ಜಾಲಹಳ್ಳಿ: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದು, ಹೆಸರು ನೋಂದಣಿಗೆ ರೈತರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದು, ಸುಮಾರು ಮೂರು ಸಾವಿರ ಗಡಿ ದಾಟುವ ಲಕ್ಷಣ ಇದೆ.
ತೊಗರಿ ಬೆಳೆದ ರೈತರು ಪಹಣಿ ಪತ್ರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಬೆಳೆ ದೃಢೀಕರಣ ಪತ್ರ ಸೇರಿ ಇತರೆ ದಾಖಲಾತಿಗಳನ್ನು ನೀಡಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಬೇಕೆಂದು ಸರ್ಕಾರ ಆದೇಶಿಸಿದೆ. ಹೀಗಾಗಿ ರೈತರು ಹೆಸರು ನೋಂದಣಿಗೆ ಮುಗಿಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಯಿತು.
ಜಾಲಹಳ್ಳಿ ಹೋಬಳಿ ವ್ಯಾಪ್ತಿಯ 40ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಸಾವಿರಾರು ರೈತರು ತೊಗರಿ ಬೆಳೆದಿದ್ದಾರೆ. ಸರಕಾರ ಇಡೀ ಹೋಬಳಿಯಲ್ಲಿ ಒಂದೇ ಖರೀದಿ ಕೇಂದ್ರ ಆರಂಭಿಸಿದೆ. ಒಂದು ಪಹಣಿಗೆ 10 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು ಎಂದು ನಿಯಮ ಹೇರಿದೆ. ಹೀಗಾಗಿ 10 ಕ್ವಿಂಟಾಲ್‌ಗಿಂತ ಹೆಚ್ಚು ತೊಗರಿ ಬೆಳೆದ ರೈತರು ಬೇರೆಯವರ ದಾಖಲಾತಿಗಳನ್ನು ನೀಡಿ ಹೆಸರು ನೋಂದಣಿಗೆ ಮುಂದಾಗಿದ್ದು ನೂಕು ನುಗ್ಗಲಿಗೆ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಕ್ವಿಂಟಾಲ್ ತೊಗರಿಗೆ 4900 ರೂ. ದರ ಇದೆ. ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 6100 ದರದಲ್ಲಿ ಖರೀದಿಸಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ 1200 ರೂ. ಹೆಚ್ಚಿಗೆ ಸಿಗುವುದರಿಂದ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಮಾರಲು ಮುಂದಾಗುತ್ತಿದ್ದಾರೆ. ಆದರೆ ಸರಕಾರ ರೈತರ ಸಂಖ್ಯೆಗೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದರೆ ಅಥವಾ ಪಹಣಿಗೆ 10 ಕ್ವಿಂಟಾಲ್ ಎಂದು ನಿಗದಿಪಡಿಸದಿದ್ದರೆ ಈ ನೂಕುನುಗ್ಗಲು ಇರುತ್ತಿರಲಿಲ್ಲ ಎಂದು ರೈತರು ಹೇಳಿದರು.
ಆಗ್ರಹ: ದಾಖಲಾತಿಗಳಲ್ಲಿನ ಹೆಸರು, ಪಹಣಿಯಲ್ಲಿ ದಾಖಲಾದ ಬೆಳೆಗೂ ತಾಳೆಯಾಗದೇ ಇರುವುದು, ಕೆಲ ರೈತರ ಹೆಸರುಗಳು ತಹಶೀಲ್ದಾರ್ ಲಾಗಿನ್‌ಗೆ ಹೋಗಿದ್ದು, ಈ ಸಮಸ್ಯೆಯನ್ನು ತಹಶೀಲ್ದಾರರೇ ಪರಿಹರಿಸಬೇಕಿದ್ದರಿಂದ ರೈತರು ತಹಶೀಲ್ದಾರ್ ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ರೈತರಿಗೆ ಅನುಕೂಲ ಮಾಡುವ ಹೆಸರನಲ್ಲಿ ಇಲ್ಲದ ನಿಯಮಗಳನ್ನು ಹೇರಿ ಗೊಂದಲ ಉಂಟು ಮಾಡುತ್ತಿದೆ. ಇದರಿಂದ ರೈತರಿಗೆ ಸಹಾಯವಾಗುವ ಬದಲು ಮತ್ತಷ್ಟು ತೊಂದರೆಯಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಿ ಪ್ರತಿ ಪಹಣಿಗೆ 10 ಕ್ವಿಂಟಾಲ್ ಖರೀದಿಸುವ ನಿರ್ಬಂಧ ತೆಗೆದು ಹಾಕಬೇಕು. ದಾಖಲಾತಿಗಳಲ್ಲಿ ಸಣ್ಣಪುಟ್ಟ ದೋಷಗಳಿದ್ದರೂ ತೊಗರಿ ಖರೀದಿಗೆ ಅವಕಾಶ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.