ಬೆಂಗಳೂರು: “ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಈವರೆಗೂ 70 ಸಾವಿರಕ್ಕೂ ಅಧಿಕ ಸಲಹೆಗಳು ಸ್ವೀಕಾರವಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರನ್ನು ಸಂಚಾರಯುಕ್ತ, ಹಸಿರು, ಸ್ವತ್ಛ, ಜನರಹಿತ, ಆರೋಗ್ಯಕರ, ಟೆಕ್ ಮತ್ತು ಜಲಸುರಕ್ಷಾ ವಿಭಾಗದಲ್ಲಿ ಬದಲಾವಣೆಗೆ ಆರಂಭಿಸಿರುವ ಯೋಜನೆಯಡಿ ನಾಗರಿಕರು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಸೇರಿ ವಿವಿಧ ವಲಯಗಳಿಗೆ ಬಗೆಬಗೆಯ ಅಭಿಪ್ರಾಯ ಮತ್ತು ಸಲಹೆ ಕೇಳಿಬಂದಿವೆ.
ಇದರಲ್ಲಿ ಸ್ವಚ್ಛ ಬೆಂಗಳೂರಿಗಾಗಿಯೇ 10,479 ಸಲಹೆಗಳು ಸ್ವೀಕೃತವಾಗಿವೆ. ತ್ಯಾಜ್ಯವನ್ನು ಗೊಬ್ಬರ ಮಾಡುವ ಕುರಿತು ನಾಗರಿಕರಿಗೆ ವಾರ್ಡ್ ಮಟ್ಟದಲ್ಲಿ ತರಬೇತಿ ಕಾಂಪೋಸ್ಟಿಂಗ್‌ಗೆ ಅಗತ್ಯವಿರುವ ವಸ್ತು ಗಳಿಗೆ ಸಹಾಯಧನ, ಪ್ರೋತ್ಸಾಹ ಒದಗಿಸಬೇಕು. ತ್ಯಾಜ್ಯ ಕೆಲಸಗಾರರು ವಿಷಕಾರಿ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಯಾಂತ್ರಿಕೃತ ಉಪಕರಣ ಅಳವಡಿಸಿಕೊಳ್ಳಬೇಕು ಸೇರಿದಂತೆ ಹಲವು ವಿಭಾಗದಲ್ಲಿ ಉಪಯುಕ್ತ ಸಲಹೆಗಳು ವ್ಯಕ್ತವಾಗಿವೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾರ್ಡ್ ಸಮಿತಿ ರಚಿಸಲಿ: ನೀರುಗಾಲುವೆಗಳಲ್ಲಿ ನಿಯಮಿತವಾಗಿ ಹೂಳು ತೆಗೆಯುವಿಕೆ, ವಾರ್ಡ್‌ವಾರು ಡಿಜಿಟಲ್ ವೇದಿಕೆ ನಿರ್ಮಾಣ ಮಾಡಬೇಕು. ವಾರ್ಡ್ ಮಟ್ಟದ ಯೋಜನೆಗಳಲ್ಲಿ ಜನರ ಜತೆ ಸಮಾಲೋಚಿಸಬೇಕು. ಸ್ಥಳೀಯ ನಾಯಕರ ಅಭಿವೃದ್ಧಿಗಾಗಿ ಯುವ ಸಮಿತಿ ಒಳಗೊಂಡಂತೆ ವಾರ್ಡ್ ಸಮಿತಿ ರಚಿಸಬೇಕು. ಕಾರ್ಯಕ್ಷಮತೆ ಅಳೆಯಲು, ಸಹಯೋಗದ ಸ್ಪರ್ಧೆ ಪೋ›ತ್ಸಾಹಿಸಲು ಸ್ಟೇಟ್ ಆಫ್ ವಾರ್ಡ್ ಮೆಟ್ರಿಕ್ ಅನುಷ್ಠಾನಕ್ಕೆ ತರಬೇಕೆಂದು ಸಲಹೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಯೋಜನೆ ಅನುಷ್ಠಾನಕ್ಕೆ ತನ್ನಿ: ವಾಣಿಜ್ಯ ಕಟ್ಟಡಗಳಿಗಾಗಿ ಇಂಧನ ಸಂರಕ್ಷಣೆ ಕಟ್ಟಡ ಸಂಕೇತಗಳಿಗೆ ಒತ್ತು ನೀಡಬೇಕು. ಮುನ್ಸಿಪಲ್ ಪ್ರಾಧಿಕಾರ, ಸ್ಮಾರ್ಟ್ ಸಿಟಿ ಮಿಷನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿ ಬಂದಿದೆ.
ಪರಿಸರ, ಗಾಳಿಯ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ವೈಯಕ್ತಿಕ ವಾಹನಗಳ ಬಳಕೆ ಯಿಂದ ಆಗುವ ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು ಎಂಬುವುದು ಸೇರಿ ಹಲವು ಸಲಹೆ ಗಳು ಬ್ರ್ಯಾಂಡ್ ಬೆಂಗಳೂರಿಗಾಗಿ ಸ್ವೀಕಾರವಾಗಿದೆ.