್ ದರವೂ ತುಂಬಾ ಕಡಿಮೆ ಇದೆ. 2018ರಲ್ಲಿ ಶೇ. 13 ಪ್ರಕರಣಗಳಲ್ಲಿ ದೋಷವು ಸಾಬೀತಾಗಿದ್ದು, ಅದು 2019 ರಲ್ಲಿ ಶೇ. 14.6 ಕ್ಕೆ ಏರಿಕೆಯಾಗಿದೆ.

ಲಾಕ್‌ಡೌನ್‌ನಲ್ಲಿ ದೌರ್ಜನ್ಯ ಹೆಚ್ಚಾಗಿದೆ
ಮಾರ್ಚ್ 23ರಿಂದ ಸೆಪ್ಟೆಂಬರ್ 20ರ ವರೆಗೆ ಹೇರಲಾಗಿದ್ದ ಲಾಕ್‌ಡೌನ್‌ ಸಂದರ್ಭ ಮಹಿಳೆಯರ ಮೇಲಿನ ದೌರ್ಜನ್ಯದ 13,410 ದೂರುಗಳು ದಾಖಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಸೆಪ್ಟಂಬರ್ 23ರಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಗರಿಷ್ಠ 5,470 ದೂರುಗಳು ಕೇಳಿಬಂದಿವೆ. ಬಳಿಕದ ಸ್ಥಾನದಲ್ಲಿ ದಿಲ್ಲಿ 1,697, ಮಹಾರಾಷ್ಟ್ರ 865 ಮತ್ತು ಹರಿಯಾಣ 731ನಿಂದ ದೂರುಗಳು ಬಂದಿವೆ. ಇಂತಹ ಪ್ರಕರಣಗಳನ್ನು ವರದಿ ಮಾಡಲು ಸಚಿವಾಲಯ ವಾಟ್ಸಾಪ್ ಸಂಖ್ಯೆ 7217735372 ನೀಡಿದ್ದು, ಈ ಕುರಿತು 1,443 ಪ್ರಕರಣಗಳು ಎಪ್ರಿಲ್ 10ರಿಂದ ಸೆಪ್ಟೆಂಬರ್ 20ರ ವರೆಗೆ ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next