Advertisement

650 ಕೆ.ಜಿ.ಗೂ ಹೆಚ್ಚು ಪ್ಲಾಸ್ಟಿಕ್‌ ವಶ

09:32 PM Oct 15, 2019 | Team Udayavani |

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಮುಖ್ಯ ರಸ್ತೆಗಳಲ್ಲಿರುವ ಅಂಗಡಿಗಳ ಮೇಲೆ ಪೌರಾಯುಕ್ತ ನಾಗಶೆಟ್ಟಿ ಮತ್ತು ಸಿಬ್ಬಂದಿವಗ ದಿಢೀರ್‌ ದಾಳಿ ನಡೆಸಿ ಅಂಗಡಿಗಳಲ್ಲಿ ಬಚ್ಚಿಟ್ಟಿದ್ದ 650 ಕೆ.ಜಿ.ಗೂ ಹೆಚ್ಚು ಪ್ಲಾಸ್ಟಿಕ್‌ಗಳನ್ನು ಮಂಗಳವಾರ ವಶಪಡಿಸಿಕೊಂಡರು.

Advertisement

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಕೂಡಲೇ ಪಟ್ಟಣಾದ್ಯಂತ ಅಂಗಡಿ, ಹೋಟೆಲ್‌ ಮತ್ತು ಬಟ್ಟೆ ಅಂಗಡಿಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಭರಾಟೆಯಾಗಿಯೇ ನಡೆಯುತ್ತಿದ್ದು, ಕೂಡಲೇ ದಾಳಿ ನಡೆಸಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡಬೇಕೆಂದು ನೀಡಿದ ನಿರ್ದೆಶನದ ಮೆರೆಗೆ ಕಾರ್ಯಪ್ರವೃತ್ತರಾದ ಪೌರಾಯುಕ್ತರು ದಾಳಿ ನಡೆಸಿ ಅಂಗಡಿಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಎಲ್ಲಾ ಬಗೆಯ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಪಟ್ಟಣದ ಪಾಂಡುರಂಗ ಟ್ರೇಡರ್ ಅಂಗಡಿ ಮೇಲೆ ದಾಳಿ ನಡೆಸಿ ಗೋದಾಮುಗಳಲ್ಲಿ ಇಡಲಾಗಿದ್ದ ವಿವಿಧ ಬಗೆಯ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ವರ್ತಕರ ಸಂಘದ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷ ಸತೀಶ್‌, ನಾರಾಯಣಮೂರ್ತಿ ಸೇರಿದಂತೆ ಹಲವಾರು ಮುಖಂಡರು ಪೌರಾಯುಕ್ತರ ದಾಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಮಗೆ ಕಾಲಾವಕಾಶ ನೀಡಬೇಕು ಮತ್ತು ತುರ್ತು ಸಭೆ ಕರೆದು ವರ್ತಕರಿಗೆ ನಿರ್ದೇಶನ ನೀಡಬೇಕು. ಯಾವುದೇ ತರಹದ ಮಾಹಿತಿ ನೀಡದೆ ಏಕಾಏಕಿ ದಾಳಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ತಕರ ಸಂಘದ ಪದಾಧಿಕಾರಿಗಳ ವರ್ತನೆ ವೀಕ್ಷಣೆ ಮಾಡಿದ ಪೌರಾಯುಕ್ತ ಈಗಾಗಲೇ ಎಲ್ಲಾ ತರಹದ ತಿಳಿವಳಿಕೆಯನ್ನು ನೀಡಲಾಗಿದೆ. ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅನಾವುತವನ್ನು ಮಾಧ್ಯಮಗಳ ಮೂಲಕ ಪ್ರತಿನಿತ್ಯ ಅರಿವು ಮೂಡಿಸಲಾಗುತ್ತಿದೆ. ಇಷ್ಟೆಲ್ಲಾ ಮಾಡಿದರೂ ಸಹ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಪ್ಲಾಸ್ಟಿಕ್‌ ಬಳಕೆ ಮಾಡುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಂತೆ ಸಂಘದ ಮುಖಂಡರು ಸುಮ್ಮನಾದರು.

ಸುದ್ದಿಗಾರರೊಂದಿಗೆ ಪೌರಾಯುಕ್ತ ನಾಗಶೆಟ್ಟಿ ಮಾತನಾಡಿ, ಕಳೆದ ಮೂರು ದಿನಗಳಿಂದ ನಿರಂತರ ದಾಳಿ ನಡೆಯುತ್ತಿದ್ದು, ಸುಮಾರು 650 ಕೆ.ಜಿ. ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಅಂಗಡಿ, ಹೋಟೆಲ್‌ ಮತ್ತು ಬಟ್ಟೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ.

Advertisement

ಸೂಚನೆ ಪಾಲನೆ ಮಾಡದೆ ನಿರ್ಲಕ್ಷಿಸಿದ ಪಕ್ಷದಲ್ಲಿ ಒಂದು ಸಾವಿರದಿಂದ ಒಂದು ಲಕ್ಷದವರೆಗೆ ದಂಡ ನೀಡುವ ಎಚ್ಚರಿಕೆ ನೀಡಲಾಗಿದೆ ಎಂದರು. ದಂಡಕ್ಕೆ ಎಚ್ಚೆತ್ತು ಕೊಳ್ಳದ ಪಕ್ಷದಲ್ಲಿ ಅಂತಥವರ ಮೇಲೆ ಕಾನೂನಿನ ರೀತ್ಯಾ ಕ್ರಮಕೈಗೊಳ್ಳುವುದಾಗಿ ಹೇಳಿದ ಪೌರಾಯುಕ್ತರು ಅಂಗಡಿ ಮಾಲೀಕರು ಪ್ಲಾಸ್ಟಿಕ್‌ ಬಳಕೆ ಮಾಡದೆ ಸರ್ಕಾರಿ ಆದೇಶ ಪಾಲನೆ ಮಾಡಬೇಕು ಎಂದು ಆದೇಶಿದರು.

ಇಡ್ಲಿ ತಯಾರಿಕೆಗೆ ಪಾಸ್ಟಿಕ್‌ ಬಳಕೆ: ನಗರಸಭೆ ವತಿಯಿಂದ ನಿರಂತರ ದಾಳಿ ನಡೆಸುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳದ ಹೋಟೆಲ್‌ ಮಾಲೀಕರು ಹಾಗೂ ಫ‌ುಟ್‌ಬಾತ್‌ ವ್ಯಾಪಾರಿಗಳು ಇಡ್ಲಿ ತಯಾರಿಸುವ ವೇಳೆ ಪ್ಲಾಸ್ಟಿಕ್‌ನ್ನು ನಿರಂತವಾಗಿ ಬಳಕೆ ಮಾಡಲಾಗುತ್ತಿದೆ. ಈಗಾಲಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ಬಳಕೆ ಮಾಡದೆ ಬಟ್ಟೆ ಬಳಕೆ ಮಾಡಿಕೊಂಡು ಇಡ್ಲಿ ತಯಾರು ಮಾಡಬೇಕೆಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ದಾಳಿಯಲ್ಲಿ ಆರೋಗ್ಯಾಧಿಕಾರಿ ಧನಂಜಯ, ಸಹಾಯಕ ಅಧಿಕಾರಿ ಭೂಮಿಕಾ, ಸಿಬ್ಬಂದಿ ಜಯಪಾಲ್‌ ಸಿಂಗ್‌, ಆನಂದ್‌, ಪ್ರಭಾಕರ್‌, ಚೆನ್ನಕೇಶವ, ಪ್ರದೀಪ್‌, ರಾಜಸ್ವ ನಿರೀಕ್ಷಕ ಪ್ರಕಾಶ್‌, ಪೊಲೀಸ್‌ ಸಿಬ್ಬಂದಿವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next