Advertisement

ಪ್ರವಾಸಿ ತಾಣ, ದೇಗುಲಗಳಲ್ಲಿ ಹೆಚ್ಚಿದ ಮಹಿಳಾ “ಶಕ್ತಿ’

03:32 PM Jul 05, 2023 | Team Udayavani |

ಮೈಸೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಂಡ ನಂತರ ಮೈಸೂರು ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಆಗಮಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.

Advertisement

ದೂರದ ಊರುಗಳಿಂದ ಅದರಲ್ಲೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಾಮುಂಡಿಬೆಟ್ಟ ಹಾಗೂ ಶ್ರೀಕಂಠೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.

ಮಹಿಳಾ ಭಕ್ತರಿಂದ ವಿಶೇಷ ಪೂಜೆ ಸಲ್ಲಿಕೆ: ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶಕ್ತಿ ಯೋಜನೆ ಜಾರಿ ನಂತರ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ದೇವಸ್ಥಾನದ ಆದಾಯ ಶೇ.5 ರಿಂದ 10 ಹೆಚ್ಚಾಗಿರಬಹುದು. ಹುಂಡಿ ಕಾಣಿಕೆ ಎಣಿಕೆ ನಂತರ ದೇವಸ್ಥಾನದ ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂಬುದು ಗೊತ್ತಾಗಲಿದೆ ಎಂದು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಜರಾಯಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಚಾಮುಂಡಿಬೆಟ್ಟಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡು ಬಂದಿದೆ ಎನ್ನುತ್ತಾರೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌.

ಪ್ರಸಾದ ಮಾರಾಟದಲ್ಲೂ ಹೆಚ್ಚಳ: ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಕ್ತಿ ಯೋಜನೆ ಜಾರಿ ನಂತರ ಲಾಡು ಪ್ರಸಾದದ ಮಾರಾಟದಲ್ಲಿಯೂ ಹೆಚ್ಚಳ ಕಂಡು ಬಂದಿದೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮಹಿಳಾ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಸೋಮವಾರ ಹಾಗೂ ಹುಣ್ಣಿಮೆ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ನಂತರ ದೇವಸ್ಥಾನಕ್ಕೆ ವಾರದ ಎಲ್ಲಾ ದಿನಗಳೂ ಅದರಲ್ಲೂ ಸೋಮವಾರ ಹಾಗೂ ಹುಣ್ಣಿಮೆ ದಿನಗಳಂದು ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ.

Advertisement

ಮಹಿಳಾ ಭಕ್ತರು ಹೆಚ್ಚಳ: ದೇವಸ್ಥಾನಕ್ಕೆ ಮೊದಲಿಗೆ ಹೋಲಿಸಿದರೆ ಈಗ ಶೇ.40 ರಿಂದ 50 ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಗುರುಪೂ ರ್ಣಿಮೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು ಎಂದು ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಎಕ್ಸಿಕ್ಯೂಟಿವ್‌ ಆμàಸರ್‌ ಎಂ.ಜಗ ದೀಶ್‌ಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

ದೇಗುಲದ ಹುಂಡಿಯನ್ನು ಇನ್ನೂ ತೆರೆದು ಎಣಿಕೆ ಮಾಡಿಲ್ಲ. ಹುಂಡಿ ತೆರೆದು ಕಾಣಿಕೆ ಎಣಿಕೆ ಮಾಡಿದಾಗ ಆದಾಯದ ಹೆಚ್ಚಳದ ಬಗ್ಗೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ತಿ.ನರಸೀಪುರ ತಾಲೂಕಿನ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಈಗ ಎಂದಿನಂತೆಯೇ ಭಕ್ತರು ಆಗಮಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ತಿ.ನರಸೀಪುರ ತಾಲೂಕಿನ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿ.ನರಸೀಪುರ ತಾಲೂಕಿನ ತಹಶೀಲ್ದಾರ್‌ ಸಿ.ಜಿ.ಗೀತಾ ಹೇಳುತ್ತಾರೆ.

ಈ ಬಾರಿ ಅರಮನೆಗೆ ಹೆಚ್ಚಿನ ಪ್ರವಾಸಿಗರು ಭೇಟಿ:

ಮೈಸೂರು: ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಮೈಸೂರು ಜಿಲ್ಲೆ ಪ್ರಮುಖ ದೇವಸ್ಥಾನಗಳಲ್ಲದೇ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮೈಸೂರು ಅರಮನೆಯನ್ನು ಕಳೆದ ಜೂನ್‌ನಲ್ಲಿ 3,04,790 ಮಂದಿ ವೀಕ್ಷಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ 2,36,046 ಮಂದಿ ಅರಮನೆಯನ್ನು ವೀಕ್ಷಿಸಿದ್ದರು. ಅಂದರೆ, ರಾಜ್ಯದಲ್ಲಿ ಜೂನ್‌ನಲ್ಲಿ ಶಕ್ತಿ ಯೋಜನೆ ಜಾರಿ ನಂತರ ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಮೈಸೂರು ಅರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿರುವುದು ಕಂಡು ಬಂದಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೂ ಕಳೆದ ಜೂನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಭೇಟಿ ನೀಡಿದ್ದಾರೆ. ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.10 ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ತಿಳಿಸಿದ್ದಾರೆ.

ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ನಂತರ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ವಾರದ ಎಲ್ಲಾ ದಿನ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಿದೆ. ಈಗ ಶೇ.40-50 ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ● ಎಂ.ಜಗದೀಶ್‌ಕುಮಾರ್‌, ಎಕ್ಸಿಕ್ಯೂಟಿವ್‌ ಆಫೀಸರ್‌, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ.

ಶಕ್ತಿ ಯೋಜನೆ ಜಾರಿಗೂ ಮುನ್ನ ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ ಪುರುಷರು ಹಾಗೂ ಮಹಿಳೆಯರು 4,05 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ ಈ ಸಂಖ್ಯೆ 4,65ಲಕ್ಷಕ್ಕೇರಿದೆ. ಅಂದರೆ, ಪ್ರತಿದಿನ ಸುಮಾರು 60 ಸಾವಿರ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದೆ. -ಬಿ.ಶ್ರೀನಿವಾಸ, ವಿಭಾಗೀಯ ನಿಯಂತ್ರಣಾಧಿಕಾರಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮೈಸೂರು ವಿಭಾಗ

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next