Advertisement

RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ

12:40 PM Jan 15, 2025 | Team Udayavani |

ನವದೆಹಲಿ: ”ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ದೇಶಕ್ಕೆ ನಿಜಾರ್ಥದಲ್ಲಿ ಸ್ವಾತಂತ್ರ್ಯ ದೊರಕಿತು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದ್ದು ”ಇದು ದೇಶದ್ರೋಹಿ ಹೇಳಿಕೆ” ಎಂದಿದ್ದಾರೆ.

Advertisement

ಬುಧವಾರ(ಜ15)  ನೂತನ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ಭವನ ಉದ್ಘಾಟನೆ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ”ಭಾಗವತ್ ಅವರ ಹೇಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ” ಎಂದು ಹೇಳಿದರು.

”ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ವಿರುದ್ಧ 2-3 ದಿನಗಳಿಗೊಮ್ಮೆ ಹೇಳಿಕೆ ನೀಡುವ ಧೈರ್ಯವನ್ನು ತೋರುತ್ತಿದ್ದಾರೆ. ಅವರು ನಿನ್ನೆ ಹೇಳಿದ್ದು ದೇಶದ್ರೋಹವಾಗಿದೆ, ಅವರ ಪ್ರಕಾರ ಸಂವಿಧಾನ ಅಸಿಂಧು, ಬ್ರಿಟಿಷರ ವಿರುದ್ಧದ ಹೋರಾಟ ಅಸಿಂಧು. ಬೇರೆ ಯಾವುದೇ ದೇಶದಲ್ಲಿ ಇದನ್ನು ಸಾರ್ವಜನಿಕವಾಗಿ ಹೇಳುವ ಧೈರ್ಯ ತೋರಿದರೆ ಅಂತಹವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ” ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಭಾಗವತ್ ಅವರು ”ಭಾರತವು ನಿಜವಾದ ಸ್ವಾತಂತ್ರ್ಯ’ವನ್ನು ಸಾಧಿಸಿದೆ. ಈ ದಿನವನ್ನು “ಪ್ರತಿಷ್ಠಾ ದ್ವಾದಶಿ” ಎಂದು ಆಚರಿಸುವಂತೆಯೂ ಸಲಹೆ ನೀಡಿದ್ದರು. ಆ ಬಳಿಕ ಅನೇಕರು ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.