ನವದೆಹಲಿ: ಆರ್ ಎಸ್ ಎಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಮೂರನೇ ವರ್ಷದ ಶಿಕ್ಷಾರ್ಥಿಗಳ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ರಾಷ್ಟ್ರೀಯತೆ, ದೇಶಭಕ್ತಿ ಬಗ್ಗೆ ಪಾಠ ಮಾಡಿದ್ದ ಬೆನ್ನಲ್ಲೇ ಪ್ರಣಬ್ ಅವರ ತಿರುಚಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ ಈ ಬಗ್ಗೆ ಅವರ ಪುತ್ರಿ ಆರ್ ಎಸ್ ಎಸ್,ಬಿಜೆಪಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ವೈರಲ್ ಆಗಿದ್ದೇನು?
ಆರ್ ಎಸ್ ಎಸ್ ಶಿಕ್ಷಾರ್ಥಿಗಳ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಣಬ್ ಮುಖರ್ಜಿ ಅವರು ತಲೆಗೆ ಕಪ್ಪು ಬಣ್ಣದ ಟೋಪಿ ಧರಿಸಿ, ಆರ್ ಎಸ್ ಎಸ್ ಶೈಲಿಯಲ್ಲಿ ಕೈಯನ್ನು ಎದೆಮಟ್ಟಕ್ಕೆ ಇಳಿಸಿ ವಂದಿಸಿರುವ ನಕಲಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಯಾವ ಟೋಪಿಯನ್ನಾಗಲಿ, ಯಾವ ಸೆಲ್ಯೂಟ್ ಅನ್ನು ಮಾಡಿರಲಿಲ್ಲವಾಗಿತ್ತು. ಆದರೆ ತಿರುಚಿರುವ ನಕಲಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ.
ನಾನು ಮೊದಲೇ ಹೇಳಿದ್ದೆ, ಈಗ ನೋಡಿ: ಪ್ರಣಬ್ ಪುತ್ರಿ
ನಕಲಿ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ಪ್ರಣಬ್ ಮುಖರ್ಜಿ ಪುತ್ರಿ, ದೆಹಲಿ ಕಾಂಗ್ರೆಸ್ ನ ವಕ್ತಾರರಾದ ಶರ್ಮಿಷ್ಠಾ ಮುಖರ್ಜಿ, ನೋಡಿ ಈಗ ಏನಾಗಿದೆ ಅಂತ..ನಾನು ಊಹಿಸಿದ್ದು ನಿಜವಾಗಿದೆ. ನೀವು ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋದರೆ ಈ ರೀತಿ ಏನಾದರೂ ಮಾಡುತ್ತಾರೆ ಎಂದು ತಂದೆಗೆ ಎಚ್ಚರಿಸಿದ್ದೆ. ನನ್ನ ತಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲವು ಗಂಟೆಗಳು ಕಳೆದಿಲ್ಲ, ಅಷ್ಟರಲ್ಲಿಯೇ ಬಿಜೆಪಿ, ಆರ್ ಎಸ್ ಎಸ್ ತಮ್ಮ ಕೊಳಕು ಮನಸ್ಥಿತಿಯನ್ನು ಬಹಿರಂಗ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.