Advertisement

ನೀರಾವರಿ ಪ್ರದೇಶದಲ್ಲೂತಪ್ಪದ ಬವಣೆ

10:26 AM Feb 22, 2019 | Team Udayavani |

ಸಿಂಧನೂರು: ಬಿಸಿಲೂರು, ಸತತ ಬರಕ್ಕೆ ತುತ್ತಾಗುವ ಸಿಂಧನೂರು ತಾಲೂಕಿನ ಬಹುತೇಕ ಹಳ್ಳಿಗಳು ತುಂಗಭದ್ರಾ ಎಡದಂಡೆ ವ್ಯಾಪ್ತಿಗೆ ಒಳಪಟ್ಟರೂ ಕೂಡ ಪ್ರತಿ ವರ್ಷ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪುತ್ತಿಲ್ಲ.

Advertisement

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವರ್ಷ ಪೂರ್ತಿ ಕಾಲುವೆ ನೀರನ್ನೇ ಅವಲಂಬಿಸಿರುವ ಜನರು ಬೇಸಿಗೆ ಬಂದರೆ ಸಮಸ್ಯೆಗೆ ಸಿಲುಕುತ್ತಾರೆ. ಹನಿ ನೀರಿಗೂ ಬೆವರು ಹರಿಸುತ್ತಾರೆ. ಬೆವರು ಸಿಕ್ಕರೂ ನೀರು ಸಿಕ್ಕದು ಎಂಬ ಮಾತು ತುರುವಿಹಾಳ ಸುತ್ತಮುತ್ತಲಿನ ಗ್ರಾಮಸ್ಥರದು.

ತಾಲೂಕಿನ ಗೊಲ್ಲರಹಟ್ಟಿ, ಕರುಡ ಚಿಲುಮೆ, ಭೋಗಾಪುರ, ರತ್ನಾಪುರಹಟ್ಟಿ, ಬುಕನಟ್ಟಿ, ಹತ್ತಿಗುಡ್ಡ, ಚಿಕ್ಕಬೇರ್ಗಿ, ಹಿರೇಬೇರ್ಗಿ, ಉಮಲೂಟಿ, ಕಲ್ಮಂಗಿ, ತುರುವಿಹಾಳ, ಹಂಪನಾಳ, ಬಪ್ಪೂರ, ಗುಡಿಹಾಳ ಸೇರಿದಂತೆ ಇತರೆ ಕುಗ್ರಾಮಗಳಲ್ಲಿ ಅಭಿವೃದ್ದಿಗೆ ಬರ, ಸಮಸ್ಯೆಗಳು ಭರಪೂರ ಎಂಬಂತಾಗಿದೆ. 

ಅಂತರ್ಜಲಮಟ್ಟ ಕುಸಿತದಿಂದ ಇಲ್ಲಿನ ಕೈಪಂಪ್‌, ಕೊಳವೆಬಾವಿಗಳಲ್ಲಿ ಫ್ಲೋರೈಡ್‌ ಅಂಶವಿರುವ ನೀರೇ ಬೀಳುತ್ತಿದೆ. ಈ ನೀರು ಸೇವಿಸಿ ಅನೇಕರು ಕಾಯಿಲೆಗೆ ತುತ್ತಾಗುವುದು ಸಾಮಾನ್ಯವಾಗಿದೆ. ಹಂಪನಾಳ ಗ್ರಾಮದಲ್ಲಿ ಈ ಹಿಂದೆ ಬೇಸಿಗೆಯ ಮಾರ್ಚ್‌ ತಿಂಗಳಲ್ಲಿ ಕಲುಷಿತ ನೀರು ಸೇವನೆಯಿಂದ ನೂರಾರು ಜನರು ಆಸ್ಪತ್ರೆ ಸೇರಿದ ಉದಾಹರಣೆ ಇದೆ. ಆದರೆ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬಹುತೇಕ ಹಳ್ಳಿಗಳಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ.

ಜಾನುವಾರುಗಳಿಗೆ ಮೇವು ಸಂಗ್ರಹ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಎದುರಾಗುವ ಮೇವಿನ ಕೊರತೆ ನೀಗಿಸಲು ತಾಲೂಕಿನ ಜವಳಗೇರಾ ಸಮೀಪದ ಸಿ.ಎಸ್‌.ಎಫ್‌. ಕ್ಯಾಂಪ್‌ ನಲ್ಲಿ 800 ಟನ್‌ ಮೇವು ಸಂಗ್ರಹಿಸಲಾಗಿದೆ. ಗೋನವಾರ, ಕಲಮಂಗಿ, ಗುಂಡಾ ಗ್ರಾಮಗಳ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಮೇವು ಬ್ಯಾಂಕ್‌ ಪ್ರಾರಂಭಿಸಲು ಯೋಗ್ಯ ಸ್ಥಳ ಗುರುತಿಸಿ ಮೇವು ಸಂಗ್ರಹ ಮಾಡಲಾಗಿದೆ.

Advertisement

ಸಿಂಧನೂರು ನಗರ: ಸಿಂಧನೂರು ನಗರದಲ್ಲಿ 31 ವಾರ್ಡಗಳಿದ್ದು, ಪಟ್ಟಣಕ್ಕೆ ಕೆರೆ ನೀರು ಪೂರೈಸಲಾಗುತ್ತಿದೆ. ಈಗಾಗಲೇ ಕುಡಿಯುವ ನೀರಿನ ದೊಡ್ಡ ಕೆರೆ ಬಿರುಕು ಬಿಟ್ಟಿರುವುದರಿಂದ ಜನರು ನೀರಿನ ತೊಂದರೆಯಾಗಬಹುದೆಂಬ ಆಲೋಚನೆಯಲ್ಲಿದ್ದಾರೆ. ನಗರಸಭೆಯು ಈಗಾಗಲೇ ಕುಡಿಯುವ ನೀರಿಗಾಗಿ ಸರ್ಕಾರಕ್ಕೆ 75 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದು, 35 ಲಕ್ಷ ರೂ. ಬಿಡುಗಡೆ ಮಾಡಿದೆ. ಮತ್ತೂಂದು ಕೆರೆ ತುರ್ವಿಹಾಳ ಹತ್ತಿರ ನಿರ್ಮಿಸಿ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಒಟ್ಟು 8160 ನಲ್ಲಿಗಳು ಇದ್ದು, ಬೇಸಿಗೆ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ನೀರು ಪೂರೈಸುವ ಚಿಂತನೆಯಲ್ಲಿ ನಗರಸಭೆ ಇದೆ.

ತಾಲೂಕಿನಲ್ಲಿವೆ 178 ಕೆರೆ ಸಿಂಧನೂರು ತಾಲೂಕಿನಾದ್ಯಂತ 31 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 178 ಕುಡಿಯುವ ನೀರಿನ ಕೆರೆಗಳಿವೆ. ಈ ಪೈಕಿ ಗುಂಡಾ, ಆರ್‌.ಎಚ್‌.ನಂ.2, ಕನ್ನಾರಿ, ಒಳಬಳ್ಳಾರಿ, ಎಸ್‌ಸಿ ಕಾಲೋನಿ, ಗಾಂಧಿ ನಗರ, ಭೂತಲದಿನ್ನಿ, ದಡೇಸುಗೂರು, ಎಲೆಕೂಡ್ಲಿಗಿ, ಉಮಲೂಟಿ ಸೇರಿ 11 ಕೆರೆಗಳು ದುರಸ್ತಿಗೀಡಾಗಿವೆ. ಇದಕ್ಕೆ ಪರ್ಯಾಯವಾಗಿ ಮತ್ತೂಂದು ಕಡೆ ನೀರು ಸಂಗ್ರಹಿಸಲು ಖಾಸಗಿ ಕೆರೆಗಳಿಂದ ನೀರು ಕೊಡಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಒಟ್ಟು ಕುಡಿಯುವ ನೀರಿನ ಯೋಜನೆಗೆ 1 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುದ್ಧ ನೀರು ಘಟಕ ತಾಲೂಕಿನಲ್ಲಿ ಒಟ್ಟು 134 ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಸುಮಾರು 25ಕ್ಕೂ ಹೆಚ್ಚು ಘಟಕಗಳು ಹಾಳಾಗಿವೆ. ಖಾಸಗಿ ಕಂಪನಿಯವರಿಗೆ ನಿರ್ವಹಣೆ ಕೊಟ್ಟಿದ್ದು, ಅವರು ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಗ್ರಾಮಗಳಲ್ಲಿ ಶುದ್ಧ ನೀರಿನ ಸಮಸ್ಯೆ ಉಲ್ಬಣಿಸಿದೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗ ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಯೋಜನೆಗಾಗಿ ಸರ್ಕಾರ 1 ಕೋಟಿ ರೂ. ಮೀಸಲಿಟ್ಟಿದೆ. ಹಾಗೂ 800 ಟನ್‌ ಮೇವು ಸಂಗ್ರಹಿಸಲಾಗಿದೆ. ಹಳ್ಳಿಗಳಲ್ಲಿ ದುರಸ್ತಿಗೀಡಾದ
ಕೊಳವೆಬಾವಿ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
 ವೆಂಕಟರಾವ್‌ ನಾಡಗೌಡ, ಸಚಿವರು 

ಕಳೆದ ಬೇಸಿಗೆ ಯಲ್ಲಿ ಕೆಲ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಈ ಬಾರಿ ಆ ಕೆಲಸ ಆಗುವುದಿಲ್ಲ. ನಮ್ಮ ಇಲಾಖೆಯಿಂದ ಎಲ್ಲ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಖಾಸಗಿ ಕೆರೆಯವರಿಗೆ 10 ಸಾವಿರ ರೂ. ಕೊಟ್ಟು ಕೆರೆ ಇಲ್ಲದ ಗ್ರಾಮದವರಿಗೆ ನೀರಿನ ವ್ಯವಸ್ಥೆ ಮಾಡಿಸಲಾಗಿದೆ.
ಬಾಬು ರೋಠೊಡ್‌, ತಾಪಂ ಇಒ, ಸಿಂಧನೂರು

ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ದೊಡ್ಡ ಕೆರೆ ಸ್ವಲ್ಪ ಬಿರುಕು ಬಿಟ್ಟಿರುತ್ತದೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆರು ದಿನಕ್ಕೆ ಒಂದು ಸಲ ನೀರು ಬಿಡುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಕುಡಿಯುವ ನೀರಿನ ಸಲುವಾಗಿ 35 ಲಕ್ಷ ರೂ. ಹಣ ಮಂಜೂರಾಗಿದೆ.
ಆರ್‌. ವಿರೂಪಾಕ್ಷ ಮೂರ್ತಿ, ನಗರಸಭೆ ಪೌರಾಯುಕ 

ನದಿ ಹಾಗೂ ಹಳ್ಳದ ದಂಡೆ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ. ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 15 ದಿನಗಳ ಕಾಲ ಮತ್ತೆ ಸಂಬಂಧಪಟ್ಟ ಗ್ರಾಮಗಳಿಗೆ ತೆರಳಿ ಗ್ರಾಮಸಭೆ ನಡೆಸುತ್ತೇವೆ. ಬೋರ್‌ವೆಲ್‌ಗ‌ಳ ಬಗ್ಗೆ ಕ್ರಮ ವಹಿಸಲು ಸಿಬ್ಬಂದಿಗೆ ಸೂಚಿಸಿದ್ದೇವೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ.
ಶಿವಾನಂದ ಸಾಗರ, ತಹಶೀಲ್ದಾರ್‌

ತುರ್ವಿಹಾಳ ಪಟ್ಟಣ ಪಂಚಾಯಿತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಹುದಿನದ ಕನಸಾದ ಕನಕ ನಾಲಾ ಯೋಜನೆ ಜಾರಿಯಾಗದ್ದರಿಂದ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಂದ ನರಳುವಂತಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ ಕಾರಣ. 
 ರವಿಗೌಡ ಮಲ್ಲದಗುಡ್ಡ, ರೈತ ಹೋರಾಟಗಾರ

ಸಂಕನಾಳ ಸುತ್ತಮುತ್ತಲಲ್ಲಿನ ಇದುವರೆಗೆ ಕೊಳವೆಬಾವಿ ಕೊರೆದಿಲ್ಲ. ನಮ್ಮ ಭಾಗದ 5ರಿಂದ 7 ಹಳ್ಳಿಗಳಲ್ಲಿ ನಿತ್ಯ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಗುಂಡಾ ಗ್ರಾಮದಲ್ಲಿ ಇದುವರೆಗೂ ಕುಡಿಯುವ ನೀರಿನ ಕೆರೆ ನಿರ್ಮಿಸಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
 ಮಹಾಂತೇಶ ಸಂಕನಾಳ, ಸಮಾಜ ಸೇವಕ

„ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next