Advertisement

ರಸ್ತೆ ದುರಸ್ತಿಗಿಂತ ಅಗೆತವೇ ಹೆಚ್ಚು!

03:21 PM May 19, 2017 | Team Udayavani |

ಹುಬ್ಬಳ್ಳಿ: ಉತ್ತಮ ರಸ್ತೆಗಳಲ್ಲಿ ಓಡಾಡಬೇಕೆಂಬ ಮಹಾನಗರದ ಜನರ ಕನಸು ಸದ್ಯಕ್ಕಂತೂ ನನಸಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಳಚರಂಡಿ ಕಾಮಗಾರಿ, 24/7 ಕುಡಿಯುವ ನೀರು ಪೂರೈಕೆ ಯೋಜನೆ, ಬಿಆರ್‌ಟಿಎಸ್‌, ಅಡುಗೆ ಅನಿಲ ಪೈಪ್‌ಲೈನ್‌ ಜೋಡಣೆ ಯೋಜನೆಗಳಿಂದಾಗಿ ರಸ್ತೆಗಳ ಸ್ಥಿತಿ ಅಧ್ವಾನವಾಗಿದೆ.

Advertisement

ಮಹಾನಗರದ ಪ್ರಥಮ ಪ್ರಜೆ ಡಿ.ಕೆ. ಚವ್ಹಾಣ ಅವರ ವಾರ್ಡ್‌ ಕೂಡ ಇದಕ್ಕೆ ಹೊರತಾಗಿಲ್ಲ. ಒಂದಾದ ಮೇಲೊಂದು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿರುವ ಕಾರಣ ರಸ್ತೆಗಳಲ್ಲಿ ತಗ್ಗು ತೋಡುವ ಕಾರ್ಯ ನಿರಂತರವಾಗಿದೆ. ಅವಳಿನಗರ ಸ್ಮಾರ್ಟ್‌ ಸಿಟಿ ಆಗುವತ್ತ ಹೆಜ್ಜೆ ಹಾಕುತ್ತಿದ್ದರೂ, ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚಲು ಮಾತ್ರ ಪಾಲಿಕೆ ಮುಂದಾಗುತ್ತಿಲ್ಲ.

ಅವಳಿ ನಗರದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ರಸ್ತೆ ಅಗೆತ ಮಾಡಲಾಗುತ್ತದೆ. ರಸ್ತೆ ಅಗೆತಕ್ಕೆ ಪಾಲಿಕೆ ನಿರ್ದಿಷ್ಟ ಶುಲ್ಕ ಭರಿಸಿಕೊಂಡಿರುತ್ತದೆ. ಆದರೆ ಕಾಮಗಾರಿ ಮುಗಿದರೂ ಶುಲ್ಕ ಭರಿಸಿಕೊಂಡ ಪಾಲಿಕೆ ಮಾತ್ರ ಸಂಬಂಧವೇ ಇಲ್ಲದವರಂತೆ ವರ್ತಿಸಿ, ರಸ್ತೆ ದುರಸ್ತಿಯನ್ನು ಕಡೆಗಣಿಸಿದೆ. 

ರಸ್ತೆಯೆಲ್ಲ ಹೊಂಡಮಯ: ಮಹಾಪೌರ ಡಿ.ಕೆ. ಚವ್ಹಾಣ ಅವರು ಪ್ರತಿನಿಧಿಸುವ ಇಲ್ಲಿನ ಜನತಾ ಬಜಾರ್‌ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರು ಪರಿತಪಿಸುತ್ತಿದ್ದರೂ, ಪಾಲಿಕೆಯಿಂದ ಯಾವುದೇ ಸ್ಪಂದನೆ ಇಲ್ಲ. ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಿಂದ ಅನತಿ ದೂರದಲ್ಲಿರುವ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗೆಂದು ರಸ್ತೆ ಅಗೆಯಲಾಯಿತು.

ಕಾಮಗಾರಿ ಮುಗಿದ ಮೇಲೆ ಅಲ್ಲಿ ತೇಪೆ ಕಾರ್ಯ ಮಾಡದೆ ಹಾಗೇ ಬಿಟ್ಟಿದ್ದು, ಆ ಸ್ಥಳ ಡಾಂಬರ್‌ ರಸ್ತೆಗಿಂತ ಅರ್ಧ ಅಡಿಗೂ ಹೆಚ್ಚು ಕುಸಿದಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವ ಸ್ಥಿತಿ ನಿರ್ಮಾಣವಾಗಿದೆ. 

Advertisement

ಕಟ್ಟಡದ ತಾಜ್ಯ ರಸ್ತೆಗಳ ಗುಂಡಿಗೆ: ಹಲವು ದಿನಗಳಿಂದ ಕೆಲವರು ಕಟ್ಟಡದ ತ್ಯಾಜ್ಯಗಳಾದ ಇಟ್ಟಂಗಿ, ಖಡಿಯನ್ನು ರಸ್ತೆ ಗುಂಡಿಗಳಿಗೆ ಹಾಕುವ ಮೂಲಕ ಅದನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಡಾಂಬರ್‌ ರಸ್ತೆಗೆ ತೇಪೆ ಕಾರ್ಯ ಮಾಡಲು ಮುಂದಾಗದ ಪಾಲಿಕೆಗೆ ಹಿಡಿ ಶಾಪ ಹಾಕುತ್ತಾ ದಿನನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ವಾಹನ ಸ್ಕಿಡ್‌ ಆಗಿ ಬಿದ್ದು ಸವಾರರು ಗಾಯಗೊಳ್ಳುತ್ತಿದ್ದಾರೆ. 

ಈ ಕುರಿತು ಸಂಬಂಧಪಟ್ಟವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡದ ತ್ಯಾಜ್ಯವನ್ನು ರಸ್ತೆಗೆ ಹಾಕುವ ಮೂಲಕ ಸಮತಟ್ಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. 

* ಬಸವರಾಜ ಹೂಗಾರ 

Advertisement

Udayavani is now on Telegram. Click here to join our channel and stay updated with the latest news.

Next