ಬೆಳ್ಮಣ್: ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದ್ದು, ಪೇಟೆ ಬಹುತೇಕ ಸೀಲ್ ಡೌನ್ ಆಗಿದೆ.
ಕೋವಿಡ್ -1 ಸೋಂಕು ಕಂಡುಬಂದಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರೆಲ್ಲರಿಗೂ ಸೋಂಕು ದೃಢವಾಗುತ್ತಿದೆ. ಹೀಗಾಗಿ ಕಳೆದ ಒಂದು ವಾರದಲ್ಲಿ ಬೆಳ್ಮಣ್ ನಲ್ಲಿ ನೂರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಆದರೆ ಇವರಲ್ಲಿ ಬಹುತೇಕ ಸೋಂಕಿತರಿಗೆ ಯಾವುದೇ ಲಕ್ಷಣಗಳಿಲ್ಲ. ಸೋಂಕು ದೃಢವಾದ ಹೆಚ್ಚಿನವರು ಮನೆಯಲ್ಲಿಯೇ ಇದ್ದಾರೆ. ಆಶಾ ಕಾರ್ಯಕರ್ತೆಯರು ತಂದು ಕೊಡುವ ಮಾತ್ರೆ ಸೇವಿಸಿ ಮನೆಯಲ್ಲಿಯೇ ಇದ್ದಾರೆ.
ಬೆಳ್ಮಣ್ ಪೇಟೆ ಬಹುತೇಕ ಸೀಲ್ ಡೌನ್ ಆಗಿದೆ. ಈ ಮೊದಲು ವಿಜಯ ಬ್ಯಾಂಕ್ , ದೇವಸ್ಥಾನ ದ್ವಾರ ಭಾಗದಲ್ಲಿ ಸೀಲ್ ಡೌನ್ ಆಗಿದ್ದರೆ, ಈಗ ಉಡುಪಿ ರಸ್ತೆ, ಬಸ್ ನಿಲ್ದಾಣ ಭಾಗದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೀಲ್ ಡೌನ್ ಆಗಿದೆ. ಪೇಟೆಯ ಮುಕ್ಕಾಲು ಭಾಗ ಸೀಲ್ ಡೌನ್ ಆಗಿದ್ದು, ಉಳಿದ ಕಾಲು ಭಾಗ ಇಂದು ಸೀಲ್ ಡೌನ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೋಂಕು ಲಕ್ಷಣ ಇದ್ದರೆ ಕಷಾಯ, ಮಾತ್ರೆಗೆ ಇದು ಸಮಯವಲ್ಲ, ಕೂಡಲೇ ಪರೀಕ್ಷೆ ಮಾಡಿಸಿ: ಉಡುಪಿ ಡಿಸಿ
ಉಡುಪಿ ಜಿಲ್ಲೆಯಲ್ಲಿ ಗುರುವಾರ 248 ಜನರಿಗೆ ಕೋವಿಡ್ -19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4,143ಕ್ಕೆ ಏರಿಕೆಯಾಗಿದೆ. ಗುರುವಾರ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯ ಸೋಂಕಿತರ ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.